ಮಂಗಳವಾರ, ಫೆಬ್ರವರಿ 7, 2023
27 °C
ಚಿಲುಮೆ ಸಂಸ್ಥೆ ಸಿಬ್ಬಂದಿಗೆ ಮತದಾರರ ಸಮೀಕ್ಷೆಗೆ ಗುರುತಿನ ಚೀಟಿ ನೀಡಿದ್ದ ಆರೋಪ

ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯಲೋಪ: ಬಿಬಿಎಂಪಿ ನಾಲ್ವರು ಅಧಿಕಾರಿಗಳ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದಲ್ಲಿ ಬಿಬಿಎಂ‍ಪಿಯ ನಾಲ್ವರು ಅಧಿಕಾರಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.

‘ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್‌ ಅಹಮದ್‌, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್‌, ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ.ಭೀಮಾಶಂಕರ್‌ ಮತ್ತು ರಾಜರಾಜೇಶ್ವರಿ ನಗರದ ಕಂದಾಯ ಅಧಿಕಾರಿ ಮಹೇಶ್‌ ಅವರನ್ನು ಬಂಧಿಸಲಾಗಿದೆ. ಇವರು ಆರೋಪಿಗಳಿಗೆ ಗುರುತಿನ ಚೀಟಿ ಮಾಡಿಕೊಟ್ಟಿದ್ದಕ್ಕೆ ಪುರಾವೆಗಳು ಸಿಕ್ಕಿವೆ’ ಎಂದು ಮೂಲಗಳು ಹೇಳಿವೆ.

‘ಈ ನಾಲ್ವರು ಮತದಾರರ ನೋಂದಣಾಧಿಕಾರಿಗಳಾಗಿ ಕೆಲಸ ಮಾಡಿದ್ದರು. ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆ ಜೋಡಣೆ ಕೆಲಸಕ್ಕಾಗಿ ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಬಿಎಲ್‌ಒ ಗುರುತಿನ ಚೀಟಿಗಳನ್ನು ಮಾಡಿಕೊಟ್ಟಿದ್ದರು’ ಎಂದು ಮೂಲಗಳು ವಿವರಿಸಿವೆ.

‘ಬಂಧಿತ ಆರೋಪಿಗಳ ಹೇಳಿಕೆ ಆಧರಿಸಿ ನಾಲ್ವರಿಗೆ ನೋಟಿಸ್ ನೀಡಿ ಇತ್ತೀಚೆಗೆ ವಿಚಾರಣೆ ನಡೆಸಲಾಗಿತ್ತು. ನಾಲ್ವರ ಹೇಳಿಕೆ ಪರಿಶೀಲಿಸಿದಾಗ,ಪ್ರಕರಣದಲ್ಲಿ ಅವರೂ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ, ನಾಲ್ವರನ್ನೂ ಬಂಧಿಸಲಾಗಿದೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಹಿರಿಯ ಅಧಿಕಾರಿಗಳೂ ಭಾಗಿ: ಪ್ರಕರಣ ದಲ್ಲಿ ಬಿಬಿಎಂ‍ಪಿ ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಪಟ್ಟ ಪುರಾವೆಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಪೊಲೀಸರು ಚಿಲುಮೆ ಸಂಸ್ಥೆಯ ಸಂಸ್ಥಾಪಕ ರವಿಕುಮಾರ್ ಹಾಗೂ ಇತರರನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ. ಜೊತೆಗೆ, ಬಿಬಿಎಂಪಿ ಕಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತಿದ್ದಾರೆ.

‘ಆರೋಪಿಗಳ ಮೊಬೈಲ್ ಕರೆ ವಿವರ ಸಂಗ್ರಹಿಸಲಾಗಿದೆ. ಬಿಬಿಎಂಪಿಯ ಹಲವು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿರುವುದು ಗೊತ್ತಾಗುತ್ತಿದೆ. ಜಪ್ತಿ ಮಾಡಿರುವ ಮೊಬೈಲ್‌ನಲ್ಲೂ ಕೆಲ ಮಾಹಿತಿಗಳು ಲಭ್ಯವಾಗಿವೆ. ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಸಾಕ್ಷ್ಯ ಸಿಕ್ಕ ಬಳಿಕವೇ ಮುಂದಿನ ಕ್ರಮ’ ಎಂದು ಹೇಳಿವೆ.

ಏನಾದರೂ ಆದರೆ ನೋಡಿಕೊಳ್ಳುವೆ: ‘ಕಿರಿಯ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದ ಹಿರಿಯ ಅಧಿಕಾರಿ, ‘ಚಿಲುಮೆ ಸಂಸ್ಥೆಯವರಿಗೆ ಗುರುತಿನ ಚೀಟಿ ಕೊಟ್ಟು, ಸಮೀಕ್ಷೆಗೆ ಅನುಕೂಲ ಮಾಡು. ಏನಾದರೂ ಆದರೆ ನೋಡಿಕೊಳ್ಳುವೆ’ ಎಂದು ಹೇಳಿದ್ದರು. ಈ ಸಂಗತಿ ಕಿರಿಯ ಅಧಿಕಾರಿಗಳ ವಿಚಾರಣೆಯಿಂದ ಗೊತ್ತಾ ಗಿದೆ’ ಎಂದು ಮೂಲಗಳು ಹೇಳಿವೆ.

‘ವೈಯಕ್ತಿಕ ದ್ವೇಷದಿಂದಲೂ ಹೇಳಿಕೆ ನೀಡುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಲ್ಲ ಹೇಳಿಕೆಗಳನ್ನು ಪರಿ
ಶೀಲಿಸಲಾಗುತ್ತಿದೆ’ ಎಂದು ತಿಳಿಸಿವೆ.

ಗುರುತಿನ ಚೀಟಿ ಕೊಡಿಸಿದ್ದ ಮಧ್ಯವರ್ತಿ ಬಂಧನ

ಬಿಬಿಎಂಪಿ ಅಧಿಕಾರಿಗಳ ಸಹಿ, ಮೊಹರು ಇದ್ದ ಬಿಎಲ್‌ಒ ಗುರುತಿನ ಚೀಟಿಗಳನ್ನು ಚಿಲುಮೆ ಸಂಸ್ಥೆಗೆ ಕೊಡಿಸುತ್ತಿದ್ದ ಆರೋಪದಡಿ ಶಿವಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಶಿವಕುಮಾರ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಚಿಲುಮೆ ಸಂಸ್ಥೆ ನಡುವೆ ಮಧ್ಯವರ್ತಿಯಾಗಿದ್ದ. ರವಿಕುಮಾರ್, ಲೋಕೇಶ್ ಜೊತೆಗೆ ಒಡನಾಟ ಹೊಂಡಿದ್ದ. ಚಿಲುಮೆ ಸಂಸ್ಥೆಯ ಕೃತ್ಯಕ್ಕೂ ಸಹಕರಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಂಧಿತರ ಹೇಳಿಕೆ ಆಧರಿಸಿ ಪುರಾವೆ ಕಲೆಹಾಕಲಾಗಿತ್ತು. ಶಿವಕುಮಾರ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

28 ಕ್ಷೇತ್ರಗಳಲ್ಲಿಯೂ ಕ್ರಮ ಕೈಗೊಳ್ಳಬೇಕು– ಕಾಂಗ್ರೆಸ್‌

ಬೆಂಗಳೂರು: ‘ಬಿಜೆಪಿಯವರು ಸೋಲಿನ ಭಯದಿಂದ ಖಾಸಗಿ ಸಂಸ್ಥೆಯ ಮೂಲಕ ಮತದಾರರ ಮಾಹಿತಿ ಕಳವು ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಸಂಚಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲೂ ಕ್ರಮ ಜರುಗಿಸಲು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುತ್ತೇನೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅವರು, ‘ಮುಖ್ಯಮಂತ್ರಿ ಮತ್ತು ಜಿಲ್ಲಾ ಮುಖ್ಯ ಚುನಾವಣಾ ಅಧಿಕಾರಿ ಗಮನಕ್ಕೆ ಬಾರದೆ ಈಗ ಅಮಾನತುಗೊಂಡಿರುವ ಇಬ್ಬರು ಅಧಿಕಾರಿಗಳು ಮಾಹಿತಿ ಕಳವು ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಅಕ್ರಮ ನಡೆದಿರುವ ಕಾರಣಕ್ಕೆ ಈಗ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ.ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾನು ಸಿ.ಎಂ ಆಗಿದ್ದ ಅವಧಿ ಸೇರಿದಂತೆ ಎಲ್ಲ ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಿ’ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ‘ಸಚಿವರು, ಶಾಸಕರು ಭಾಗಿಯಾಗದೆ ಅಕ್ರಮ ನಡೆಯಲು ಸಾಧ್ಯವಿಲ್ಲ. ಎಲ್ಲ 28 ಕ್ಷೇತ್ರಗಳಲ್ಲಿಯೂ ಮತದಾರರ ಪಟ್ಟಿ ಮರುಪರಿಷ್ಕರಣೆ ಆಗಬೇಕು’ ಎಂದು ಆಗ್ರಹಿಸಿದರು.

‘ಸೋಲುವ ಭೀತಿಯಲ್ಲಿ ಬಿಜೆಪಿ ಸರ್ಕಾರ ಮತದಾನ ಹಕ್ಕು ಕಸಿಯುವ ಪ್ರಯತ್ನ ಮಾಡುವುದಾದರೆ ಇಂಥ ಭ್ರಷ್ಟ, ದುಷ್ಟ ಸರ್ಕಾರವನ್ನು ಜನ ಕ್ಷಮಿಸಬಾರದು’ ಎಂದು ಅಭಿಪ್ರಾಯಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು