ಸೋಮವಾರ, ಜುಲೈ 4, 2022
25 °C

ಎಸಿಬಿ ಲೋಕಾಯುಕ್ತದ ಅಧೀನದಲ್ಲೇ ಇರಬೇಕು: ನ್ಯಾ. ಪಿ. ವಿಶ್ವನಾಥ ಶೆಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಲೋಕಾಯುಕ್ತದ ಅಧೀನಕ್ಕೆ ತಂದು, ಲೋಕಾಯುಕ್ತಕ್ಕೆ ಹಿಂದಿನಂತೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಒತ್ತಾಯಿಸಿದರು.

ಇದೇ 27ರಂದು ಲೋಕಾಯುಕ್ತ ಹುದ್ದೆಯಿಂದ ನಿವೃತ್ತರಾಗುತ್ತಿರುವ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಎಸಿಬಿ ಸರ್ಕಾರದ ಅಧೀನದಲ್ಲಿ ಇರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತ ಒಂದು ಸ್ವತಂತ್ರ ಸಂಸ್ಥೆ. ಇದರ ಅಧೀನಕ್ಕೆ ಎಸಿಬಿಯನ್ನು ನೀಡಿದರೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಹೆಚ್ಚಿನ ಕೆಲಸ ಮಾಡಲು ಸಾಧ್ಯವಿದೆ’ ಎಂದರು.

ಹಿಂದೆ ಲೋಕಾಯುಕ್ತದ ಪೊಲೀಸ್ ವಿಭಾಗವೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವ ಅಧಿಕಾರ ಹೊಂದಿತ್ತು. ಅದನ್ನು ಬದಲಿಸಿ ಎಸಿಬಿ ಸೃಜಿಸಲಾಯಿತು. ಎಸಿಬಿ ಸರ್ಕಾರದ ಅಧೀನದಲ್ಲಿ ಇರುವುದು ಸರಿಯಲ್ಲ ಎಂದು ಹೇಳಿದರು.

ತಾವು ಲೋಕಾಯುಕ್ತ ಹುದ್ದೆಯ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಸಂಸ್ಥೆಯಲ್ಲಿ 7,680 ದೂರುಗಳು ಬಾಕಿ ಇದ್ದವು. 3,242 ಇಲಾಖಾ ವಿಚಾರಣಾ ಪ್ರಕರಣಗಳೂ ಇದ್ದವು. ಕೆಲವು ಪ್ರಕರಣಗಳು 15 ವರ್ಷಗಳಿಗಿಂತಲೂ ಹಿಂದಿನವು. ತಮ್ಮ ಐದು ವರ್ಷಗಳ ಅವಧಿಯಲ್ಲಿ 20,549 ದೂರುಗಳು ಹಾಗೂ 2,431 ಇಲಾಖಾ ವಿಚಾರಣಾ ಪ್ರಕರಣಗಳು ದಾಖಲಾಗಿವೆ. 13,000 ಇತರ (ಮಿಸಲೇನಿಯಸ್‌) ದೂರುಗಳು ದಾಖಲಾಗಿವೆ ಎಂದರು.

ತಮ್ಮ ಅವಧಿಯಲ್ಲಿ 20,199 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 2,677 ಇಲಾಖಾ ವಿಚಾರಣೆಗಳನ್ನು ಪೂರ್ಣಗೊಳಿಸಲಾಗಿದೆ. 12,000 ಇತರ ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ವಿವರಿಸಿದರು.

ಹುದ್ದೆಯ ಸೂಕ್ಷ್ಮತೆ ತಿಳಿದಿರಲಿಲ್ಲ: ‘ಹೆಚ್ಚಿನ ಆದಾಯದ ಕೆಲಸ ಇದ್ದರೂ ಸಮಾಜ ಸೇವೆಯ ಅವಕಾಶ ಎಂದು ಪರಿಗಣಿಸಿ ಲೋಕಾಯುಕ್ತ ಹುದ್ದೆಗೆ ಬಂದಿದ್ದೆ. ಬರುವಾಗ ಈ ಹುದ್ದೆಯ ಸೂಕ್ಷ್ಮತೆ ತಿಳಿದಿರಲಿಲ್ಲ. ನನ್ನ ಮೇಲೆ ಮಾರಕಾಸ್ತ್ರದಿಂದ ದಾಳಿಯಾದ ಬಳಿಕವೇ ಹುದ್ದೆಯ ಸೂಕ್ಷ್ಮತೆ ತಿಳಿಯಿತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಲೋಕಾಯುಕ್ತ ಸಂಸ್ಥೆಯಲ್ಲಿ ಅನೇಕ ಬದಲಾವಣೆಗಳನ್ನು ತರುವ ಕೆಲಸ ಮಾಡಿದ್ದೇನೆ. ಎಲ್ಲ ಆದೇಶಗಳನ್ನು ಆನ್‌ಲೈನ್‌ ಮೂಲಕ ಪ್ರಕಟಿಸಲಾಗುತ್ತಿದೆ. ಪ್ರಚಾರಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ಅಹವಾಲುಗಳ ಇತ್ಯರ್ಥಕ್ಕೆ ಆದ್ಯತೆ ನೀಡಲಾಗಿದೆ. ಲೋಕಾಯುಕ್ತದ ಶಿಫಾರಸುಗಳ ಕಾರಣಕ್ಕಾಗಿಯೇ ಕಾನೂನು ಮತ್ತು ನಿಯಮಗಳಲ್ಲಿ ಹಲವು ತಿದ್ದುಪಡಿಗಳು ಜಾರಿಯಾಗಿವೆ’ ಎಂದು ಹೇಳಿದರು.

1,226 ವರದಿಗಳಿಗೆ ಸರ್ಕಾರದ ಉತ್ತರವಿಲ್ಲ

ತಪ್ಪಿತಸ್ಥ ಸರ್ಕಾರಿ ನೌಕರರು ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12(3)ರ ಅಡಿಯಲ್ಲಿ 2,122 ಮತ್ತು ಸೆಕ್ಷನ್ 21(1)ರ ಅಡಿಯಲ್ಲಿ 587 ವರದಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಪೈಕಿ 1,226 ಪ್ರಕರಣಗಳಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಬರುವುದು ಬಾಕಿ ಇದೆ ಎಂದು ಲೋಕಾಯುಕ್ತ ವಿಶ್ವನಾಥ ಶೆಟ್ಟಿ ತಿಳಿಸಿದರು.

ಲೋಕಾಯುಕ್ತ ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದ ದೂರುಗಳ ಪೈಕಿ 36 ಪ್ರಕರಣಗಳಲ್ಲಿ ಆಪಾದಿತ ಸಾರ್ವಜನಿಕ ನೌಕರರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಅಭಿಯೋಜನಾ ಮಂಜೂರಾತಿ ಕೋರಲಾಗಿತ್ತು. 26 ಪ್ರಕರಣಗಳಲ್ಲಿ ಸಂಸ್ಥೆಯ ಕೋರಿಕೆಯನ್ನು ಸರ್ಕಾರ ತಿರಸ್ಕರಿಸಿದೆ. 10 ಪ್ರಕರಣಗಳಲ್ಲಿ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು