ನೀರಾವರಿಗೆ ₹ 2 ಲಕ್ಷ ಕೋಟಿ ಅನುದಾನ ಮೀಸಲು: ಎಂ.ಬಿ. ಪಾಟೀಲ

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ₹ 2 ಲಕ್ಷ ಕೋಟಿ ಅನುದಾನ ಮೀಸಲಿಡಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಘೋಷಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ₹40 ಸಾವಿರ ಕೋಟಿಯಂತೆ ಬಜೆಟ್‌ನಲ್ಲಿ ನೀರಾವರಿಗೆ ಮೀಸಲಿಟ್ಟು, ಐದು ವರ್ಷಗಳಲ್ಲಿ ₹ 2 ಲಕ್ಷ ಕೋಟಿ ಅನುದಾನವನ್ನು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಂದಾಜು ₹ 75 ಲಕ್ಷ ಕೋಟಿ ಹಾಗೂ ಇನ್ನುಳಿದ ರಾಜ್ಯದ ನೀರಾವರಿ ಯೋಜನೆಗಳಿಗೆ ₹1.25 ಲಕ್ಷ ಕೋಟಿ ಅನುದಾನ ಮೀಸಲಿಡಲು ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಪಕ್ಷ ನಿರ್ಧರಿಸಿದೆ ಎಂದರು.
ಡಿ.30ರಂದು ವಿಜಯಪುರದಲ್ಲಿ ನಡೆಯುವ ಕೃಷ್ಣಾ ಜನಾಂದೋಲನ ಸಮಾವೇಶದಲ್ಲಿ ಕಾಂಗ್ರೆಸ್ ಬದ್ಧತೆಯನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದರು.
ಬ್ರಿಜೇಶ್ ಕುಮಾರ್ ನೇತೃತ್ವದ ಕೃಷ್ಣಾ ನ್ಯಾಯಾಧೀಕರಣ ತೀರ್ಪು ಬಂದಿದ್ದರೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶ್ ಹೊರಡಿಸಿಲ್ಲ. ಇದು ಡಬಲ್ ಎಂಜಿನ್ ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಸರ್ಕಾರ 2018ರಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀರಾವರಿ ಯೋಜನೆಗೆ ₹ 1.5 ಲಕ್ಷ ಕೋಟಿ ನೀಡುವುದಾಗಿ ಘೋಷಿಸಿದ್ದರು. ಆದರೆ, ಇದುವರೆಗೆ ಸುಮಾರು ₹ 60 ಸಾವಿರ ಕೋಟಿ ಹಂಚಿಕೆ ಮಾಡಿದ್ದು, ಇದರಲ್ಲಿ ಕೇವಲ ₹ 48 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಇನ್ನೂ ₹ 1 ಲಕ್ಷ ಕೋಟಿ ಖರ್ಚು ಮಾಡುವುದು ಬಾಕಿ. ಇದು ಬಿಜೆಪಿ ಸರ್ಕಾರದ ಬದ್ಧತೆ ತೋರಿಸುತ್ತದೆ ಟೀಕಿಸಿದರು.
ಯುಕೆಪಿ ಮೂರನೇ ಹಂತದಲ್ಲಿ ಮುಳುಗಡೆಯಾಗುವ 29 ಹಳ್ಳಿಗಳ ಸ್ವಾಧೀನಕ್ಕೆ ಒಳಪಡುವ ಭೂಮಿಗೆ ಏಕರೂಪದ ಮತ್ತು ಸಮ್ಮತಿ ಐತೀರ್ಪುನ್ನು ರಾಜ್ಯ ಸರ್ಕಾರ ರಚಿಸಿರುವುದು ಅವೈಜ್ಞಾನಿಕವಗಿದೆ. ಭೂಮಿ ಕಳೆದುಕೊಳ್ಳುವ ರೈತರಿಗೆ ಅನ್ಯಾಯವಾಗಲಿದೆ. ಸರ್ಕಾರ ಮಾರುಕಟ್ಟೆ (ಮಾರ್ಕೆಟ್ ವ್ಯಾಲ್ಯೂ) ದರ ನಿಗದಿ ಮಾಡಿದೆಯೇ ಹೊರತು, ಮಾರ್ಗದರ್ಶಿ (ಗೈಡೆನ್ಸ್ ವ್ಯಾಲ್ಯೂ) ದರ ನಿಗದಿ ಮಾಡಿಲ್ಲ. ಇದರಿಂದ ರೈತರು ಕೋರ್ಟ್‌ಗೆ ಹೋಗಲು ಅವಕಾಶವಿಲ್ಲದಂತಾಗಿದೆ. ರೈತರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.
ಚುನಾವಣೆ ಹತ್ತಿರ ಬಂದಿರುವುದರಿಂದ ಬಿಜೆಪಿ ಜನರನ್ನು ಮರಳು ಮಾಡುವ ತಂತ್ರ ಅನುಸರಿಸತೊಡಗಿದೆ ಎಂದು ಆರೋಪಿಸಿದರು.
ನೀರಾವರಿ ಯೋಜನೆಗಳ ಟೆಂಡರ್‌ನಲ್ಲೂ ದೊಡ್ಡ ಪ್ರಮಾಣದ ಗೋಲ್‌ಮಾಲ್ ಆಗಿದೆ. ಬಹಳಷ್ಟು ಅವ್ಯವಹಾರವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದೆ ಎಂದು ಹೇಳಿದರು.
ಸಮಾವೇಶ ನಾಳೆ: ಡಿ.30ರಂದು ಸಂಜೆ 3ರಂದು ನಗರದ ದರಬಾರ್ ಮೈದಾನದಲ್ಲಿ ಕೃಷ್ಣಾ ಸಮಾವೇಶ ಆಯೋಜಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಡಾ.ಜಿ.ಪರಮೇಶ್ವರ, ಎಚ್.ಕೆ.ಪಾಟೀಲ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಎಐಸಿಸಿ ಕಾರ್ಯದರ್ಶಿ ವಿಶ್ವನಾಥನ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಬ್ಧುಲ್ ಹಮೀದ್ ಮುಶ್ರೀಪ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.