ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40,000 ಉದ್ಯೋಗ, ₹6 ಸಾವಿರ ಕೋಟಿ ಹೂಡಿಕೆ: ಎಲೆಕ್ಟ್ರಾನಿಕ್ಸ್‌ ಕ್ರಾಂತಿಗೆ ರಹದಾರಿ

Last Updated 20 ಆಗಸ್ಟ್ 2020, 3:09 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯವನ್ನು ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ಗಳ ಉತ್ಪಾದನಾ ವಲಯದ ‘ರಾಜಧಾನಿ’ಯಾಗಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್‌ ಉದ್ಯಮಗಳ ಸ್ಥಾಪನೆಗಾಗಿ ಭೂಮಿ ಖರೀದಿಗೆ ಶೇ 25ರಷ್ಟು ನೇರ ಪ್ರೊತ್ಸಾಹ ಧನ ನೀಡುವುದೂ ಸೇರಿ ಹಲವು ರಿಯಾಯ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಬಳಿಕ ಬೇರೆ ಯಾವುದೇ ವಲಯದ ಉತ್ಪಾದನಾ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೇರು ಬಿಡಲು ಸಾಧ್ಯವಾಗಿಲ್ಲ. ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಎಲೆಕ್ಟ್ರಾನಿಕ್ಸ್ ಉದ್ಯಮಗಳನ್ನು ಸೆಳೆಯಲು ಹಲವು ರಿಯಾಯ್ತಿಗಳನ್ನು ಪ್ರಕಟಿಸಿರುವ ಬೆನ್ನಲ್ಲೇ, ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಗಲಿದೆ.

ಆರಂಭಿಕ ಹಂತದಲ್ಲಿ ಸುಮಾರು ₹6 ಸಾವಿರ ಕೋಟಿ ಹೂಡಿಕೆ ಆಗಲಿದ್ದು, 40 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಭಾರತೀಯ ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್ಸ್‌ ಸಂಘ ಬುಧವಾರ ಹಮ್ಮಿಕೊಂಡಿದ್ದ ‘ವಿಷನ್‌–2020 ಶೃಂಗಸಭೆ’ಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಈ ವಿಷಯ ಪ್ರಕಟಿಸಿದರು.

ಬೆಂಗಳೂರಿಗೆ ಅನ್ವಯವಿಲ್ಲ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿ ಖರೀದಿಗೆ ಶೇ 25ರ ಪ್ರೋತ್ಸಾಹ ಧನ ಅನ್ವಯವಾಗುವುದಿಲ್ಲ. ಇತರ ಜಿಲ್ಲೆಗಳ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಈ ಉದ್ಯಮಗಳು ನೆಲೆಗೊಳ್ಳಬೇಕು ಎಂಬ ಕಾರಣದಿಂದ ಇತರ ಜಿಲ್ಲೆಗಳಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಇತರ ಜಿಲ್ಲೆಗಳಲ್ಲಿ 50 ಎಕರೆಗಳವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸುವವರಿಗೆ ಈ ಪ್ರೋತ್ಸಾಹ ಧನ ಸಿಗುತ್ತದೆ. ಕೆಐಎಡಿಬಿ ಅಥವಾಕೆಎಸ್‌ಎಸ್‌ಐಡಿಸಿ ಯಿಂದ ಭೂಮಿ ಖರೀದಿಸಿದರೆ ಭೂಮಿಯ ಮಾರ್ಗಸೂಚಿ ದರ ಅಥವಾ ಭೂಮಿಯ ಖರೀದಿ ದರದ ಶೇ 25ರಷ್ಟು ರಿಯಾಯ್ತಿಯೂ ಸಿಗುತ್ತದೆ ಎಂದು ಅಶ್ವತ್ಥನಾರಾಯಣ ಅವರು ತಿಳಿಸಿದರು.

ಮೂರು ಜಿಲ್ಲೆಗಳಲ್ಲಿ ಕ್ಲಸ್ಟರ್‌
ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಉತ್ಪಾದನೆ ಮತ್ತು ವಿನ್ಯಾಸಕ್ಕೆ ಮೂರು ಜಿಲ್ಲೆಗಳಲ್ಲಿಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್‌ ಮತ್ತು ಎಲೆಕ್ಟ್ರಾನಿಕ್ಸ್‌, ಮೈಸೂರು ಜಿಲ್ಲೆಯಲ್ಲಿ ಪಿಸಿಬಿಎ(ಪ್ರಿಂಟೆಡ್‌ ಸರ್ಕ್ಯುಟ್‌ ಅಸೆಂಬ್ಲಿ ಬೋರ್ಡ್‌) ಮತ್ತು ಐಸಿಬಿ, ಚಿತ್ರದುರ್ಗದಲ್ಲಿ ಎಲ್‌ಇಡಿ ದೀಪಗಳ ಉತ್ಪಾದನೆ ಆಗಲಿವೆ. ಪ್ರತಿ ಜಿಲ್ಲೆಯಲ್ಲೂ 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ.

ಡಿಜಿಟಲ್‌ ಎಕಾನಮಿ ಮಿಷನ್
ರಾಜ್ಯದಲ್ಲಿ ಡಿಜಿಟಲ್‌ ಆರ್ಥಿಕತೆ ಉತ್ತೇಜಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸುವ ಉದ್ದೇಶದಿಂದ ‘ಕರ್ನಾಟಕ ಡಿಜಿಟಲ್‌ ಎಕಾನಮಿ ಮಿಷನ್‌’ ಸ್ಥಾಪನೆ ಮಾಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.‌ ಈ ಕ್ಷೇತ್ರದಲ್ಲಿ ಹೊಸದಾಗಿ ಬರುವ ಕಂಪನಿಗಳಿಗೆ ಸೇವೆಯನ್ನು ಒದಗಿಸುವ ಹಾಗೂ ನೀತಿ ನಿರೂಪಣೆ ಮಾಡುವ ಕೆಲಸವನ್ನು ಈ ಸಂಸ್ಥೆ ಮಾಡಲಿದೆ ಎಂದರು.

ಇತರ ಕೊಡುಗೆಗಳು
* ಕೈಗಾರಿಕಾ ಘಟಕ ಮತ್ತು ಯಂತ್ರಗಳ ಖರೀದಿಗಾಗಿ ಹೂಡಿಕೆ ಮಾಡುವ ಒಟ್ಟು ಮೊತ್ತದಲ್ಲಿ ಶೇ 20ರಷ್ಟು ರಿಯಾಯಿತಿ
* ಖರೀದಿ ಮಾಡಿದ ಭೂಮಿಯ ನೋಂದಣಿಗೆ ಖರ್ಚು ಮಾಡಿದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸರ್ಕಾರದಿಂದಲೇ ಪೂರ್ಣ ಮರುಪಾವತಿ
* ಭೂಪರಿವರ್ತನೆಗೆ ಖರ್ಚು ಮಾಡಿದ ಶುಲ್ಕದ ಮರುಪಾವತಿ
*ಐದು ವರ್ಷಗಳ ಕಾಲ ಪ್ರತಿ ಯೂನಿಟ್‌ ವಿದ್ಯುತ್‌ ಮೇಲೆ ₹1 ಸಬ್ಸಿಡಿ
* ಬಳಕೆ ಮಾಡುವ ವಿದ್ಯುತ್ ಮೇಲೆಐದು ವರ್ಷಗಳವರೆಗೆ ತೆರಿಗೆ ವಿನಾಯಿತಿ
* ಉತ್ಪನ್ನಗಳ ವಹಿವಾಟಿನ ಮೇಲೂ ಶೇ 1ರಷ್ಟು ರಿಯಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT