ಶುಕ್ರವಾರ, ಏಪ್ರಿಲ್ 23, 2021
22 °C

ಅಕ್ರಮ ಆಸ್ತಿ ಪ್ರಕರಣ ತನಿಖೆಗೆ ಅಸಹಕಾರ: ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನಿಖೆಗೆ ಅಸಹಕಾರ ತೋರಿದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಪೊಲೀಸ್ ಇನ್‌ಸ್ಪೆಕ್ಟರ್‌ ವಿಕ್ಟರ್‌ ಸೈಮನ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ ಬಂಧಿಸಿದೆ.

ವಿಕ್ಟರ್‌ ಸೈಮನ್‌ ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಂಗಳವಾರ ರಾಜ್ಯದ 28 ಸ್ಥಳಗಳ ಮೇಲೆ ದಾಳಿಮಾಡಿದ್ದ ಎಸಿಬಿ ಅಧಿಕಾರಿಗಳು, ಶೋಧ ನಡೆಸಿದ್ದರು. ಸೈಮನ್‌ ಅವರ ಬಳಿ ಈವರೆಗೆ ಆದಾಯಕ್ಕಿಂತಲೂ ₹ 2.28 ಕೋಟಿ ಮೌಲ್ಯದ ಹೆಚ್ಚಿನ ಆಸ್ತಿ ಪತ್ತೆಯಾಗಿದೆ.

ಎಲ್ಲ ಪ್ರಶ್ನೆಗಳಿಗೂ ‘ನನಗೆ ಗೊತ್ತಿಲ್ಲ’ ಎಂಬ ಉತ್ತರವನ್ನೇ ನೀಡುತ್ತಿದ್ದರು. ತನಿಖೆಗೆ ಅಸಹಕಾರ ತೋರಿದ ಕಾರಣದಿಂದ ಎಸಿಬಿ ಡಿವೈಎಸ್‌ಪಿ ವಜೀರ್‌ ಅಲಿಖಾನ್‌ ನೇತೃತ್ವದ ತನಿಖಾ ತಂಡ, ವಿಕ್ಟರ್‌ ಅವರನ್ನು ಬುಧವಾರ ಬೆಳಿಗ್ಗೆ ಬಂಧಿಸಿದೆ.

‘ವಿಕ್ಟರ್‌ ಸೈಮನ್‌ ಅವರನ್ನು ಬಂಧಿಸಿದ ಬಳಿಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯತು. ತನಿಖಾ ತಂಡದ ಕೋರಿಕೆಯಂತೆ ಆರೋಪಿಯನ್ನು ಶನಿವಾರದವರೆಗೂ ಎಸಿಬಿ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ’ ಎಂದು ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ತಿಳಿಸಿದ್ದಾರೆ.

‘ವಿಕ್ಟರ್‌ ಬಳಿಯಲ್ಲಿ ದುಬಾರಿ ಬೆಲೆ ಕಾರುಗಳ ಹಲವು ಕೀಗಳು ದೊರಕಿವೆ. ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಮೊಬೈಲ್‌ ತೆರೆಯಲು ಪಾಸ್‌ವರ್ಡ್‌ ನೀಡುತ್ತಿಲ್ಲ. ಮನೆಯಲ್ಲಿ ಪತ್ತೆಯಾಗಿರುವ ಭಾರಿ ಮೌಲ್ಯದ ಆಸ್ತಿ ದಾಖಲೆಗಳ ಬಗ್ಗೆಯೂ ಮಾಹಿತಿ ನೀಡುತ್ತಿಲ್ಲ. ಈ ಕಾರಣದಿಂದಾಗಿಯೇ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ಅಧಿಕಾರಿಗಳಿಂದ ತಪಾಸಣೆ: ಬೆಳಗಾವಿಯ ಉಪ ಮುಖ್ಯ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ಹಣಮಂತ ಶಿವಪ್ಪ ಚಿಕ್ಕಣ್ಣನವರ ಮೇಲೂ ಮಂಗಳವಾರ ಎಸಿಬಿ ದಾಳಿ ನಡೆದಿತ್ತು. ಅವರು ಅಲ್ಲಿ ಎಲೆಕ್ಟ್ರಿಕ್‌ ಉಪಕರಣಗಳ ಮಳಿಗೆ ಹೊಂದಿರುವುದು ಪತ್ತೆಯಾಗಿತ್ತು. ಅಲ್ಲಿ ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ಎಂಟು ಅಧಿಕಾರಿಗಳ ತಂಡ ಬುಧವಾರ ತಪಾಸಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಕ್ಟರ್ ಸೈಮನ್‌ ಮನೆಯಲ್ಲಿ 22.36 ಲೀಟರ್‌ ಹಾಗೂ ಹಾವೇರಿಯ ಕೈಗಾರಿಕೆಗಳು ಮತ್ತು ಬಾಯ್ಲರ್ಸ್‌ ಇಲಾಖೆಯ ಉಪ ನಿರ್ದೇಶಕ ಕೆ.ಎಂ. ಪ್ರಥಮ್‌ ಮನೆಯಲ್ಲಿ 34.5 ಲೀಟರ್‌ ಮದ್ಯದ ದಾಸ್ತಾನು ಪತ್ತೆಯಾಗಿತ್ತು. ಇಬ್ಬರ ವಿರುದ್ಧವೂ ಅಬಕಾರಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಕ್ರಮ ಆಸ್ತಿ ಪ್ರಮಾಣ

ರಾಜು ಪತ್ತಾರ್‌, ಲೆಕ್ಕಾಧಿಕಾರಿ, ಜೆಸ್ಕಾಂ, ಯಾದಗಿರಿ– ಶೇ 223.44

ಕೃಷ್ಣೇಗೌಡ, ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ, ಚಿಕ್ಕಬಳ್ಳಾಪುರ– ಶೇ 295.86

ಹಣಮಂತ ಶಿವಪ್ಪ ಚಿಕ್ಕಣ್ಣನವರ, ಉಪ ಮುಖ್ಯ ಎಲೆಕ್ಟ್ರಿಕ್‌ ಇನ್‌ಸ್ಪೆಕ್ಟರ್‌, ಬೆಳಗಾವಿ– ಶೇ 161.57

ಸುಬ್ರಮಣ್ಯ ಕೆ. ವಡ್ಡರ್‌, ಜಂಟಿ ನಿರ್ದೇಶಕ, ನಗರ ಮತ್ತು ಗ್ರಾಮಾಂತರ ಯೋಜನೆ, ಮೈಸೂರು– ಶೇ 82.33

ಮುನಿಗೋಪಾಲರಾಜು, ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಚೆಸ್ಕಾಂ, ಮೈಸೂರು– ಶೇ 196.27

ಚನ್ನವೀರಪ್ಪ, ಎಫ್‌ಡಿಎ, ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ, ಮೈಸೂರು ದಕ್ಷಿಣ– ಶೇ 149.51

ವಿಕ್ಟರ್‌ ಸೈಮನ್‌, ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿಎಂಟಿಎಫ್‌– ಶೇ 257.46

ಕೆ. ಸುಬ್ರಮಣ್ಯಂ, ಕಿರಿಯ ಎಂಜಿನಿಯರ್‌, ನಗರ ಯೋಜನೆ ಸಹಾಯಕ ನಿರ್ದೇಶಕರ ಕಚೇರಿ, ಬಿಬಿಎಂಪಿ ಯಲಹಂಕ ವಲಯ– ಶೇ 364.59

ಕೆ.ಎಂ. ಪ್ರಥಮ್‌, ಉಪ ನಿರ್ದೇಶಕ, ಕೈಗಾರಿಕೆಗಳು ಮತ್ತು ಬಾಯ್ಲರ್ಸ್‌ ಇಲಾಖೆ, ಹಾವೇರಿ– ಶೇ 118

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು