ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

9 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ: ನಗದು, ಚಿನ್ನಾಭರಣ, ದುಬಾರಿ ವಾಚುಗಳು ಪತ್ತೆ

Last Updated 9 ಮಾರ್ಚ್ 2021, 4:15 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಇಲಾಖೆಯ 9 ಅಧಿಕಾರಿಗಳ ಮನೆ ಮತ್ತು ಕಚೇರಿ ಸೇರಿ 11 ಜಿಲ್ಲೆಯ 28 ಕಡೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ ಬೆಳಿಗ್ಗೆ ಏಕ ಕಾಲದಲ್ಲಿ ದಾಳಿ ನಡೆಸಿದೆ.

ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿನ ಮನೆ, ಸಹೋದರನ ಮನೆ ಮೇಲೂ ದಾಳಿ ನಡೆಸಲಾಗಿದೆ.

ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಎಂಜಿನಿಯರ್ ಹನುಮಂತ ಶಿವಪ್ಪ ಚಿಕ್ಕಣ್ಣನವರ ಅವರಿಗೆ ಸೇರಿದ ಅಂಕೋಲ, ಗೊಲಂಬಾವಿ ಗ್ರಾಮದಲ್ಲಿನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆದಿದೆ.

ಮೈಸೂರು ನಗರ ಯೋಜನೆಗಳ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ.ಯಾದವ್ ಅವರ ಉಡುಪಿಯಲ್ಲಿನ ಮನೆ, ಕಾರವಾರದಲ್ಲಿನ ಮನೆ, ಮೈಸೂರಿನ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಲಾಗುತ್ತಿದೆ.

ಮೈಸೂರಿನ ಚೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮುನಿಗೋಪಾಲ ರಾಜ್ ಅವರ ಕಚೇರಿ, ಗೋಕುಲಂನಲ್ಲಿರುವ ಮನೆ, ಕನಕಪುರದಲ್ಲಿ ಇರುವ ಅವರ ಮನೆ ಮೇಲೆ ದಾಳಿಯಾಗಿದೆ.

ಮೈಸೂರು ದಕ್ಷಿಣ ಸಾರಿಗೆ ಕಚೇರಿಯ ಪ್ರಥಮ ದರ್ಜೆ ಸಹಾಯಕ ಚನ್ನವೀರಪ್ಪ ಅವರಿಗೆ ಸೇರಿದ ಮಂಡ್ಯದ ಕುವೆಂಪುನಗರ, ಹಾಲಕೆರೆ ಗ್ರಾಮ ಮತ್ತು ಅವರ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಯಾದಗಿರಿಯ ಜೆಸ್ಕಾಂ ಕಚೇರಿ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ.

ಬಿಎಂಎಫ್‌ಟಿ ಪೊಲೀಸ್ ಇನ್‌ಸ್ಪೆಕ್ಟರ್ ವಿಕ್ಟರ್ ಸಿಮೊನ್ ಅವರಿಗೆ ಸೇರಿದ ಬೆಂಗಳೂರು ಕಾವಲು ಬೈರಸಂದ್ರದಲ್ಲಿನ ಮನೆ, ಮೈಸೂರಿನಲ್ಲಿರುವ ಮಾವನ ಮನೆ, ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಬೆಂಗಳೂರಿನ ಕಚೇರಿ ಮೇಲೆ ದಾಳಿ ನಡೆದಿದೆ.

ಬಿಬಿಎಂಪಿ ಯಲಹಂಕ ವಲಯದ ನಗರ ಯೋಜನೆಗಳ ಕಿರಿಯ ಎಂಜಿನಿಯರ್ ಕೆ.ಸುಬ್ರಮಣ್ಯಂ ಅವರಿಗೆ ಸೇರಿದ ಶಂಕರನಗರದಲ್ಲಿನ ಮನೆ ಮತ್ತು ಕಚೇರಿಯಲ್ಲಿ ಶೋಧ ನಡೆಯುತ್ತಿದೆ.

ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ನ ಉಪನಿರ್ದೇಶಕ ಕೆ.ಎಂ. ಪ್ರಥಮ್ ಅವರ ಬೆಂಗಳೂರಿನ ನಾಗಶೆಟ್ಟಿಹಳ್ಳಿ ಮನೆ, ಸಂಜಯನಗರದಲ್ಲಿನ ಸಹೋದರನ ಮನೆ ಮೇಲೆ ದಾಳಿ ನಡೆಸಲಾಗಿದೆ.

ಕೆಲವರು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದು, ಮನೆಯಲ್ಲಿ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ, ದುಬಾರಿ ಬೆಲೆಯ ವಾಚುಗಳು, ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ. ಕಚೇರಿಯ ಕಡತಗಳನ್ನು ಮನೆಯಲ್ಲಿ ಇಟ್ಟುಕೊಂಡಿರುವುದೂ ಪತ್ತೆಯಾಗಿದೆ. ಎಲ್ಲಾ ಒಂಬತ್ತು ಅಧಿಕಾರಿಗಳ ಮನೆಗಳಲ್ಲಿ ಶೋಧ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT