ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಅಭಿವೃದ್ಧಿಗೆ ₹3,579 ಕೋಟಿ: ಕೇಂದ್ರ ಭೂ ಸಾರಿಗೆ ಸಚಿವಾಲಯದ ಒಪ್ಪಿಗೆ

ಗತಿಶಕ್ತಿ ಯೋಜನೆಯಡಿ ಕಾಮಗಾರಿ
Last Updated 8 ಫೆಬ್ರುವರಿ 2023, 21:45 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಆರು ಕಡೆಗಳಲ್ಲಿ ₹3,579 ಕೋಟಿ ಮೊತ್ತದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿ
ಗಳನ್ನು ಕೈಗೆತ್ತಿಕೊಳ್ಳಲು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯ ಒಪ್ಪಿಗೆ ನೀಡಿದೆ.

ಈ ಸಂಬಂಧ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬುಧವಾರ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, ‘ಗತಿ ಶಕ್ತಿ ಯೋಜನೆಯಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಕರ್ನಾಟಕ ಪ್ರಗತಿಯ ಪಥದಲ್ಲಿದೆ’ ಎಂದು ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರ–ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ ’166 ಇ’ಯಲ್ಲಿ ಕನಮಡಿ– ಬಿಜ್ಜೋಡಿ– ತಿಕೋಟಾ ದ್ವಿಪಥ ರಸ್ತೆಯನ್ನು ₹196.05 ಕೋಟಿ ವೆಚ್ಚದಲ್ಲಿ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.

ಮಹಾರಾಷ್ಟ್ರ ಗಡಿಯ ರಾಷ್ಟ್ರೀಯ ಹೆದ್ದಾರಿ 548 ಬಿ ಯಲ್ಲಿ ಮುರುಂನಿಂದ ಐಬಿ ವೃತ್ತದವರೆಗೆ ₹957 ಕೋಟಿ ಮೊತ್ತದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇದರಿಂದ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗಡ್ಕರಿ ಪ್ರತಿಪಾದಿಸಿದ್ದಾರೆ.

ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭಾನಾಪುರ–ಗದ್ದನಕೇರಿ ವಿಭಾಗದ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡದಲ್ಲಿ ಬೈಪಾಸ್‌ ನಿರ್ಮಿಸಲಾಗುತ್ತದೆ. ಇದಕ್ಕೆ ₹ 333.96 ಕೋಟಿ ವೆಚ್ಚ ಮಾಡಲಾಗುತ್ತದೆ. ’ಹಾವೇರಿ ಲೋಕಸಭಾ ಕ್ಷೇತ್ರ
ವ್ಯಾಪ್ತಿಯ ಗಜೇಂದ್ರಗಡದಲ್ಲಿ (ಉಣಚಗೇರಿಯಲ್ಲಿ ಪ್ರಾರಂಭಗೊಂಡು ಕೊಡಗಾನೂರ, ಪುರ್ತಗೇರಿ ಹಾಗೂ ರಾಜೂರ ಒಳಗೊಂಡು) ಬೈಪಾಸ್‌ ನಿರ್ಮಾಣಕ್ಕೆ ₹110 ಕೋಟಿ ವೆಚ್ಚ ಆಗಲಿದೆ. ಇದರಲ್ಲಿ ಭೂಸ್ವಾಧೀನ ವೆಚ್ಚವೂ ಸೇರಿದೆ’ ಎಂದು ಸಂಸದ ಶಿವಕುಮಾರ ಉದಾಸಿ ತಿಳಿಸಿದ್ದಾರೆ.

ಅದೇ ರೀತಿ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಸರ್ಜಾಪುರದಿಂದ
ಪಟ್ಟಣಕಲ್ಲುವಿನವರೆಗೆ ₹445.62 ಕೋಟಿ ವೆಚ್ಚದಲ್ಲಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮೈಸೂರು ಹಾಗೂ ಕುಶಾಲನಗರ ಭಾಗದಲ್ಲಿ ₹909.86 ಕೋಟಿ ಮೊತ್ತದಲ್ಲಿ ನಾಲ್ಕು ಪಥಗಳ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತದೆ. ಕುಶಾಲನಗರ ಬೈಪಾಸ್‌ನ ಪ್ರಾರಂಭದಲ್ಲಿ ಗುಡ್ಡೆ
ಹೊಸೂರಿನಿಂದ ಈ ಕಾಮಗಾರಿ ನಡೆಸಲಾಗುತ್ತದೆ. ಅದೇ ರೀತಿಯಲ್ಲಿ, ಇಲವಾಲ–ಕೆ.ಆರ್.ನಗರ ರಸ್ತೆ ಜಂಕ್ಷನ್‌ನ ಯಲಚಹಳ್ಳಿಯಿಂದ ಶ್ರೀರಂಗ ಪಟ್ಟಣದ ಬೈಪಾಸ್‌ ವರೆಗೆ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿ ಮಾಡಲಾಗುವುದು. ಈ ಯೋಜನೆಗೆ ₹739.39 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆ ಗಳಿಗೆ ಸಹ ಅನುಮೋದನೆ ನೀಡಲಾಗಿದೆ ಎಂದು ಸಚಿವ ಗಡ್ಕರಿ ಅವರು ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟ, ಕೊಡಚಾದ್ರಿ ಸೇರಿ 15 ಕಡೆ ರೋಪ್‌ವೇ

ನವದೆಹಲಿ: ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಆರಂಭಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ. ಉಳಿದ 14 ಬೆಟ್ಟಗಳಲ್ಲಿ ಈ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ ಎಂದು ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಸದಸ್ಯ ನಾರಾಯಣ ಕೊರಗಪ್ಪ
ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಕರ್ನಾಟಕ ಸರ್ಕಾರವು 15 ಯೋಜನೆಗಳ ಪ್ರಸ್ತಾವ ಕಳುಹಿಸಿದೆ’ ಎಂದು ತಿಳಿಸಿದ್ದಾರೆ.

ಈ ಸಲದ ಕೇಂದ್ರ ಬಜೆಟ್‌ನಲ್ಲಿ ಪರ್ವತಮಾಲಾ ಯೋಜನೆಯನ್ನು ಪ್ರಕಟಿಸಲಾಗಿದೆ. ಈ ಯೋಜನೆಯ ಆರಂಭವಾದರೆ ಗುಡ್ಡಗಾಡು ಪ್ರದೇಶಗಳಿಗೆ ಜನರ ಸುಲಲಿತ ಪ್ರಯಾಣಕ್ಕೆ ಅನುಕೂಲವಾಗಲಿದೆ. ರೋಪ್‌ವೇ ಯೋಜನೆಗಳಿಗಾಗಿ ಸಾಮಾನ್ಯ ಕಾರ್ಯಾಚರಣೆಯ ವಿಧಾನವನ್ನು ಅಭಿವೃದ್ಧಿಪಡಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ಸಚಿವಾಲಯ ಈಗಾಗಲೇ ನಿರ್ದೇಶನ ನೀಡಿದೆ ಎಂದು ಅವರು ಹೇಳಿದ್ದಾರೆ.

ಎಲ್ಲೆಲ್ಲಿ ರೋಪ್‌ವೇ ಪ್ರಸ್ತಾವ: ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ಮೈಸೂರಿನ ಚಾಮುಂಡಿ ಬೆಟ್ಟ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತ, ತುಮಕೂರಿನ ದೇವರಾಯನ ದುರ್ಗ, ಮಧುಗಿರಿ ಕೋಟೆ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಸಾಗರ ಹಿನ್ನೀರು, ಉತ್ತರ ಕನ್ನಡದ ಯಾಣ, ಜೋಯ್ಡಾ ಹಾಗೂ ಚಪೇಲಿ, ಕೊಡಗು ಜಿಲ್ಲೆಯ ಕುಮಾರ ಪರ್ವತ, ಬೆಳಗಾವಿ ಜಿಲ್ಲೆಯ ರಾಜ್‌ಹೌಸ್‌ಗಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT