ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ಸ್ವಾಮೀಜಿ ವೇಷದಲ್ಲಿ ಸಿಕ್ಕಿಬಿದ್ದ ನಾಗೇಶ್

Last Updated 13 ಮೇ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೀತಿ ನಿರಾಕರಿಸಿದರೆಂಬ ಕಾರಣಕ್ಕೆ 24 ವರ್ಷದ ಯುವತಿ ಮೇಲೆ ಆ್ಯಸಿಡ್‌ ಎರಚಿ ಪರಾರಿಯಾಗಿದ್ದ ಆರೋಪಿ ನಾಗೇಶ್‌ ಬಾಬು (30), ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಶುಕ್ರವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಏಪ್ರಿಲ್ 28ರಂದು ಕೃತ್ಯ ಎಸಗಿದ್ದ ನಾಗೇಶ್, ತಮಿಳುನಾಡಿಗೆ ಹೋಗಿ ಸ್ವಾಮೀಜಿ ವೇಷ ಧರಿಸಿದ್ದ. ತಿರುವಣ್ಣಾಮಲೈನಲ್ಲಿರುವ ಶಿವ ದೇವಸ್ಥಾನದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ. ನಿತ್ಯವೂ ಧ್ಯಾನ ಹಾಗೂ ಪೂಜೆಯಲ್ಲಿ ತೊಡಗಿದ್ದ. ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರಿಗೂ ಉಪದೇಶ ಮಾಡುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಪತ್ತೆಗೆ ಎಂಟು ತಂಡಗಳನ್ನು ರಚಿಸಲಾಗಿತ್ತು. ಒಂದು ತಂಡ, ತಮಿಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಶೋಧ ನಡೆಸುತ್ತಿತ್ತು. ಶಿವ ದೇವಸ್ಥಾನದಲ್ಲಿ ಹೊಸ ಸ್ವಾಮೀಜಿ ಬಂದಿರುವ ಮಾಹಿತಿ ಸ್ಥಳೀಯರಿಂದ ಗೊತ್ತಾಗಿತ್ತು. ಪೊಲೀಸರ ತಂಡ, ಭಕ್ತರ ವೇಷದಲ್ಲಿ ದೇವಸ್ಥಾನದೊಳಗೆ ಹೋಗಿತ್ತು. ಸ್ವಾಮೀಜಿ ವೇಷದಲ್ಲಿದ್ದ ನಾಗೇಶ್‌ನನ್ನು ನೋಡಿ ಖಚಿತಪಡಿಸಿಕೊಂಡಿತ್ತು. ನಂತರ, ಆರೋಪಿಯನ್ನು ಬಂಧಿಸಿ ಬೆಂಗಳೂರಿಗೆ ಕರೆತರುತ್ತಿದೆ’ ಎಂದೂ ತಿಳಿಸಿವೆ.

ವಿಚಾರಣೆ: ‘ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿರುವ ಫೈನಾನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಗುರುವಾರ (ಏಪ್ರಿಲ್ 28) ಬೆಳಿಗ್ಗೆ ಆರೋಪಿ ಆ್ಯಸಿಡ್ ಎರಚಿದ್ದ. ಇದೀಗ ಆರೋಪಿ ಸಿಕ್ಕಿಬಿದ್ದಿದ್ದು, ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದು ಮೂಲಗಳು ಹೇಳಿವೆ. ‘ಏಳು ವರ್ಷದಿಂದ ಸ್ನೇಹ ಹೊಂದಿದ್ದ ಯುವತಿ, ತನ್ನನ್ನು ಪ್ರೀತಿಸಲು ನಿರಾಕರಿಸಿದರು’ ಎಂಬ ಕಾರಣಕ್ಕೆ ಆ್ಯಸಿಡ್ ಎರಚಿದ್ದ. ಆತನಿಗೆ ಆ್ಯಸಿಡ್‌ ಸಿಕ್ಕಿದ್ದು ಎಲ್ಲಿ? ಎಂಬುದು ವಿಚಾರಣೆಯಿಂದ ತಿಳಿಯಬೇಕು’ ಎಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT