ಮಂಗಳವಾರ, ಆಗಸ್ಟ್ 16, 2022
21 °C

ನಟನೆ, ಪುಸ್ತಕ ಪ್ರಕಟಣೆ ತಡೆ ನಿಯಮ ವಾಪಸಾತಿಗೆ ನೌಕರರ ಸಂಘದ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಸ್ತಕಗಳು–ಸಾಂದರ್ಭಿಕ ಚಿತ್ರ

ಬೆಂಗಳೂರು: ‘ಸರ್ಕಾರಿ ನೌಕರರು ಸಿನಿಮಾ, ಧಾರಾವಾಹಿಗಳಲ್ಲಿ ನಟನೆ, ಪುಸ್ತಕಗಳ ಪ್ರಕಟಣೆ ಮತ್ತು ರಾಜ್ಯ-ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸು ವುದನ್ನು ನಿಷೇಧಿಸಿರುವ ‘ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು –2020’ ಅನ್ನು ವಾಪಸ್‌ ‍ಪಡೆಯಬೇಕು ಎಂದು ರಾಜ್ಯ ಸಚಿವಾಲಯ ನೌಕರರ ಸಂಘ ಆಗ್ರಹಿಸಿದೆ.

‘ಈ ಆದೇಶದಿಂದಾಗಿ ಸರ್ಕಾರಿ ನೌಕರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ. ಈ ನಿಯಮ ವಾಪಸು ಪಡೆಯುವಂತೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಜ.12 ರಂದು ಮನವಿ ಸಲ್ಲಿಸಲಾಗುವುದು’ ಎಂದು ಸಚಿವಾಲಯದ ಸಂಘದ ಅಧ್ಯಕ್ಷ ಗುರುಸ್ವಾಮಿ ಹೇಳಿದ್ದಾರೆ.

‘ಸರ್ಕಾರಿ ನೌಕರರು ಕೂಡ ಮನುಷ್ಯರು ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು. ನಮ್ಮನ್ನು ಜೀತದಾಳಿನಂತೆ ನೋಡಬಾರದು. ಈಗ ಹೊರಡಿಸಿರುವ ಅಧಿಸೂಚನೆಯನ್ನು ವಾಪಸ್ ಪಡೆಯಬೇಕು’ ಎಂದು ಕೋರಿದ್ದಾರೆ.

‘ಸರ್ಕಾರಿ ನೌಕರರು ಸರ್ಕಾರದ ಅನುಮತಿ ಇಲ್ಲದೆ ವಿದೇಶ ಪ್ರವಾಸ ಕೈಗೊಳ್ಳುವಂತಿಲ್ಲ, ಸರ್ಕಾರದ ಕಾರ್ಯವಿಧಾನವನ್ನು ಟೀಕಿಸುವಂತಿಲ್ಲ, ಯಾವುದೇ ಸಮಿತಿ ಮತ್ತು ಪ್ರಾಧಿಕಾರದ ಮುಂದೆ ಸಾಕ್ಷ್ಯ ನೀಡುವಂತಿಲ್ಲ. ಸರ್ಕಾರಿ ನೌಕರರು ವಂತಿಗೆ ಪಡೆಯುವಂತಿಲ್ಲ, ವಿವಾಹ ವಾರ್ಷಿಕೋತ್ಸವ, ಧಾರ್ಮಿಕ ವಿಧಿವಿಧಾನಗಳ ಸಂದರ್ಭದಲ್ಲಿ ನೀಡುವ ಉಡುಗೊರೆ ಪಡೆಯಲು ಅವಕಾಶವಿಲ್ಲ ಎಂದು ಹೇಳಿರುವುದು ಎಷ್ಟರಮಟ್ಟಿಗೆ ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಆಕಾಶವಾಣಿ, ದೂರದರ್ಶನ, ಪತ್ರಿಕೆಗಳಿಗೆ ಲೇಖನ ಬರೆಯುವಂತಿಲ್ಲ, ಸಾಂಸ್ಕೃತಿಕ ಕಾರ್ಯಕ್ರಮ ನೀಡು ವಂತಿಲ್ಲ. ದೂರದರ್ಶನ ಹಾಗೂ ಇತರ ವಾಹಿನಿಗಳ ಧಾರಾವಾಹಿಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಆರ್ಥಿಕ ಉದ್ದೇಶವಲ್ಲದ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಯಾವುದೇ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಅದು ನೌಕರರು ಪಡೆಯುವ ಮಾಸಿಕ ಸಂಬಳಕ್ಕಿಂತ ಹೆಚ್ಚಾಗಿದ್ದರೆ, ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಳಿಕೆ ರಜೆ ಸೌಲಭ್ಯ ರದ್ದತಿಗೆ ಆಕ್ಷೇಪ: ‘ಕೋವಿಡ್ ಸಂದರ್ಭದಲ್ಲೂ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ನೀಡಿದ್ದೇವೆ. ಹೀಗಿದ್ದರೂ ಕೋವಿಡ್ ನಂತರದ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ 2021ರ ಜ. 1ರಿಂದ ಡಿ. 31ರವರೆಗೆ ಸರ್ಕಾರಿ ನೌಕರರಿಗೆ ಗಳಿಕೆ ರಜೆ ನಗದೀ ಕರಣ ಸೌಲಭ್ಯ ರದ್ದುಗೊಳಿಸಿರುವುದನ್ನು ಹಿಂಪಡೆಯಬೇಕೆಂದು’ ಎಂದು ಗುರುಸ್ವಾಮಿ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು