ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮೋತ್ಸವ ಯಶಸ್ಸು, ಎಚ್ಚೆತ್ತ ಬಿಜೆಪಿ; ಬೃಹತ್‌ ಸಮಾವೇಶಕ್ಕೆ ಸಿದ್ಧತೆ

Last Updated 6 ಆಗಸ್ಟ್ 2022, 0:52 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜನ್ಮದಿನೋತ್ಸವದ ಭರ್ಜರಿ ಯಶಸ್ಸು ಬಿಜೆಪಿಯನ್ನು ಬಡಿದೆಬ್ಬಿಸಿದ್ದು, ಅದೇ ರೀತಿಯಲ್ಲಿ ಬೃಹತ್‌ ಸಮಾವೇಶವೊಂದನ್ನು ಹಮ್ಮಿಕೊಳ್ಳುವ ಬಗ್ಗೆ ಕಮಲ ಪಾಳೆಯ ಚಿಂತನೆ ನಡೆಸಿದೆ.

ಇದೇ ತಿಂಗಳ ಕೊನೆಯಲ್ಲಿ ಸಮಾ ವೇಶ ನಡೆಸಲು ಉದ್ದೇಶಿಸಿದ್ದು, ಸ್ಥಳ ಮತ್ತು ದಿನಾಂಕ ನಿಗದಿಯಾಗಬೇಕಾಗಿದೆ. ಮುನಿಸಿಕೊಂಡಿರುವ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿ ಸಲು ಮತ್ತು ಅವರ ವಿಶ್ವಾಸ ಗೆಲ್ಲಲು ತಕ್ಷಣದಲ್ಲಿ ಇಂತಹದ್ದೊಂದು ಸಮಾ ವೇಶದ ಅಗತ್ಯವಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ, ಸುಳ್ಯ ಸಮೀಪದ ಬೆಳ್ಳಾರೆಯಲ್ಲಿ ಪಕ್ಷದ ಯುವ ಮೋರ್ಚಾ ನಾಯಕ ಪ್ರವೀಣ್‌ ಹತ್ಯೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದ ಪರಿಣಾಮ ಕಾರ್ಯಕ್ರಮ ರದ್ದುಪಡಿಸಲಾಗಿತ್ತು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಬಂದ ದಿನವೇ ಸಿದ್ದರಾಮಯ್ಯ ಜನ್ಮದಿನೋತ್ಸ
ವವೂ ನಡೆದಿತ್ತು. ಅದರಲ್ಲಿ ಕಾಂಗ್ರೆಸ್‌ ನಾಯಕರು ನಿರೀಕ್ಷಿಸಿದ್ದಕ್ಕಿಂತಲೂ ಭಾರಿ ಸಂಖ್ಯೆಯಲ್ಲಿ ಜನ ಭಾಗಹಿಸಿದ್ದು ಮತ್ತು ಕಾಂಗ್ರೆಸ್‌ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಇದೇ ವಿಷಯವನ್ನು ಯಡಿಯೂರಪ್ಪ ಅವರು ಶಾ ಗಮ ನಕ್ಕೂ ತಂದಿದ್ದಾರೆ. ‘ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಇಷ್ಟೆಲ್ಲಾ ಸಿದ್ಧತೆ ನಡೆಯುತ್ತಿದ್ದರೂ, ನಮ್ಮ ಪಕ್ಷದಲ್ಲಿ ಸಿದ್ಧತೆಯ ಕೊರತೆ ಇದೆ. ಸಮಾವೇಶಗಳು ನಡೆಯುತ್ತಿಲ್ಲ. ಕಾಂಗ್ರೆಸ್‌ ಪಕ್ಷ ಇದೇ ವೇಗದಲ್ಲಿ ಮುನ್ನಡೆದರೆ, ಕೊನೇ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಅಧ್ಯಕ್ಷರಾಗಲಿ, ಬೇರೇ ಯಾರೇ ಆಗಲಿ ಆ ಬಗ್ಗೆ ಗಮನಹರಿಸುತ್ತಿಲ್ಲ. ನಾನೇ ರಾಜ್ಯ ಪ್ರವಾಸ ಮಾಡಿ ಸಂಘಟನೆ ಮಾಡುತ್ತೇನೆ ಎಂದು ಹೇಳಿದರೂ ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಿದರೆ ರಾಜ್ಯಾದ್ಯಂತ ಸುತ್ತಾಡುತ್ತೇನೆ’ ಎಂದು ಶಾ ಅವರಿಗೆ ಯಡಿಯೂರಪ್ಪ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮವನ್ನು ಯಡಿಯೂರಪ್ಪ ಅವರು ಟಿ.ವಿ ಮೂಲಕ ಸಂಪೂರ್ಣ ವೀಕ್ಷಣೆ ಮಾಡಿದರು. ಆ ಬಳಿಕ ಅವರು ‘ಈ ಕಾರ್ಯಕ್ರಮ ಬಿಜೆಪಿಗೆ ಎಚ್ಚರಿಕೆಯ ಗಂಟೆ’ ಎಂಬ ತೀರ್ಮಾನಕ್ಕೆ ಬಂದಿದ್ದೂ ಮಾತ್ರವಲ್ಲದೇ, ‘ಸುಮ್ಮನೆ ಕೈಕಟ್ಟಿ ಕುಳಿತರೆ, ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಬಹುದು. ಬಿಜೆಪಿಗೆ ಇತರ ಪಕ್ಷಗಳಿಂದ ನಾಯಕರು ವಲಸೆ ಬರುವ ಮಾತು ಹಾಗಿರಲಿ, ಆ ಪಕ್ಷದತ್ತಲೇ ವಲಸೆ ಹೋದರೂ ಅಚ್ಚರಿ ಇಲ್ಲ’ ಎಂಬ ಆತಂಕವನ್ನು ತಮ್ಮ ಆಪ್ತರ ಬಳಿ ತೋಡಿಕೊಂಡಿದ್ದಾರೆ ಎಂದು ತಿಳಿಸಿವೆ.

‘ಭೇಟಿ ವೇಳೆ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಶಾ ಅವರು ಮುಖಂಡರಿಂದ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೆ, ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಬರಬೇಡಿ. ಸಂದರ್ಭ ಬಂದಾಗ ನಾನೇ ಬರಲು ಹೇಳುತ್ತೇನೆ. ಈಗ ಪಕ್ಷದ ಸಂಘಟನೆ ಬಗ್ಗೆ ಗಮನಹರಿಸಿ’ ಎಂದೂ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT