ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಸರಿದೂಗಿಸಲು ಆಸ್ತಿ ಮಾರಾಟಕ್ಕೆ ಮುಂದಾದ ಕೈಮಗ್ಗ ನಿಗಮ

ಮೂರು ತಿಂಗಳಿಂದ ಸಿಬ್ಬಂದಿಗೆ ವೇತನವಿಲ್ಲ; ಭೂಮಿ ಮಾರಾಟಕ್ಕೆ ಪ್ರಸ್ತಾವ
Last Updated 10 ಡಿಸೆಂಬರ್ 2020, 14:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಾತಿಗೊಂದು ನಿಗಮ ಮಾಡಬೇಕು ಎಂದು ಹೋರಾಟಗಳು ನಡೆದಿವೆ. ಆದರೆ, ನೇಕಾರರ ಅಭಿವೃದ್ಧಿಗೆ ರಚಿಸಿದ್ದಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಸಾಲದಿಂದ ಮುಕ್ತಿ ಪಡೆಯಲು ಬೆಂಗಳೂರಿನ ಪೀಣ್ಯ, ಹಲಸೂರು ಪ್ರದೇಶದಲ್ಲಿರುವ 3 ಎಕರೆ ಭೂಮಿ ಮಾರಾಟ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವ ಸ್ಥಿತಿಗೆ ತಲುಪಿದೆ.

ನಿಗಮವು ತೀವ್ರಆರ್ಥಿಕ ಸಂಕಷ್ಟದಲ್ಲಿದ್ದು, ₹110 ಕೋಟಿ ಸಾಲದ ಹೊರೆ ಹೊತ್ತಿದೆ. ಪ್ರತಿ ವರ್ಷ ಬಡ್ಡಿಗೆ ₹9 ಕೋಟಿ ಪಾವತಿಸಲಾಗುತ್ತಿದೆ. ಭೂಮಿ ಮಾರಾಟದಿಂದ ₹100 ಕೋಟಿಗೂ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ನಿಗಮದಡಿ 9 ಸಾವಿರ ನೇಕಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. 5,600 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಪವರ್‌ ಲೂಮ್‌ ಬಂದ ಮೇಲೆ ಕೈಮಗ್ಗ ಬಟ್ಟೆಗೆ ಬೇಡಿಕೆ ಕಡಿಮೆಯಾಗಿದೆ. ನೇಕಾರರಿಗೆ ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ₹130ರಿಂದ 150 ಮಾತ್ರ ಕೂಲಿ ದೊರೆಯುತ್ತಿರುವುದರಿಂದ ಅವರು ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ.

ವಿದ್ಯಾವಿಕಾಸ ಯೋಜನೆ

ಪ್ರತಿವರ್ಷ ನಿಗಮದ ನೇಕಾರರಿಗೆ ಕೆಲಸ ನೀಡಲು ಬಹುಮುಖ್ಯ ಮೂಲವೆಂದರೆ ಮಕ್ಕಳಿಗೆಸಮವಸ್ತ್ರ ಪೂರೈಸುವ ಶಿಕ್ಷಣ ಇಲಾಖೆಯ ವಿದ್ಯಾವಿಕಾಸ ಯೋಜನೆ. ನಿಗಮದ ನೇಕಾರರಿಗೆ 40 ಲಕ್ಷ ಮೀಟರ್‌ ಬಟ್ಟೆಯ ನೇಯುವ ಆದೇಶ ದೊರೆಯುತ್ತಿತ್ತು. ಈ ವರ್ಷ ಕೋವಿಡ್‌–19ನಿಂದಾಗಿ ಶಾಲೆಗಳು ಆರಂಭವಾಗದ್ದರಿಂದ ಆ ಆದೇಶವೂ ದೊರೆತಿಲ್ಲ.

ದಸರಾ, ದೀಪಾವಳಿಗೂ ವೇತನವಿಲ್ಲ

ನಿಗಮದಲ್ಲಿ 170 ಮಂದಿ ಕಾಯಂ ಸಿಬ್ಬಂದಿ ಸೇರಿದಂತೆ 290 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದಸರಾ, ದೀಪಾವಳಿ ಹಬ್ಬದ ಸಂದರ್ಭಲ್ಲಿಯೂ (ಮೂರು ತಿಂಗಳು) ವೇತನವಾಗಿಲ್ಲ. ನೌಕರರಿಗೆ ನೀಡಬೇಕಾದ ₹3 ಕೋಟಿ ಬಾಕಿ ಉಳಿದುಕೊಂಡಿದೆ.ಆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಎರಡು ವರ್ಷಗಳಿಂದ ನೇಕಾರರಿಗೂ ಪ್ರೋತ್ಸಾಹ ಧನ ನೀಡಿಲ್ಲ.

ಅನುದಾನ ಕಡಿತ

ಈ ಹಿಂದೆ ನಿಗಮಕ್ಕೆ ವಾರ್ಷಿಕ₹30 ಕೋಟಿ ಅನುದಾನ ನೀಡಲಾಗುತ್ತಿತ್ತು. ಈಗ ಅದನ್ನು₹15 ಕೋಟಿಗೆ ಇಳಿಸಲಾಗಿದೆ. ಹಿಂದಿನ ವರ್ಷಗಳಷ್ಟೇ ಅನುದಾನವನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಿಗಮವು ರಾಜ್ಯದಾದ್ಯಂತ 16 ಪ್ರಿಯದರ್ಶಿನಿ ಮಳಿಗೆಗಳಿದ್ದು,‌ವಾರ್ಷಿಕ ₹120 ಕೋಟಿ ವಹಿವಾಟು ಹೊಂದಿದೆ. ವರ್ಷದಿಂದ ವರ್ಷಕ್ಕೆ ಪ್ರತಿ ವರ್ಷ ₹5 ರಿಂದ ₹10 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ರಾಮಚಂದ್ರ.

ನೇಕಾರರಿಗೆ ಸಂಬಂಧಿಸಿದಂತೆ ಜವಳಿ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡಲೂಮ್‌ ನಿಗಮ, ಕೈಮಗ್ಗ ನಿಗಮಗಳಿವೆ. ಮೂರನ್ನೂ ಸೇರಿಸಿ, ಒಂದೇ ನಿಗಮ ಮಾಡಬೇಕಿದೆ. ಇದರಿಂದ ಅನುಕೂಲವಾಗಲಿದೆ ಎನ್ನುತ್ತಾರೆ ನಿಗಮದ ಅಧ್ಯಕ್ಷ ಸಿದ್ದು ಸವದಿ.

***

ನೇಕಾರರು ದೇಶದಲ್ಲಿಯೇ ಕನಿಷ್ಠ ಕೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದ ಕೂಲಿ ಹೆಚ್ಚಿಸಿಲ್ಲ. ನೇಕಾರರನ್ನು ಉಳಿಸಬೇಕೆಂದರೆ ಕೂಡಲೇ ಕೂಲಿ ದರ ಹೆಚ್ಚಿಸಬೇಕಿದೆ.

–ಸಿದ್ದು ಸವದಿ, ಅಧ್ಯಕ್ಷ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT