ಬೆಂಗಳೂರು: ಉನ್ನತ ಶಿಕ್ಷಣದಲ್ಲಿ ಕರ್ನಾಟಕದ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಅಲ್ಪ ಏರಿಕೆಯಾಗಿದೆ.
ಕಾಲೇಜಿಗೆ ತೆರಳಲು ಅರ್ಹ ಇರುವ ಒಟ್ಟು ಜನಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ದಾಖಲಾದ ವಿದ್ಯಾರ್ಥಿಗಳ ಸಂಖ್ಯೆಯೇ ಜಿಇಆರ್. 18ರಿಂದ 23 ವಯೋಮಾನ ದವರನ್ನು ಗುರುತಿಸಿ ಜಿಇಆರ್ ಲೆಕ್ಕಾಚಾರ ಹಾಕಲಾಗಿದೆ. ವೈದ್ಯಕೀಯ, ತಾಂತ್ರಿಕ, ಡಿಪ್ಲೊಮಾ ಹಾಗೂ ಇತರ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ವಿಶ್ಲೇಷಣೆಗೆ ಪರಿಗಣಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ 18ರಿಂದ 23 ವಯೋಮಾನದ 67.28 ಲಕ್ಷ ಜನಸಂಖ್ಯೆ ಇದೆ. ಇದರಲ್ಲಿ ಶೇ 33.84ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ಪಡೆಯಲು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ
ನೋಂದಾಯಿಸಿಕೊಂಡಿದ್ದಾರೆ.
2020–21ನೇ ಸಾಲಿನ ಉನ್ನತ ಶಿಕ್ಷಣ ಕುರಿತಾದ ಅಖಿಲ ಭಾರತ ಸಮೀಕ್ಷೆಗಾಗಿ (ಎಐಎಸ್‌ಎಚ್‌ಇ) ರಾಜ್ಯ ಸರ್ಕಾರ ಈ ಮಾಹಿತಿ ಸಂಗ್ರಹಿಸಿದೆ. 2019–20 ರಲ್ಲಿ ಜಿಇಆರ್ ಶೇ 33.61ರಷ್ಟು ಇತ್ತು.
ಉಡುಪಿ ಜಿಲ್ಲೆಯಲ್ಲಿ ಜಿಇಆರ್ ಶೇ 72.15, ದಕ್ಷಿಣ ಕನ್ನಡದಲ್ಲಿ ಶೇ 67.74, ಬೆಂಗಳೂರು ನಗರ ಶೇ 54.47 ರಷ್ಟು ದಾಖಲಾಗಿದೆ. ಚಾಮರಾಜನಗರದಲ್ಲಿ ಕೇವಲ ಶೇ 10.62 ರಷ್ಟು ದಾಖಲಾಗಿದ್ದು, ಇದು ರಾಜ್ಯದಲ್ಲೇ ಅತ್ಯಂತ ಕಡಿಮೆಯಾಗಿದೆ.
ರಾಷ್ಟ್ರೀಯ ಸರಾಸರಿಗೆ (ಶೇ 27.1) ಹೋಲಿಸಿದರೆ ಕರ್ನಾಟಕ ಜಿಇಆರ್ ಯಾವಾಗಲೂ ಹೆಚ್ಚಾಗಿತ್ತು. ಆದರೆ, ನೆರೆಯ ರಾಜ್ಯಗಳ ಜತೆ ವಿಶ್ಲೇಷಿಸಿದಾಗ ಕರ್ನಾಟಕದ ಜಿಇಆರ್ ಕಡಿಮೆ ಇದೆ.
2019–20 ರ ಎಐಎಸ್‌ಎಚ್‌ಇ ಅನ್ವಯ ತಮಿಳುನಾಡಿನಲ್ಲಿ ಜಿಇಆರ್ ಶೇ 51, ಕೇರಳ ಶೇ 39, ಆಂಧ್ರಪ‍್ರದೇಶ ಶೇ 36 ಮತ್ತು ತೆಲಂಗಾಣ ಶೇ 35ರಷ್ಟು ಇತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.