ಸೋಮವಾರ, ಜನವರಿ 18, 2021
22 °C
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ; ವಿದ್ಯಾರ್ಥಿನಿಯರಿಗೆ 72 ಸುವರ್ಣ ಪದಕ

ಪರಿಶ್ರಮಕ್ಕೆ ಒಲಿದ ಚಿನ್ನದ ಗರಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶ್ರದ್ಧೆ ಮತ್ತು ಪರಿಶ್ರಮಕ್ಕೆ ಯಾವತ್ತೂ ಬೆಲೆ ಇದೆ ಎಂಬುದಕ್ಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವ ಸಾಕ್ಷಿಯಾಯ್ತು. ಅಂದುಕೊಂಡಿದ್ದನ್ನು ಸಾಧಿಸಿದ ಸಂತೃಪ್ತಿ ಹಾಗೂ ಹೊಸ ಸಾಧನೆಯತ್ತ ಮುನ್ನುಗ್ಗುವ ಉತ್ಸಾಹ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳ ಮೊಗದಲ್ಲಿ ಕಾಣುತ್ತಿತ್ತು.

ಚಿನ್ನದ ಪದಕಕ್ಕೆ ಕೊರಳೊಡ್ಡಿದ ವಿದ್ಯಾರ್ಥಿಗಳು, ಕೃಷಿ ಕ್ಷೇತ್ರದ ತಮ್ಮ ಜ್ಞಾನ ಹೊಲಗಳನ್ನು ತಲುಪಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಬಿಎಸ್ಸಿ (ಕೃಷಿ) ಪದವಿಯಲ್ಲಿ 11 ಚಿನ್ನದ ಪದಕ ಮತ್ತು ಎರಡು ಚಿನ್ನದ ಪ್ರಮಾಣಪತ್ರ ಪಡೆದ ಶರತ್‌ ಕೊಠಾರಿ ಹಾಸನದ ಕೃಷಿ ಕಾಲೇಜಿನ ವಿದ್ಯಾರ್ಥಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಹೊನ್ನೆಹಕ್ಕಲು ಕುಗ್ರಾಮದ ಶರತ್ ಅವರ ತಂದೆ ರೈತ. ಒಂದು ಎಕರೆ ಜಮೀನು ಹೊಂದಿರುವ ಅವರು ಕೃಷಿಯನ್ನೇ ಅವಲಂಬಿಸಿದ್ದಾರೆ. ಪ್ರಸ್ತುತ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅವರು, ಮುಂದೆ, ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬಯಕೆ ಹೊಂದಿದ್ದಾರೆ.

’ತಂದೆ–ತಾಯಿಯನ್ನು ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇನೆ. ಹೆಚ್ಚು ಚಿನ್ನದ ಪದಕ ಪಡೆದಿರುವುದು ಅವರಲ್ಲಿ ಹೆಮ್ಮೆ ಮೂಡಿಸಿದೆ’ ಎಂದು ಅವರು ಹೇಳಿದರು.

ಮಂಡ್ಯದ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ ಕಲಿತಿರುವ ಆರ್. ರಾಹುಲ್‌ ಗೌಡ, ಒಟ್ಟು 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕೃಷಿ ಕುಟುಂಬದಿಂದ ಬಂದ ಅವರ ತಂದೆ ರೈತ, ತಾಯಿ ಶಿಕ್ಷಕಿ.

‘ವೈದ್ಯಕೀಯ ಓದಬೇಕೆಂದು ಬಯಸಿದ್ದ ನಾನು ಕೊನೆಗೆ ಕೃಷಿ ಕೋರ್ಸ್‌ ಆಯ್ಕೆ ಮಾಡಿಕೊಂಡೆ. ಆಸಕ್ತಿಯಿಂದ ಓದಿದ್ದರಿಂದ 9 ಪದಕ ಪಡೆಯಲು ಸಾಧ್ಯವಾಯಿತು. ಜೀವವೈವಿಧ್ಯ ವಿಷಯದ ಮೇಲೆ ಆಸಕ್ತಿ ಇದೆ. ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಐಎಫ್‌ಎಸ್‌ ಅಧಿಕಾರಿಯಾಗುವ ಕನಸಿದೆ’ ಎಂದು ರಾಹುಲ್‌ ಹೇಳಿಕೊಂಡರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿರುವ ಪಿ. ಹಂಸ ಬಿಎಸ್ಸಿಯಲ್ಲಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಒಟ್ಟು 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಸದ್ಯ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾರೆ.

‘ವೈದ್ಯಕೀಯ ಕೋರ್ಸ್‌ ಸೇರುವ ಹಂಬಲವಿತ್ತು. ಸೀಟು ಸಿಗದಿದ್ದಾಗ ಕೃಷಿ ವಿಷಯ ಆಯ್ಕೆ ಮಾಡಿಕೊಂಡೆ. ಈಗ ಖುಷಿಯಾಗುತ್ತಿದೆ. ಕೃಷಿ ಮತ್ತು ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದೇನೆ’ ಎಂದು ಹಂಸ ಹೇಳಿದರು. 

ಒಟ್ಟು 986 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 638 ಪದವಿ, 280 ಸ್ನಾತಕೋತ್ತರ ಪದವಿ, 68 ಜನರಿಗೆ ಡಾಕ್ಟೊರಲ್ ಪದವಿ ಪ್ರದಾನ ಮಾಡಲಾಯಿತು. 41 ವಿದ್ಯಾರ್ಥಿನಿಯರು 72 ಚಿನ್ನದ ಪದಕ ಗಳಿಸಿದರು. ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಶೈಕ್ಷಣಿಕ ವರದಿ ಮಂಡಿಸಿದರು.

‘ಕೃಷಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಹೆಚ್ಚಲಿ’
‘ಕೃಷಿ ಕ್ಷೇತ್ರದಲ್ಲಿಯೂ ಕೃತಕ ಬುದ್ಧಿಮತ್ತೆ, ಜೈವಿಕ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ದತ್ತಾಂಶ ವಿಶ್ಲೇಷಣೆಗೆ ಹೇರಳ ಅವಕಾಶಗಳಿವೆ. ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಈ ವಿಷಯಗಳ ಪರಿಣಿತರಾಗಿಲ್ಲ. ಕೃಷಿ ವಿದ್ಯಾರ್ಥಿಗಳು ಇತ್ತ ಗಮನ ಹರಿಸಿದರೆ ಉತ್ತಮ ಭವಿಷ್ಯವಿದೆ’ ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್‌ ಹೇಳಿದರು.

‘ಕೃಷಿ ಮತ್ತು ಸಾಗರ ವಿಜ್ಞಾನ ಕ್ಷೇತ್ರಗಳಲ್ಲಿ ಮಾಹಿತಿ ತಂತ್ರಜ್ಞಾನದ ಸಮರ್ಪಕ ಬಳಕೆಗೆ ರಾಷ್ಟ್ರೀಯ ಮಟ್ಟದಲ್ಲಿ ವ್ಯವಸ್ಥಿತ ಚೌಕಟ್ಟು ರೂಪಿಸುವ ಅಗತ್ಯವಿದೆ’ ಎಂದೂ ಹೇಳಿದರು.

‘2030ರ ವೇಳೆಗೆ ವಿಶ್ವದ ಜನಸಂಖ್ಯೆ ಸಾವಿರ ಕೋಟಿ ಆಗಲಿದೆ. ಆಗ ಆಹಾರ ಉತ್ಪಾದನೆ ಪ್ರಮಾಣ ಶೇ.70ರಷ್ಟು ಹೆಚ್ಚಳ ಆಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಹಾರ ಭದ್ರತೆ ಕಡೆಗೆ ಗಮನ ಕೇಂದ್ರೀಕರಿಸುವ ಅಗತ್ಯವಿದೆ’ ಎಂದರು. 

‘ಕೃಷಿಯಲ್ಲಿ ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಕೆಯಲ್ಲಿ ದೇಶ ಮುಂಚೂಣಿಯಲ್ಲಿದೆ. ಈಗಾಗಲೇ ಮಣ್ಣು, ವಾತಾವರಣದ ಸ್ಥಿತಿಗತಿ, ಬೆಳೆಗಳ ಅಂದಾಜು ಮತ್ತಿತರ ಕ್ಷೇತ್ರದಲ್ಲಿ ತಂತ್ರಜ್ಞಾನವು ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ’ ಎಂದು ತಿಳಿಸಿದರು.

‘ವಿಶ್ವವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಲಿ’
‘ರಾಜ್ಯದಲ್ಲಿ 4,000 ಕೃಷಿ ವಿಜ್ಞಾನಿಗಳು ಇದ್ದಾರೆ. ಪ್ರತಿಯೊಬ್ಬರೂ ನಾಲ್ಕು ಗ್ರಾಮಗಳನ್ನು ದತ್ತು ಪಡೆಯಬೇಕು. ಈಗಾಗಲೇ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಪ್ರತಿ ತಾಲ್ಲೂಕಿಗೆ ನೋಡಲ್ ಅಧಿಕಾರಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆದು, ಕೃಷಿಯನ್ನು ಅಭಿವೃದ್ಧಿ ಪಡಿಸಿ ಅವುಗಳನ್ನು ಮಾದರಿ ಗ್ರಾಮಗಳನ್ನಾಗಿ ಮಾಡಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

‘20 ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ – ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ. ಈಗ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಆಹಾರ ಮತ್ತು ಕೃಷಿ ಎಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇಕಡ 15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು