ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ 266 ಪಾಲುದಾರಿಕೆ ಒಪ್ಪಂದ: ರಾಜನಾಥ್ ಸಿಂಗ್

Last Updated 16 ಫೆಬ್ರುವರಿ 2023, 5:03 IST
ಅಕ್ಷರ ಗಾತ್ರ

ಬೆಂಗಳೂರು: ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು ₹80,000 ಕೋಟಿ ಮೊತ್ತದ 266 ಸಹಭಾಗಿತ್ವಕ್ಕೆ ‘ಬಂಧನ್‌’ ಕಾರ್ಯಕ್ರಮದಡಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ತಿಳಿಸಿದರು.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಉತ್ತೇಜಿಸುವ ಉದ್ದೇಶದಿಂದ ‘ಬಂಧನ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

2023–24ರ ಸಾಲಿನ ರಕ್ಷಣಾ ಉತ್ಪನ್ನಗಳ ಖರೀದಿಗಾಗಿ ನಿಗದಿ ಮಾಡಿರುವ ಒಟ್ಟು ಮೊತ್ತದಲ್ಲಿ ಶೇ 75ರಷ್ಟನ್ನು ದೇಶೀಯ ಉದ್ಯಮಕ್ಕೆ ಮೀಸಲಿಡಲಾಗಿದೆ. ಕಳೆದ ಹಣಕಾಸು ವರ್ಷಕ್ಕಿಂತ ಇದು ಶೇ 7ರಷ್ಟು ಅಧಿಕವಾಗಿದೆ ಎಂದರು.

ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ, ಹೆಲಿಕಾಪ್ಟರ್‌ ಎಂಜಿನ್‌ಗಳ ಬಾಳಿಕೆಯ ಕ್ಷಮತೆ ಹೆಚ್ಚಿಸುವುದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ ಹಾಗೂ ಫ್ರಾನ್ಸ್‌ನ ಸಫ್ರಾನ್‌ ಹೆಲಿಕಾಪ್ಟರ್‌ ಎಂಜಿನ್‌ ಸಂಸ್ಥೆಗಳ ನಡುವೆ ತಿಳಿವಳಿಕೆ ಒಪ್ಪಂದವಾಗಿದೆ. ಬಿಇಎಲ್‌ ಹಾಗೂ ಎಡಿಎ ನಡುವೆ ಸುಧಾರಿತ ಮಧ್ಯಮ ಯುದ್ಧ ವಿಮಾನಗಳಿಗಾಗಿ ಒಪ್ಪಂದವಾಗಿದೆ. ಭಾರತದಲ್ಲಿ ರಾಕೆಟ್‌ಗಳ (122 MM GRAD BMER ಹಾಗೂ NONER) ಉತ್ಪಾದನೆಗೆ ಬಲ್ಗೇರಿಯಾದ ಬುಲ್ಸ್‌ ಎಕ್ಸ್‌ಪ್ರೋ ಲಿಮಿಟೆಡ್‌ ಕಂಪನಿಯ ನಡುವೆ ಭಾರತ್‌ ಡೈನಾಮಿಕ್ಸ್‌ ಲಿಮಿಟೆಡ್‌ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ವಿವರಿಸಿದರು.

ನವಭಾರತದ ಹೊಸ ರಕ್ಷಣಾ ವಲಯವನ್ನೇ ‘ಏರೋ ಇಂಡಿಯಾ’ ಜಗತ್ತಿಗೆ ಪ್ರದರ್ಶಿಸಿದೆ. ಇಂತಹ ಪ್ರದರ್ಶನವನ್ನು ಆಯೋಜಿಸಲು ಕರ್ನಾಟಕಕ್ಕಿಂತ ಉತ್ತಮ ರಾಜ್ಯ ಬೇರೊಂದಿಲ್ಲ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಈ ರಾಜ್ಯ ಅಷ್ಟು ಸಕ್ರಿಯವಾಗಿ ತೊಡಗಿಕೊಂಡಿದೆ ಎಂದು ಶ್ಲಾಘಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್, ಏರ್‌ ಚೀಫ್‌ ಮಾರ್ಷಲ್‌ ವಿ.ಆರ್. ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್. ಹರಿಕುಮಾರ್, ಸೇನಾ ಮುಖ್ಯಸ್ಥ ಜನರಲ್ ಮನೋಜ್‌ ಪಾಂಡೆ ಇದ್ದರು.

ನವೋದ್ಯಮಕ್ಕೆ ಸುಗ್ಗಿ
ರಕ್ಷಣಾ ವಲಯದಲ್ಲಿ ನವೋದ್ಯಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಐಡೆಕ್ಸ್‌ (https://idex.gov.in/) ಎಂಬ ಹೂಡಿಕೆ ತಾಣಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಏರೋ ಇಂಡಿಯಾ ಪ್ರದರ್ಶನದಲ್ಲಿ ಬುಧವಾರ ಚಾಲನೆ ನೀಡಿದರು. ಈ ಜಾಲತಾಣದ ಮೂಲಕವೇ ₹ 200 ಕೋಟಿಯಷ್ಟು ಬಂಡವಾಳ ಹೂಡಿಕೆ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸೈಬರ್ ಭದ್ರತೆ ಕುರಿತಂತೆ 28 ಸಮಸ್ಯೆಗಳನ್ನು ಪಟ್ಟಿಮಾಡಿದ್ದು, ಅವುಗಳನ್ನು ಪರಿಹರಿಸುವ ಸವಾಲುಗಳಿವೆ ಎಂದು ಹೇಳಿದ ಅವರು, ‘ಡಿಫೆನ್ಸ್ ಇಂಡಿಯಾ ಸ್ಟಾರ್ಟ್ಅಪ್ ಚಾಲೆಂಜಸ್’ನ (ಡಿಐಎಸ್ಸಿ 9) ಒಂಬತ್ತನೇ ಆವೃತ್ತಿ ಮೂಲಕ ಈ ಸವಾಲುಗಳನ್ನು ಅವರು ಅನಾವರಣಗೊಳಿಸಿದರು.

ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನವೋದ್ಯಮಗಳು ತಲೆಎತ್ತಿದ್ದು, ಅಭಿವೃದ್ಧಿಯಲ್ಲಿ ಅವುಗಳ ಕೊಡುಗೆ ಮಹತ್ವದ್ದು ಎಂದು ಶ್ಲಾಘಿಸಿದರು.

‘ಡಿಐಎಸ್ ಸಿ 6’, ‘ಐಡೆಕ್ಸ್ ಪ್ರೈಮ್‌’ನ ಮೊದಲ ಮೂರು ಆವೃತ್ತಿಗಳ ಸವಾಲುಗಳಿಗೆ ಜವಾಬು ಕೊಟ್ಟ ವಿಜೇತರನ್ನು ಹಾಗೂ ರಕ್ಷಣಾ ಬಾಹ್ಯಾಕಾಶ (ಮಿಷನ್ ಡೆಫ್‌ಸ್ಪೇಸ್) ಮಿಷನ್ ಅಡಿಯಲ್ಲಿ ಸ್ಪರ್ಧೆಯ ಒಂದನೇ ಹಂತದ ವಿಜೇತರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT