ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40ರಷ್ಟು ಲಂಚ: ಸರ್ಕಾರ ವಜಾ ಮಾಡಿ; ರಾಜ್ಯಪಾಲರಿಗೆ ಕಾಂಗ್ರೆಸ್‌ ದೂರು

Last Updated 25 ನವೆಂಬರ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾವಿರಾರು ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ಕೂಡಲೇ ರಾಷ್ಟ್ರಪತಿ ಆಡಳಿತ ಹೇರಬೇಕು’ ಎಂದು ಕಾಂಗ್ರೆಸ್‌ ನಾಯಕರ ನಿಯೋಗವುರಾಜ್ಯಪಾಲ ಥಾವರ
ಚಂದ್‌ ಗೆಹಲೋತ್‌ ಅವರನ್ನು ಒತ್ತಾಯಿಸಿದೆ.

ನಿಯೋಗದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್‌. ಪಾಟೀಲ ಇದ್ದರು.

‘ಗುತ್ತಿಗೆ ಟೆಂಡರ್‌ಗಳಲ್ಲಿ ಶೇ 40ರಷ್ಟು ಲಂಚ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘವು ಪ್ರಧಾನಿ ನರೇಂದ್ರ ಮೋದಿ ಅವರಿಗೆ 2021ರ ಜೂನ್ ತಿಂಗಳಲ್ಲಿ ದೂರು ನೀಡಿದೆ. ರಾಜ್ಯದಲ್ಲಿನ ವ್ಯಾಪಕ ಭ್ರಷ್ಟಾಚಾರ ಮತ್ತು ದುರಾಡಳಿತದಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗುತ್ತಿದೆ. ಕೆಲವು ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಈ ಅಕ್ರಮ ಹಣವನ್ನು ನುಂಗಿದ್ದಾರೆ. ರಾಜ್ಯದಲ್ಲಿ ಸಾಂವಿಧಾನಿಕ ಆಡಳಿತ ವಿಫಲವಾಗಿದೆ’ ಎಂದೂ ಕಾಂಗ್ರೆಸ್‌ ದೂರಿದೆ.

‘ಸಂವಿಧಾನ ಅನ್ವಯ ರಾಜ್ಯ ಸರ್ಕಾರ ನಡೆಯುತ್ತಿಲ್ಲ. ಹೀಗಾಗಿ, ಸಂವಿಧಾನದ 356ನೇ ವಿಧಿಯನ್ನು ಜಾರಿಗೊಳಿಸಲು ರಾಷ್ಟ್ರಪತಿಗೆ ವರದಿ ಸಲ್ಲಿಸಬೇಕು’ ಎಂದೂ ಮನವಿ ಮಾಡಿದೆ.

‘ಲೋಕೋಪಯೋಗಿ, ಸಣ್ಣ ನೀರಾವರಿ, ಜಲಸಂಪನ್ಮೂಲ, ಪಂಚಾಯತ್‌ರಾಜ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಬಿಬಿಎಂಪಿ ಹೀಗೆ ಎಲ್ಲ ಇಲಾಖೆಗಳ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ’ ಎಂದು ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದಿದೆ. ಈ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಯಿಂದ ನ್ಯಾಯಾಂಗ ತನಿಖೆ ನಡೆಸಬೇಕು. ಆರೋಪದ ಬಗ್ಗೆ ಎಫ್‌ಐಆರ್‌ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಬೇಕು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮಗಳ ಬಗ್ಗೆಯೂ ತನಿಖೆಗೆ ಸೂಚಿಸಬೇಕು’ ಎಂದೂ ನಿಯೋಗ ಒತ್ತಾಯಿಸಿದೆ.

‘ಎಲ್ಲ ಇಲಾಖೆಗಳ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್‌ ವಸೂಲು ಮಾಡಲಾಗುತ್ತಿದ್ದು, ಈ ಹಣ ಸಂಬಂಧಪಟ್ಟ ಇಲಾಖೆಗಳ ಸಚಿವರಿಗೆ ಹಾಗೂ ಶಾಸಕರು, ಸಂಸದರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸಲ್ಲಿಕೆಯಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿದೆ. ಇದು ಕಾನೂನಿನ ಪ್ರಕಾರ ಲಂಚವಲ್ಲದೇ ಮತ್ತೇನು ಅಲ್ಲ. ಈ ಎಲ್ಲ ಸಂಗತಿಗಳನ್ನು ಇದೇ ಜುಲೈ 6ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿರುವ ಸಂಘ, ಈ ಹಗರಣದ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದೂ ಆಗ್ರಹಿಸಿತ್ತು.

ಪ್ರಧಾನಿಗೆ ಬರೆದ ಪತ್ರದಲ್ಲಿದ್ದ ವಿವರಗಳನ್ನು ಇದೇ 19 ಮತ್ತು 20ರಂದು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್’ ಸೇರಿದಂತೆ ಮುದ್ರಣ ಮತ್ತು ಸುದ್ದಿ ಮಾಧ್ಯಮಗಳು ಪ್ರಕಟಿಸಿವೆ’ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿರುವ ನಿಯೋಗ, ಈ ಹಗರಣದ ಕುರಿತು 19ರ ‘ಪ್ರಜಾವಾಣಿ‘ ಸಂಚಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಮತ್ತು ಡೆಕ್ಕನ್‌ ಹೆರಾಲ್ಡ್‌ ನ. 24ರ ಸಂಚಿಕೆಯಲ್ಲಿ ಪ್ರಕಟವಾದ ಸಂಪಾದಕೀಯದ ಪ್ರತಿಯನ್ನು ಮನವಿ ಜೊತೆ ಸಲ್ಲಿಸಿದೆ.

’ಗುತ್ತಿಗೆದಾರರು ದೂರು ಸಲ್ಲಿಸಿನಾಲ್ಕು ತಿಂಗಳು ಕಳೆದರೂ ಪ್ರಧಾನಿಮೌನ ವಹಿಸಿದ್ದಾರೆ. ರಾಜ್ಯ ಸರ್ಕಾರದ
ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಇದನ್ನು ನೋಡಿದರೆ ಅಕ್ರಮದಲ್ಲಿ ಕೇಂದ್ರ ಸರ್ಕಾರ ಕೂಡ ಕೈ ಜೋಡಿಸಿದಂತೆ, ಭ್ರಷ್ಟಾಚಾರದ ಜೊತೆ ರಾಜಿ ಮಾಡಿಕೊಂಡಂತೆ ಕಾಣುತ್ತಿದೆ. ಇಲ್ಲದೇ ಇದ್ದರೆ, ಈ ದೂರನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿತ್ತು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಅಕ್ರಮ ಹಣ ವರ್ಗಾವಣೆ ಮತ್ತು ಬೃಹತ್‌ ಭ್ರಷ್ಟಾಚಾರದ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ, ರಾಜ್ಯ ಪೊಲೀಸ್‌, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆ ಮತ್ತು ಇತರ ಸಂಬಂಧಿಸಿದ ಇಲಾಖೆಗಳು ಕೂಡ ವಿಫಲವಾಗಿವೆ. ಅಕ್ರಮ ಹಣ ವರ್ಗಾವಣೆ, ಕಮಿಷನ್ ಪರ್ಸಂಟೇಜ್‌ ಅಥವಾ ಕಿಕ್‌ ಬ್ಯಾಕ್‌ ಪಡೆಯುವುದು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅನ್ವಯ ಅಪರಾಧ. ಪ್ರಧಾನಿ ಮತ್ತು ಇತರ ಸಂಬಂಧಿಸಿದ ಇಲಾಖೆಗಳುಯಾವುದೇ ಕ್ರಮ ತೆಗೆದುಕೊಳ್ಳದಿರುವುದು ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ’ ಎಂದೂ ಕಾಂಗ್ರೆಸ್‌ ಹೇಳಿದೆ.

ಎಲ್ಲ ಟೆಂಡರ್‌ಗಳ ತನಿಖೆ: ಬೊಮ್ಮಾಯಿ

‘ನಮ್ಮ ಸರ್ಕಾರ ಬಂದ ಮೇಲೆ ವಿವಿಧ ಇಲಾಖೆಗಳಲ್ಲಿ ಅಂತಿಮಗೊಳಿಸಿರುವ ಎಲ್ಲ ಟೆಂಡರ್‌ಗಳ ತನಿಖೆ ನಡೆಸುವಂತೆ ಮುಖ್ಯಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಅವರು ಸ್ವಯಂ ಪ್ರೇರಣೆಯಿಂದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಟೆಂಡರ್‌ಗಳಿಗೆ ಶೇ 40 ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಪ್ರಧಾನಿಯವರಿಗೆ ಪತ್ರ ಬರೆದಿತ್ತು.

‘ಗುತ್ತಿಗೆದಾರರ ಸಂಘದವರು ಜುಲೈ ತಿಂಗಳಲ್ಲಿ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಆಧಾರ ಅಥವಾ ನಿರ್ದಿಷ್ಟ ನಿದರ್ಶನಗಳನ್ನು ನೀಡಿಲ್ಲ. ಆದರೂ, ಸರ್ಕಾರ ಪಾರದರ್ಶಕವಾಗಿರಬೇಕು ಎಂಬ ಕಾರಣಕ್ಕೆ ತನಿಖೆ ನಡೆಸಲು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಸೂಚಿಸಿದ್ದೇನೆ’ ಎಂದರು.

ಟೆಂಡರ್‌ನಲ್ಲಿ ಪಾರದರ್ಶಕತೆ ತರಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿಎರಡು ಸಮಿತಿಗಳನ್ನು ರಚಿಸಲಾಗುವುದು. ಈ ಸಮಿತಿಗಳಿಗೆ ಟೆಂಡರ್ ಅಂದಾಜು ಮತ್ತು ಷರತ್ತುಗಳನ್ನು ಪರಿಶೀಲಿಸಿ ಒಪ್ಪಿಗೆ ಕೊಡುವ ಅಧಿಕಾರ ನೀಡಲು ಕಳೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಆದೇಶವನ್ನು ಹೊರಡಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT