ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಶಾಲೆ, 6 ಗ್ರಾಮ ದತ್ತು ಪಡೆದ ಮೈಸೂರು ವಿವಿ: ಯಾವುದು ಆ ಶಾಲೆ, ಗ್ರಾಮಗಳು?

ಮೈಸೂರು ವಿಶ್ವವಿದ್ಯಾಲಯದಿಂದ ಕ್ರಮ–ಕುಲಪತಿ ಪ್ರೊ.ಹೇಮಂತಕುಮಾರ್‌ ಹೇಳಿಕೆ
Last Updated 5 ಜನವರಿ 2021, 10:22 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಗೆ ಒಳಪಡುವ ನಾಲ್ಕು ಜಿಲ್ಲೆಗಳಿಂದ 10 ಸರ್ಕಾರಿ ಶಾಲೆಗಳು ಹಾಗೂ ಚಾಮರಾಜನಗರ ಜಿಲ್ಲೆಹನೂರು ತಾಲ್ಲೂಕಿನ 6 ಗ್ರಾಮಗಳನ್ನು ಅಭಿವೃದ್ಧಿಪಡಿಸಲು ದತ್ತು ಪಡೆದುಕೊಂಡಿದೆ.

‘ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ 6 ಗ್ರಾಮ ದತ್ತು ಪಡೆಯಲಾಗಿದೆ. ನೂರು ವರ್ಷಗಳ ಇತಿಹಾಸ ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರುತಿಸಿ ಮತ್ತಷ್ಟು ಬಲವರ್ಧನೆಗೊಳಿಸುವ ಉದ್ದೇಶದಿಂದ 10 ಶಾಲೆ ದತ್ತು ಸ್ವೀಕರಿಸಲಾಗಿದೆ’ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘‌ಗುಣಮಟ್ಟ ಹೆಚ್ಚಿಸಲು ಹಾಗೂ ಮಾದರಿ ಶಾಲೆಗಳನ್ನಾಗಿಸುವ ಉದ್ದೇಶದಿಂದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳ ಈ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದೇವೆ. ಈ ಶಾಲೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅವುಗಳ ನವೀಕರಣಕ್ಕಾಗಿ 10 ಸದಸ್ಯರ ಸಮಿತಿ ರಚಿಸಿದ್ದು, ಸದಸ್ಯರು ಶಾಲೆಗಳಿಗೆ ಖುದ್ದು ಭೇಟಿ ನೀಡಿ, ನ್ಯೂನತೆ ಗುರುತಿಸಿದ್ದಾರೆ. ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣಾ ಸಲಹೆಗಾರ ಎಂ.ಆರ್.ದೊರೆಸ್ವಾಮಿ ಜೊತೆ ವಿಡಿಯೊಕಾನ್ಫರೆನ್ಸ್‌ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಯಿತು’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಶೌಚಾಲಯವನ್ನು ನಿರ್ಮಿಸಿ ಕೊಡುವುದು, ಕಾಂಪೌಂಡ್‌ ನಿರ್ಮಾಣ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುವುದು, ಶಾಲೆಗಳ ಪುನರುಜ್ಜೀವನ ಮಾಡುವುದು, ಶತಮಾನ ಕಂಡ ಶಾಲೆಗಳನ್ನು ಗುರುತಿಸಿ ಗೌರವಿಸುವುದು, ಸಮಗ್ರ ಇತಿಹಾಸ ದಾಖಲೀಕರಿಸುವುದು, ದಾಖಲಾತಿ ಪ್ರಮಾಣವನ್ನು ಹೆಚ್ಚಿಸುವುದು ವಿಶ್ವವಿದ್ಯಾಲಯದ ಆಶಯವಾಗಿದೆ ಎಂದರು.

ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಇದ್ದರು.

Caption
Caption

ಪುಸ್ತಕ ಪ್ರದರ್ಶನ–ರಿಯಾಯಿತಿ ಮಾರಾಟ

ಪ್ರಾಚ್ಯವಿದ್ಯಾ ಸಂಶೋಧನಾಲಯ ಮತ್ತು ಪ್ರಸಾರಾಂಗ ವತಿಯಿಂದ ಜ.6 ಹಾಗೂ 7ರಂದು ಪುಸ್ತಕ ಮೇಳ ಆಯೋಜಿಸಿದ್ದು, ಅಂದು ಶೇ 50 ರಿಯಾಯಿತಿ ಮಾರಾಟದಲ್ಲಿ ಪುಸ್ತಕಗಳು ದೊರೆಯಲಿವೆ ಎಂದು ಪ್ರೊ.ಹೇಮಂತಕುಮಾರ್ ಹೇಳಿದರು.

ಕವಿಜನ ಕಾಮಧೇನು ಮುಮ್ಮಡಿ ಕೃಷ್ಣರಾಜ ಒಡೆಯರ್‌ (ಲೇಖಕ ಎಸ್‌.ಶಿವರಾಜಪ್ಪ), ಸಿದ್ದಸಿದ್ಧಾಂತ ಪದ್ಧತಿ (ಸಿ.ಪಾರ್ವತಿ), ಅಶ್ವಲಕ್ಷಣಮ್‌ (ಎಂ.ಗೀತಾ), ಪ್ರೊ.ಎಚ್‌.ದೇವಿರಪ್ಪ ಬದುಕು–ಬರಹ (ಜಿ.ಎನ್‌.ಸಿದ್ದಲಿಂಗಪ್ಪ), ಶ್ರೀಚಾಮುಂಡಿಕಾ ಲಘುನಿಘಂಟು (ಎಸ್‌.ಸಿ.ಶೋಭಾ), ಸೂರ್ಯಚಂದ್ರವಂಶಾನುಚರಿತಮ್‌ (ದಿದ್ದಿಗಿ ವಂಶಿ ಕೃಷ್ಣ) ಕೃತಿಗಳು ಅಂದು ಬಿಡುಗಡೆ ಮಾಡಲಾಗುವುದು ಎಂದರು.

ಕಾವೇರಿ ನೀರು ಪೂರೈಸಲು ಕ್ರಮ

ಮೈಸೂರು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೀರಿಗಾಗಿ ಕೇವಲ 16 ಬೋರ್‌ವೆಲ್‌ಗಳನ್ನು ಅವಲಂಬಿಸಬೇಕಿದೆ. ಹೀಗಾಗಿ, ಶೌಚಾಲಯಗಳಲ್ಲೂ ನೀರಿಗೆ ಸಮಸ್ಯೆ ಉಂಟಾಗಿದೆ. ಪಾಲಿಕೆ ಜೊತೆ ಚರ್ಚಿಸಿದ್ದು, ವರ್ಷದಲ್ಲಿ ಕಾವೇರಿ ನೀರು ಪೂರೈಸಲು ಕ್ರಮ ವಹಿಸಲಾಗುವುದು. ಅದಕ್ಕೆ ನಾವೇ ಹಣ ಪಾವತಿಸಲಿದ್ದು, ನಿತ್ಯ 2 ಲಕ್ಷ ಲೀಟರ್‌ ನೀರು ಲಭ್ಯವಾಗಲಿದೆ ಎಂದು ಕುಲಪತಿ ಹೇಳಿದರು.

ಈಗಾಗಲೇ ಅಂತಿಮ ವರ್ಷದ ವಿದ್ಯಾರ್ಥಿಗಳು ತರಗತಿಗೆ ಬರಲು ಅನುಮತಿ ನೀಡಲಾಗಿದೆ. ಉಳಿದ ತರಗತಿಗಳ ವಿದ್ಯಾರ್ಥಿಗಳಿಗೂ ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಈ ಸಲ ದಾಖಲಾತಿ ಪ್ರಮಾಣ ಕೂಡ ಉತ್ತಮವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT