ಗುರುವಾರ , ಆಗಸ್ಟ್ 18, 2022
24 °C

ಮಹಾರಾಷ್ಟ್ರದೊಂದಿಗೆ ಪರಸ್ಪರ ಜಲಾಶಯಗಳ ನೀರು ಬಿಡುಗಡೆ ಮಾಹಿತಿ ಹಂಚಿಕೆಗೆ ಒಪ್ಪಿಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡೂ ರಾಜ್ಯಗಳ ನಡುವೆ ಮಳೆ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣ ಕ್ಷಣದ (ರಿಯಲ್‌ ಟೈಮ್‌ ಡಾಟಾ) ಮಾಹಿತಿ ಹಂಚಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ಕರ್ನಾಟಕ – ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆ ಶನಿವಾರ ನಡೆಯಿತು. ಮಹಾರಾಷ್ಟ್ರದ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ‘ಕೃಷ್ಣಾ ಮತ್ತು ಭೀಮಾ ನದಿಯ ಜಲಾನಯನ ಪ್ರದೇಶದಲ್ಲಿ ಪ್ರವಾಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಎರಡೂ ರಾಜ್ಯಗಳ ನಡುವೆ ಸಚಿವರು, ಕಾರ್ಯದರ್ಶಿಗಳ ಹಂತ ಹಾಗೂ ಕೆಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ನಿರ್ವಹಿಸಲು ತೀರ್ಮಾನಿಸಲಾಯಿತು’ ಎಂದರು.

‘ದೂಧ್ ಗಂಗಾ ಯೋಜನೆ ಉಭಯ ರಾಜ್ಯಗಳ ಜಂಟಿ ಯೋಜನೆ ಆಗಿದೆ. ಅನೇಕ ವರ್ಷಗಳಿಂದ ನನೆಗುದಿಯಲ್ಲಿರುವ ಈ ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿಕೊಂಡಿದೆ. ಇದರಿಂದ ಈ ಭಾಗದ ಜನರ ನೀರಾವರಿ ಸೌಲಭ್ಯ ಹೊಂದುವ ಆಕಾಂಕ್ಷೆ ಈಡೇರಲಿದೆ’ ಎಂದರು.

‘ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 4 ಟಿಎಂಸಿ ಅಡಿ ನೀರು ಹಾಗೂ ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ರಾಜ್ಯದಿಂದ ಅಷ್ಟೇ ಪ್ರಮಾಣದ ನೀರು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿ ರಚಿಸಲು ಕೂಡಾ ಸಭೆಯಲ್ಲಿ ತೀರ್ಮಾನಿಸಲಾಯಿತು’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಪ್ರವಾಹ ನಿರ್ವಹಣೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಅಧಿಕಾರಿಗಳ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.

‘ಮಹಾರಾಷ್ಟ್ರ, ಕರ್ನಾಟಕಕ್ಕಿಂತ ಮೇಲೆ ಇರುವ ರಾಜ್ಯವಾಗಿದ್ದು, ಪ್ರವಾಹದ ವೇಳೆ ನೀರುಬಿಟ್ಟ ಸಂದರ್ಭದಲ್ಲಿ ಅದರ ಸಂಪೂರ್ಣ ಮಾಹಿತಿಯನ್ನು ಆ ರಾಜ್ಯ ನಮ್ಮ ಜೊತೆ ಹಂಚಿಕೊಳ್ಳಬೇಕು. ಒಂದೇ ಬಾರಿಗೆ ನೀರು ಬಿಡದಂತೆ ಸೂಚನೆ ನೀಡಿದ್ದೇವೆ. ಅದಕ್ಕೆ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳು ಒಪ್ಪಿದ್ದಾರೆ’ ಎಂದರು.

‘ಆಲಮಟ್ಟಿ ಹಿನ್ನೀರಿನಲ್ಲಿ ಪ್ರವಾಹ, ಅಲ್ಲಿಂದ ಮುಂದೆ ನಾರಾಯಣ‍ಪುರದ ಅಚ್ಚುಕಟ್ಟು ಪ್ರದೇಶದಲ್ಲಿ ಪ್ರವಾಹ ಆಗದಂತೆ ಆಲಮಟ್ಟಿ ಜಲಾಶಯ ನಿರ್ವಹಣೆಯನ್ನು ಸರಿಯಾಗಿ ಮಾಡಬೇಕು. ರಿಯಲ್‌ ಟೈಮ್‌  ಡಾಟಾ ಪಡೆದುಕೊಂಡು ಸಮರ್ಪಕವಾಗಿ ನಿರ್ವಹಿಸಲು ಎರಡೂ ರಾಜ್ಯಗಳು ಒಪ್ಪಿವೆ ಎಂದರು’

‘20 ವರ್ಷಗಲಿಂದ ದೂಧ್‌ ಗಂಗಾ ಯೋಜನೆ ಪೂರ್ಣ ಆಗಿಲ್ಲ. ನಮ್ಮ ಭಾಗದಲ್ಲಿ ಯೋಜನೆಯ ಕೆಲಸ ಆಗಿದೆ. ಮಹಾರಾಷ್ಟ್ರ ಭಾಗದಲ್ಲಿ ವಿಳಂಬವಾಗಿದೆ. ಅದನ್ನು ಎರಡು ವರ್ಷದಲ್ಲಿ ಪೂರ್ಣಗೊಳಿಸಿ, ರಾಜ್ಯದ ಪಾಲಿನ ನೀರು ಹೊಂದಿಸಿಕೊಡಲು ಒಪ್ಪಿದ್ದಾರೆ’ ಎಂದೂ ತಿಳಿಸಿದರು.

‘ಅಲ್ಲದೆ, ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಏಪ್ರಿಲ್‌, ಮೇ ತಿಂಗಳಲ್ಲಿ ನೀರಿನ ಕೊರತೆ ಉಂಟಾಗುತ್ತಿದೆ. ಪ್ರತಿ ಬಾರಿ 4 ಟಿಎಂಸಿ ಅಡಿ ನೀರು ಬಿಡುವಂತೆ ನಾವು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಈ ನೀರಿಗೆ 2013ರಿಂದ ಹಣ ಕೊಡುತ್ತಿದ್ದೆವು. ಅದರ ಬದಲು ಸೊಲ್ಲಾಪುರ ತಾಲ್ಲೂಕಿನ ಜತ್ತದಲ್ಲಿ ಮಳೆಗಾಲದಲ್ಲಿ ನೀರು ಕೊಡುವಂತೆ ಮಹಾರಾಷ್ಟ್ರದವರು ಕೇಳಿದ್ದಾರೆ. ಬೇಸಿಗೆ ಸಮಯದಲ್ಲಿ ಅವರು ನಮಗೆ 4 ಟಿಎಂಸಿ ನೀರು ಕೊಡಲು ಒಪ್ಪಿದ್ದು, ಮಳೆಗಾಲದಲ್ಲಿ ನಾವು ಅವರಿಗೆ ಕೊಡಲು ಒಪ್ಪಿಕೊಂಡಿದ್ದೇವೆ. ಈ ಬಗ್ಗೆ ಎರಡೂ ರಾಜ್ಯಗಳ ತಾಂತ್ರಿಕ ಸಮಿತಿ ಕ್ರಮ ತೆಗೆದುಕೊಳ್ಳಲಿದೆ’ ಎಂದರು.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು