ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳನ್ನು ಬೆದರಿಸಿ ‘ಎಸಿಬಿ‘ ಹೆಸರಲ್ಲಿ ಜೈಲಿಂದಲೇ ಸುಲಿಗೆ!

ಅಧಿಕಾರಿಗಳನ್ನು ಬೆದರಿಸಿದ ಪರಪ್ಪನ ಅಗ್ರಹಾರ ಕಾರಾಗೃಹದ ವಿಚಾರಣಾಧೀನ ಕೈದಿ
Last Updated 26 ಮಾರ್ಚ್ 2021, 10:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಚಾರಣಾಧೀನ ಕೈದಿಯೊಬ್ಬ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ಅಧಿಕಾರಿಗಳನ್ನು ಸುಲಿಗೆ ಮಾಡುತ್ತಿದ್ದ ಸಂಗತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಮುರಿಗೆಪ್ಪ ನಿಂಗಪ್ಪ ಕುಂಬಾರ (54) ಎಂಬ ವಿಚಾರಣಾಧೀನ ಕೈದಿಯನ್ನು ವಶಕ್ಕೆ ಪಡೆಯಲು ಚಿತ್ರದುರ್ಗ ಪೊಲೀಸರು ವಾರೆಂಟ್‌ ತೆಗೆದುಕೊಂಡಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಗ್ರಾಮದ ಮುರಿಗೆಪ್ಪ ಕೆಲ ವರ್ಷಗಳಿಂದ ಜೈಲು ಸೇರಿದ್ದಾನೆ.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ ಎಂಬುವರಿಗೆ ಮಾರ್ಚ್‌ 17ರಂದು ದೂರವಾಣಿ ಕರೆ ಮಾಡಿದ ಆರೋಪಿ, ಎಸಿಬಿ ಡಿವೈಎಸ್‌ಪಿ ಬಸವರಾಜ್‌ ಎಂಬ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಕಚೇರಿಯ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಯುತ್ತಿದ್ದು ಸಹಾಯ ಮಾಡುವ ನೆಪದಲ್ಲಿ ವಿಶ್ವಾಸ ಗಳಿಸಿದ್ದಾನೆ. ಸತೀಶ್‌ ಅವರು ಪರಿಶೀಲನೆ ಮಾಡಿದಾಗ ಚಿತ್ರದುರ್ಗ ಎಸಿಬಿ ಡಿವೈಎಸ್‌ಪಿ ಅವರ ಧ್ವನಿ ಅಲ್ಲವೆಂಬುದು ಖಚಿತವಾಗಿದೆ. ಇದರಿಂದ ಅವರು ನಗರ ಠಾಣೆಗೆ ಮಾರ್ಚ್‌ 18ರಂದು ದೂರು ನೀಡಿದ್ದರು.

‘ದೂರವಾಣಿ ಕರೆಯ ಜಾಡು ಹಿಡಿದು ಸಾಗಿದಾಗ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್‌ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಯಿತು. ಕಾರಾಗೃಹ ಇಲಾಖೆಯ ಡಿಜಿಪಿಗೆ ಮಾಹಿತಿ ನೀಡಲಾಗಿದ್ದು, ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ಆರೋಪಿಯ ಬಳಿ ಮೊಬೈಲ್‌ ಫೋನ್‌ ಹಾಗೂ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ. ಆರೋಪಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾಹಿತಿ ನೀಡಿದ್ದಾರೆ.

ಹಿರಿಯೂರಿನ ಪಂಚಾಯಿತಿರಾಜ್‌ ಇಲಾಖೆಯ ಎಂಜಿನಿಯರ್‌ ಬೆದರಿಸಿದ್ದ ಮುರಿಗೆಪ್ಪ, 2019ರ ಆ.28ರಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದನು. ಆರೋಪಿಯನ್ನು ಬಂಧಿಸಿದ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ರಾಜ್ಯದ ಹಲವು ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪ ಈತನ ಮೇಲಿದೆ. ಆರೋಪಿಯನ್ನು ವಶಕ್ಕೆ ಪಡೆಯಲು ಹಲವು ಜಿಲ್ಲೆಯ ಪೊಲೀಸರು ವಾರೆಂಟ್‌ ಹಿಡಿದು ಕಾಯುತ್ತಿದ್ದಾರೆ.

‘ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡುವುದಕ್ಕೂ ಮೊದಲು ಆರೋಪಿ ಮಾಹಿತಿ ಕಲೆಹಾಕುತ್ತಾನೆ. ಎಸಿಬಿ ಹೆಸರಿನಲ್ಲಿ ಅಧಿಕಾರಿಗಳನ್ನು ಬೆದರಿಸುತ್ತಲೇ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾನೆ. ರಾಜಕಾರಣಿಗಳ ಹೆಸರು ಪ್ರಸ್ತಾಪಿಸಿ ಪ್ರಭಾವ ಬೀರುತ್ತಾನೆ. ಅಸಹಾಯಕತೆಯಿಂದ ಅಧಿಕಾರಿ ಶರಣಾದ ತಕ್ಷಣ ಹಣಕ್ಕೆ ಬೇಡಿಕೆ ಇಡುತ್ತಾನೆ’ ಎಂದು ರಾಧಿಕಾ ತಿಳಿಸಿದರು.

ಹಣ ವರ್ಗಾವಣೆ ಮಾಡುವಂತೆ ಆರೋಪಿಯು ಬ್ಯಾಂಕ್‌ ಖಾತೆ ಸಂಖ್ಯೆ ನೀಡುತ್ತಾನೆ. ನಿಗದಿತ ಅವಧಿಯಲ್ಲಿ ಹಣ ಜಮಾ ಮಾಡುವಂತೆ ಸೂಚಿಸುತ್ತಾನೆ. ಇಲ್ಲವಾದರೆ ಬೇರೊಬ್ಬರನ್ನು ಕಳುಹಿಸಿ ಹಣ ನೀಡುವಂತೆ ಪೀಡಿಸುತ್ತಾನೆ. ಬ್ಯಾಂಕ್‌ ಖಾತೆಗಳ ಜಾಡು ಹಿಡಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಂದಾಜು 20ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ಮುರಿಗೆಪ್ಪನ ಮೇಲಿವೆ.

ಕಾನ್‌ಸ್ಟೆಬಲ್‌ ಆಗಿದ್ದ ಆರೋಪಿ

ಸಿವಿಲ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದ ಮುರಿಗೆಪ್ಪ 1986ರಿಂದ 2002ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾನೆ. ಹತ್ತು ತಿಂಗಳು ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾನೆ. ಮಾಹಿತಿ ಕಲೆ ಹಾಕುವ ನೈಪುಣ್ಯವನ್ನು ಅಲ್ಲಿಂದಲೇ ಕಲಿತಿದ್ದಾಗಿ ಸ್ವತಃ ಆರೋಪಿ ಹಲವು ಪ್ರಕರಣದಲ್ಲಿ ಒಪ್ಪಿಕೊಂಡಿದ್ದಾನೆ.

ಬಸ್‌ ವಾರೆಂಟ್‌ ದುರುಪಯೋಗ ಮಾಡಿಕೊಂಡ ಆರೋಪ 2002ರಲ್ಲಿ ಮುರಿಗೆಪ್ಪನ ಮೇಲೆ ಬಂದಿತ್ತು. ಎಫ್‌ಐಆರ್‌ ದಾಖಲಾಗಿದ್ದರಿಂದ ಇಲಾಖಾ ತನಿಖೆಯೂ ನಡೆದಿತ್ತು. ನ್ಯಾಯಾಲಯದಲ್ಲಿ ಆರೋಪಿ ನಿರ್ದೋಷಿಯಾಗಿ ಹೊರಬಂದರೂ ಇಲಾಖಾ ತನಿಖೆಯಲ್ಲಿ ತಪ್ಪಿತಸ್ಥನಾಗಿದ್ದನು. ಹೀಗಾಗಿ, ಕಾನ್‌ಸ್ಟೆಬಲ್‌ ಹುದ್ದೆಯಿಂದ ಪೊಲೀಸ್‌ ಇಲಾಖೆ ವಜಾಗೊಳಿಸಿತ್ತು.

ಯುವತಿ ಹೆಸರಲ್ಲಿದೆ ಸಿಮ್‌

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ ಅವರನ್ನು ಬೆದರಿಸಲು ಆರೋಪಿ ಬಳಸಿದ ಮೊಬೈಲ್‌ ಸಿಮ್‌ ಯುವತಿಯೊಬ್ಬರ ಹೆಸರಿನಲ್ಲಿದೆ. ಹಾಸನ ಜಿಲ್ಲೆಯಲ್ಲಿ ಸಿಮ್‌ ಖರೀದಿ ಮಾಡಲಾಗಿದೆ.

‘ಯುವತಿಯು ಸಿಮ್‌ ಬದಲಾವಣೆ ಮಾಡಲು ಮೊಬೈಲ್‌ ಅಂಗಡಿಗೆ ಭೇಟಿ ನೀಡಿದ್ದಾಗ ದಾಖಲೆ ಒದಗಿಸಿದ್ದರು. ಯುವತಿಯ ದಾಖಲೆಗಳನ್ನು ಅಂಗಡಿ ಮಾಲೀಕ ದುರುಪಯೋಗ ಮಾಡಿಕೊಂಡಿದ್ದಾನೆ. ಪ್ರಕರಣದಲ್ಲಿ ಅಂಗಡಿ ಮಾಲೀಕನ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT