ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ 'ದರೋಜಿ ಕರಡಿಧಾಮ'ಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ

ಕರಡಿಧಾಮಕ್ಕೆ 25ರ ಹರೆಯ
Last Updated 21 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಕನ್ನಡ ನಾಡಿನ ಮೊದಲ ಕರಡಿಧಾಮ ಬಳ್ಳಾರಿ ಜಿಲ್ಲೆಯ ‘ದರೋಜಿ ಕರಡಿಧಾಮ’ಕ್ಕೀಗ 25ರ ಹರೆಯ. ಈ ಕಾಲು ಶತಮಾನದ ಪಯಣದಲ್ಲಿ ಕರಡಿಧಾಮದಲ್ಲಿ ಆಗಿರುವ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.

ಅದು 1987ನೇ ಇಸ್ವಿ. ಒಂದು ದಿನ ಸಂಜೆ ಹೊತ್ತಿನಲ್ಲಿ ಪೂಜಾರಿಯೊಬ್ಬರು ದರೋಜಿ ಸಮೀಪದ ಮಾರಮ್ಮ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದರು. ಆಗ ಅವರ ಮೇಲೆ ಕರಡಿ ದಾಳಿ ಮಾಡಿತು. ಅವರು ಸಾವನ್ನಪ್ಪಿದರು. ಈ ಘಟನೆ ಸುತ್ತಲಿನ ಜನರನ್ನು ದಿಗ್ಭ್ರಾಂತರನ್ನಾಗಿಸಿತು. ರಾತ್ರಿ ಹೊತ್ತು ಏಕಾಂಗಿಯಾಗಿ ಹೊರಗೆ ಓಡಾಡಲು ಜನ ಹೆದರುತ್ತಿದ್ದರು.

ಇದಾದ ನಂತರ ಎಲ್ಲಿ ಕರಡಿ ಕಂಡರೂ ಜನ ಗುಂಪು ಗುಂಪಾಗಿ ದಾಳಿ ನಡೆಸಲಾರಂಭಿಸಿದರು. ಕೆಲವು ಕಡೆ ಬೆಲ್ಲದಲ್ಲಿ ವಿಷ ಬೆರೆಸಿಟ್ಟು ಕೊಲ್ಲುವಂತಹ ಘಟನೆಗಳು ನಡೆದಿದ್ದು ಕೇಳಿಬಂತು. ಸತ್ತ ಕರಡಿಗಳನ್ನು ಸದ್ದಿಲ್ಲದೆ ಕಾಲುವೆಗೆ ಎಸೆಯುವಂತಹ ಪ್ರಕರಣಗಳು ಬೆಳಕಿಗೆ ಬಂದವು. ಹೀಗೆ ಕರಡಿಗಳ ಸಾವು ಸರಣಿ ರೂಪ ಪಡೆಯಿತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪರಿಸರ ಪ್ರೇಮಿಗಳು, ಸಂಡೂರಿನ ಶಾಸಕರಾಗಿದ್ದ ಯು. ಭೂಪತಿ ಅವರ ಗಮನಕ್ಕೆ ತಂದರು. ಭೂಪತಿ ಮತ್ತು ರಾಜವಂಶಸ್ಥ ಎಂ.ವೈ.ಘೋರ್ಪಡೆ ಜತೆಯಾಗಿ, ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಅದಕ್ಕೆ ವಿಜಯನಗರ ಅರಸರ ಮನೆತನದ ಕೃಷ್ಣದೇವರಾಯರು ಬೆಂಬಲ ಸೂಚಿಸಿದರು.

1991ರಲ್ಲಿ ದರೋಜಿಯಿಂದ ಅನತಿ ದೂರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಆರಂಭವಾಯಿತು. ಒಮ್ಮೆ ವಿವಿ ಭೇಟಿಗಾಗಿ ಬಂದ ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಗೆ ದರೋಜಿ ಸುತ್ತಲಿನ ಬೆಳವಣಿಗೆಗಳನ್ನು ಮನವರಿಕೆ ಮಾಡಿಕೊಡಲಾಯಿತು. ಇಂಥ ಹಲವು ಪ್ರಯತ್ನಗಳ ನಂತರ ಅಕ್ಟೋಬರ್ 17, 1994ರಂದು ಸರ್ಕಾರ ಬಳ್ಳಾರಿ ಜಿಲ್ಲೆಯ ಹೊಸಪೇಟೆ –ಸಂಡೂರು ತಾಲ್ಲೂಕುಗಳ ನಡುವಿರುವ ಬಿಳಿಕಲ್ಲು ಪೂರ್ವ ಕಾದಿಟ್ಟ ಅರಣ್ಯದ 55.87 ಚದರ ಅಡಿ ಕಿ.ಮೀ ಪ್ರದೇಶವನ್ನು ಅಧಿಕೃತವಾಗಿ ‘ದರೋಜಿ ಕರಡಿಧಾಮ’ ಎಂದು ಘೋಷಿಸಿತು. ಆ ಕರಡಿಧಾಮಕ್ಕೆ ಈಗ 25ವರ್ಷಗಳು ತುಂಬಿವೆ.

ಸಾಗುತ ದೂರ ದೂರ..

ಕರಡಿ ಧಾಮವೇನೋ ಘೋಷಣೆಯಾಯಿತು, ನಿಜ. ಅದರ ಜತೆ ಜತೆಗೆ, ಅರಣ್ಯ ಅಧಿಕಾರಿಗಳಿಗೆ ಆರಂಭಿಕ ಸವಾಲುಗಳು ಎದುರಾದವು. ಗ್ರಾಮಸ್ಥರಿಂದ ಜಮೀನು ಅತಿಕ್ರಮಣ, ಬೇರೆ ಬೇರೆ ಭಾಗಗಳಿಂದ ಕುರಿಗಾಹಿಗಳು ಕುರಿ ಹಿಂಡಿನೊಂದಿಗೆ ಬಂದು ಡೇರೆ ಹಾಕುವುದು.. ಇಂಥ ಹಲವು ಉಪಟಳಗಳು ಹೆಚ್ಚಿದವು. ಕರಡಿಧಾಮದ ಮೊದಲ ವಲಯ ಅರಣ್ಯ ಅಧಿಕಾರಿ ಶೇಖರ್‌ ಜಿ. ಕಂಬಳಿ ಅವರು ಇಂಥವನ್ನೆಲ್ಲ ದಿಟ್ಟವಾಗಿ ಎದುರಿಸಿದರು. ಮೊದಲು ಕರಡಿಧಾಮದ ಜಾಗದ ಸರ್ವೆ ನಡೆಸಿ, ಒತ್ತುವರಿ ತೆರವುಗೊಳಿಸಿದರು. ಠಿಕಾಣಿ ಹೂಡಿದ್ದ ಕುರಿಗಾಹಿಗಳನ್ನು ಬೇರೆಡೆ ಕಳುಹಿಸುವಲ್ಲಿ ಯಶಸ್ವಿಯಾದರು. ಕರಡಿಗಳ ಚಲನವಲನದ ಮೇಲೆ ನಿಗಾ ಇಡಲು ಕಾವಲು ಗೋಪುರ ನಿರ್ಮಾಣ ಮಾಡಿದರು. ನಂತರ ಬಂದ ಮತ್ತೊಬ್ಬ ವಲಯ ಅರಣ್ಯ ಅಧಿಕಾರಿ ಸಂಗಮೇಶ ಮಠ, ವಿಶೇಷ ಕಾಳಜಿ ವಹಿಸಿದರು. ಧಾಮದ ಸುತ್ತ ಕಲ್ಲಿನ ಗೋಡೆ ಎದ್ದಿತು. ಕಂದಕ ನಿರ್ಮಾಣದ ಮೂಲಕ ಗಡಿ ನಿರ್ಮಾಣ ಮಾಡಿದರು. ಹೀಗೆ ಕರಡಿಧಾಮ ಹಂತ ಹಂತವಾಗಿ ಹೊಸರೂಪ ಪಡೆದುಕೊಂಡಿತು.

2004, ಕರಡಿಧಾಮದ ದಶಮಾನೋತ್ಸವ ವರ್ಷ. ‘ಈ ಸಂದರ್ಭವನ್ನು ಅರಣ್ಯ ಇಲಾಖೆ, ವನ್ಯಜೀವಿ ಪ್ರೇಮಿಗಳು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬಹಳ ಸಂಭ್ರಮದಿಂದ ಆಚರಿಸಿದರು. ಆ ವಿಶೇಷ ಗಳಿಗೆಗೆ ಅಂದಿನ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಸಾಕ್ಷಿಯಾದರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು. ಅಂದಹಾಗೆ, ಸಮದ್‌ ಅವರು ಕರಡಿಧಾಮವನ್ನು ಆರಂಭದ ದಿನಗಳಿಂದ ಸೂಕ್ಷ್ಮವಾಗಿ ಗಮನಿಸುತ್ತ ಬಂದವರು. ಕರಡಿಗಳ ಮೇಲೆಯೇ ಅವರು ಸಂಶೋಧನೆ ಕೈಗೊಂಡಿದ್ದಾರೆ.

25 ವರ್ಷಗಳಲ್ಲಾದ ಬದಲಾವಣೆ

2009ರಲ್ಲಿ ರಾಜ್ಯ ಸರ್ಕಾರ, ದರೋಜಿ ಕರಡಿಧಾಮದ ವ್ಯಾಪ್ತಿಗೆ ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಕಾಯ್ದಿಟ್ಟ ಅರಣ್ಯ ಪ್ರದೇಶದ 26.85 ಚದರ ಅಡಿ ಕಿ.ಮೀ ಜಾಗವನ್ನು ಹೆಚ್ಚುವರಿಯಾಗಿ ಸೇರಿಸಿತು. ಧಾಮದ ವ್ಯಾಪ್ತಿ ವಿಸ್ತರಿಸಿದ ನಂತರ, ಸುತ್ತಮುತ್ತ ಮಾನವ– ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಬಿತ್ತು. ಇಂಥ ಸುರಕ್ಷತೆಯ ಕ್ರಮದಿಂದಾಗಿ, ದರೋಜಿಯಲ್ಲಿ ಉಲುಪಿ, ಕಾರೆ, ಕವಳೆ, ಬಾರೆ, ಜಾನೆ, ಕಕ್ಕೆ, ಗೊರವಿ, ಸೀತಾಫಲ ಸೇರಿದಂತೆ 28 ಜಾತಿಯ ಗಿಡ ಮರಗಳು ಬೆಳೆದು ನಿಂತಿವೆ. ಜೀವವೈವಿಧ್ಯದ ಕಾಡು ರೂಪಗೊಂಡ ಪರಿಣಾಮ, ಅಂತರ್ಜಲ ಮಟ್ಟವೂ ಸುಧಾರಿಸಿದೆ. ಧಾಮದ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿನ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗಿದೆ. ಅವರು ಬೇಸಿಗೆಯಲ್ಲೂ ಬೆಳೆ ಬೆಳೆಯುತ್ತಿದ್ದಾರೆ.

ಧಾಮಕ್ಕೆ ಹೊಂದಿಕೊಂಡಂತೆ ಕೆಲ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ ಬೆಳೆಯುತ್ತಾರೆ. ಆ ಬೆಳೆಗಳ ಆಕರ್ಷಣೆಗೆ ಒಳಗಾಗುವ ಕರಡಿಗಳು ಆಗೊಮ್ಮೆ ಈಗೊಮ್ಮೆ ಹೊಲಗಳಿಗೆ ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತವೆ. ಆದರೆ, ಅರಣ್ಯ ಇಲಾಖೆಯವರು ಬೆಳೆದ ಬೆಳೆಗಿಂತ ಹೆಚ್ಚಿನ ಪರಿಹಾರ ಕೊಡುತ್ತಿರುವುದರಿಂದ ರೈತರಿಗೆ ಅದು ತುಂಬಾ ಸಮಸ್ಯೆಯಾಗಿ ಕಂಡಿಲ್ಲ.

ಇಲ್ಲಿ ಸರೀಸೃಪಗಳೂ ಇವೆ

ಕರಡಿಧಾಮದಲ್ಲಿ ಕರಡಿ ಜತೆಗೆ, ಹೆಬ್ಬಾವು, ನಾಗರಹಾವು, ಕೆರೆ ಹಾವು, ಎರಡು ಬಗೆಯ ಮಣ್ಣು ಮುಕ್ಕು ಹಾವು, ನಕ್ಷತ್ರ ಆಮೆ ಸೇರಿದಂತೆ 50 ಬಗೆಯ ಸರೀಸೃಪಗಳು ನೆಲೆಸಿವೆ. ಅಷ್ಟೇ ಸಂಖ್ಯೆಯ ಚಿಟ್ಟೆಗಳು, 180 ಜಾತಿಯ ಪಕ್ಷಿಗಳಿವೆ. ‘ಚಿರತೆ, ನರಿ, ಕಾಡುಬೆಕ್ಕು, ಕುನುಕು ಬೆಕ್ಕು, ಕಾಡುಹಂದಿ, ಗುಳ್ಳೆನರಿ ಸೇರಿದಂತೆ ಅನೇಕ ವನ್ಯಜೀವಿಗಳಿವೆ. ಸಾರ್ವಜನಿಕರು, ಅವುಗಳನ್ನು ನೋಡಿ ಆನಂದಿಸಬೇಕು. ಆದರೆ, ಆ ವ್ಯವಸ್ಥೆ ಇಲ್ಲ. ವೀಕ್ಷಣಾ ಗೋಪುರದಿಂದಲೇ ಅವುಗಳನ್ನು ನೋಡಬೇಕು. ಗೋಪುರದ ಮೇಲೆ ನಿಂತರೆ, ದೂರದಲ್ಲಿ ಓಡಾಡುವ ಒಂದೆರಡು ಕರಡಿಗಳು ಮಾತ್ರ ಕಾಣುತ್ತವೆ. ಅದೂ ಸ್ಪಷ್ಟವಾಗಿರುವುದಿಲ್ಲ. ಇಲ್ಲಿ ಸಫಾರಿ ಆರಂಭಿಸಿದರೆ ಪ್ರವಾಸಿಗರು ಹತ್ತಿರದಿಂದ ವನ್ಯಜೀವಿಗಳನ್ನು ಕಣ್ತುಂಬಿಕೊಂಡು ಖುಷಿಪಡಬಹುದು’ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳೇಮಠ.

ಧಾಮದಲ್ಲಿ ಹಣ್ಣು ನೀಡುವ ಮರಗಳಿವೆ. ದಟ್ಟ ಪೊದೆಗಳ ಕಾಡಿರುವುದರಿಂದ, ಕರಡಿಗಳಿಗೆ ಆಹಾರಕ್ಕೆ ಕೊರತೆ ಇಲ್ಲ. ಅವು ತಿಂದುಂಡುಕೊಂಡು ಸುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಸುರಕ್ಷಿತ ಆವಾಸಸ್ಥಾನ ಸಿಕ್ಕಿರುವ ಕಾರಣ ಅವುಗಳ ಸಂತತಿಯೂ ವೃದ್ಧಿಸುತ್ತಿದೆ. ಒಂದು ಅಂದಾಜಿನ ಪ್ರಕಾರ ದರೋಜಿ ಕರಡಿಧಾಮದಲ್ಲಿ ಸದ್ಯ 105 ರಿಂದ 110 ಕರಡಿಗಳಿವೆ. ಇಲ್ಲಿರುವ ಯಾವ ಕರಡಿಗಳು ಆಹಾರ ಅರಸಿ ಬೇರೆಡೆ ಹೋಗುವುದಿಲ್ಲ. ಹೀಗಾಗಿ, ಸಹಜವಾಗಿ ಮಾನವನ ಜತೆಗಿನ ಸಂಘರ್ಷ ನಿಂತಿದೆ. ಈ ವ್ಯಾಪ್ತಿಯಲ್ಲಿ 1987ರ ನಂತರ ಕರಡಿಗಳು ಮನುಷ್ಯರನ್ನು ಸಾಯಿಸಿದ ಒಂದು ಘಟನೆಯೂ ವರದಿಯಾಗಿಲ್ಲ.

ಪ್ರವಾಸಿ ತಾಣವಾಗಿ ರೂಪಾಂತರ

ಹಂಪಿ ಸನಿಹದಲ್ಲೆ ದರೋಜಿ ಕರಡಿಧಾಮವಿದೆ. ಹೀಗಾಗಿ, ಹಂಪಿಗೆ ಭೇಟಿ ನೀಡಿದ ಅನೇಕ ಪ್ರವಾಸಿಗರು, ಇಲ್ಲಿಗೂ ಬರುತ್ತಿದ್ದಾರೆ. ನಿತ್ಯ ದೇಶ–ವಿದೇಶಗಳಿಂದ ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಜರ್ಮನಿಯ ನಿರ್ದೇಶಕ ಆಲಿವರ್‌ ಎಂಬುವರು ಇದೇ ಕರಡಿಧಾಮದಲ್ಲಿ ‘ಜಂಗಲ್‌ಬುಕ್‌ ಬೇರ್‌’ ಹೆಸರಿನ ಚಿತ್ರ ನಿರ್ಮಿಸಿದ್ದಾರೆ. ಈ ಮೂಲಕ, ದರೋಜಿ ಹೆಸರು ಸಾಗರದಾಚೆಗೂ ತಲುಪಿದೆ.

ಯಶಸ್ಸಿನ ಹಾದಿಯಲ್ಲಿರುವ ಕನ್ನಡ ನಾಡಿನ ಮೊದಲ ಕರಡಿಧಾಮ ಒಂದು ‘ಮಾದರಿ’ಯಾಗಿದೆ. ಕರಡಿಗಳ ಉಪಟಳ ಕಂಡುಬಂದ ಕಡೆಗಳಲ್ಲಿ, ‘ದರೋಜಿ ಮಾದರಿಯಲ್ಲಿ ಕರಡಿಧಾಮ ಮಾಡಿ’ ಎಂಬ ಒತ್ತಾಯಗಳು ಕೇಳಿಬರುತ್ತಿವೆ !

ಈಗ ಪರಿಸರ ಸೂಕ್ಷ್ಮ ವಲಯ

ದರೋಜಿ ಕರಡಿಧಾಮವನ್ನು ಸರ್ಕಾರ ಪ್ರಸಕ್ತ ಸಾಲಿನ ಸೆಪ್ಟೆಂಬರ್‌ 25ರಂದು ಪರಿಸರ ಸೂಕ್ಷ್ಮ ವಲಯವನ್ನಾಗಿ ಘೋಷಿಸಿದೆ. ಧಾಮದ ಏಳು ಕಿ.ಮೀ ಪ್ರದೇಶದ ಸುತ್ತಮುತ್ತ ಕಲ್ಲು ಕ್ವಾರಿ, ಗಣಿಗಾರಿಕೆ, ಹಾನಿಕಾರಕ ರಾಸಾಯನಿಕ ತಯಾರಿಕೆ ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸರ್ಕಾರದ ಈ ನಿರ್ಧಾರದಿಂದಾಗಿ ಕರಡಿ ಮಾತ್ರವಲ್ಲ, ಸುತ್ತಲು ವಾಸಿಸುವ ಅನೇಕ ಜೀವಿಗಳಿಗೆ ಹೆಚ್ಚಿನ ಸುರಕ್ಷತೆ ಕಲ್ಪಿಸಿದಂತಾಗಿದೆ.

ವಿಶೇಷ ಕಾರ್ಯಕ್ರಮ ಯೋಜನೆ

ಬೆಳ್ಳಿಹಬ್ಬ ಕಂಡಿರುವ ದರೋಜಿ ಕರಡಿಧಾಮದಲ್ಲಿ ವರ್ಷ ಪೂರ್ತಿ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆ ಕುರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪರಿಸರ ಸಂಘಟನೆಗಳು ಚರ್ಚೆ ನಡೆಸುತ್ತಿವೆ.ಅರಣ್ಯ ಇಲಾಖೆ ಸಹಯೋಗದಲ್ಲಿ ಕರಡಿಧಾಮದ ಸುತ್ತಲಿನ ಗ್ರಾಮಗಳಲ್ಲಿ ವನ್ಯಜೀವಿ ಜಾಗೃತಿ ಅಭಿಯಾನ, ಪಕ್ಷಿ ವೀಕ್ಷಣೆ ಶಿಬಿರದಂತಹ ಚಟುವಟಿಕೆಗಳನ್ನು ನಡೆಸಲು ಪರಿಸರ–ವನ್ಯಜೀವಿ ಪ್ರಿಯ ಸಂಘಟನೆಗಳು ಮುಂದಾಗಿವೆ.

ಬೆಳ್ಳಿಹಬ್ಬ ಕುರಿತು ಮೇಲಧಿಕಾರಿ ಜೊತೆ ಚರ್ಚಿಸಿ ಕ್ರಮ

ಬೆಳ್ಳಿ ಹಬ್ಬದ ಪ್ರಯುಕ್ತ ಕರಡಿ ಧಾಮದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸುವ ಯೋಚನೆ ಇದೆ. ಈ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಏನೆಲ್ಲ ಕಾರ್ಯಕ್ರಮಗಳನ್ನು ಆಯೋಜಿಸಬಹುದು ಎಂಬುದರ ಬಗ್ಗೆ ಶೀಘ್ರದಲ್ಲೇ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ದರೋಜಿ ಕರಡಿಧಾಮದ ವಲಯ ಅರಣ್ಯಾಧಿಕಾರಿ ಬಿ. ವಿನೋದ್ ಕುಮಾರನಾಯಕ ಹೇಳಿದರು.

ಇದನ್ನೂ ಓದಿ: ಕಂಗಾಲಾದ ಕರಡಿ ಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT