ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಲೈಕೊ ಫಾಸ್ಪೇಟ್’: ಜೀವ ವೈವಿಧ್ಯಕ್ಕೆ ಕಂಟಕ, ಹಲವು ಜಿಲ್ಲೆಗಳಲ್ಲಿ ವ್ಯಾಪಕ ಬಳಕೆ

Last Updated 21 ಮಾರ್ಚ್ 2022, 19:34 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕಳೆ ನಾಶಕ್ಕಾಗಿ ಅತ್ಯಂತ ಅಪಾಯಕಾರಿ ‘ಗ್ಲೈಕೊ ಫಾಸ್ಪೇಟ್’ ರಾಸಾಯನಿಕವನ್ನುವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಅಮೂಲ್ಯ ಜೀವ ವೈವಿಧ್ಯಗಳ ಭಂಡಾರ ನಾಶವಾಗುತ್ತಿದೆ. ಭೂಮಿಯ ಒಡಲು ಮತ್ತು ಅಂತರ್ಜಲ ವಿಷಮಯವಾಗುತ್ತಿದೆ. ಕೃಷಿ ಭೂಮಿ ಬರಡಾಗುತ್ತಿದೆ.

ನೆರೆಯ ಕೇರಳದ ಕೃಷಿಕರು ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಗುತ್ತಿಗೆ ಪಡೆದು ಅಪಾರ ಪ್ರಮಾಣದಲ್ಲಿ ಶುಂಠಿ ಬೆಳೆಯುತ್ತಿರುವ ಪ್ರದೇಶಗಳು ಮತ್ತು ಕೊಡಗಿನ ಕಾಫಿ ಮತ್ತು ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ಸಮಸ್ಯೆ ತಲೆದೋರಿದೆ. ವಿಶೇಷವಾಗಿ ಚಾಮರಾಜನಗರ, ಕೊಡಗು, ಹಾಸನ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ರಾಸಾಯನಿಕವನ್ನು ಭಾರೀ ಪ್ರಮಾಣದಲ್ಲಿ ಬಳಸಲಾಗುತ್ತಿದೆ.

‘ಪ್ರಜಾವಾಣಿ’ಗೆ ಈ ಕುರಿತು ಮಾಹಿತಿ ನೀಡಿದ ಪರಿಸರ ಪ್ರೇಮಿಯೂ ಆಗಿರುವ ಹುಣಸೂರಿನ ರೈತ ಸಂಜಯ್‌, ಹುಣಸೂರು ತಾಲ್ಲೂಕಿನಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ ಕಳೆನಾಶಕ ರಾಸಾಯನಿಕ ವ್ಯಾಪಕ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಕೆಲವೇ ವರ್ಷಗಳ ಹಿಂದೆ ₹5 ಲಕ್ಷದಿಂದ ₹10 ಲಕ್ಷದಷ್ಟುಗ್ಲೈಕೊ ಫಾಸ್ಪೇಟ್ ಮಾರಾಟವಾಗುತ್ತಿದ್ದದ್ದು ಈಗ ಅದರ ವಹಿವಾಟು ₹8 ಕೋಟಿಗೆ ತಲುಪಿದೆ ಎಂದರು.

ಮನೆ ಮನೆಗಳಲ್ಲಿ ದೊಡ್ಡ ದೊಡ್ಡ ಕ್ಯಾನ್‌ಗಳನ್ನು ರೈತರು ಇಟ್ಟುಕೊಳ್ಳುತ್ತಿದ್ದಾರೆ. ಒಮ್ಮೆ ಇದನ್ನು ಸಿಂಪಡಿಸಿದರೆ ಸಾಕು, ಎಲ್ಲ ಕಳೆಗಳು, ಕೀಟಗಳು ನಾಶವಾಗುತ್ತವೆ. ಇದರಿಂದ ‘ಪ್ರೇರಿತ’ರಾದ ಕೊಡಗಿನ ಕಾಫಿ ತೋಟಗಳ ಮಾಲೀಕರೂ, ಅಡಿಕೆ ಕೃಷಿಕರೂ ಈ ರಾಸಾಯನಿಕವನ್ನು ಬಳಕೆ ಮಾಡಲಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.

ಗರಿಕೆ, ತುಂಬೆ, ಉತ್ತರಾಣಿ ಸೇರಿ ಅಪರೂಪದ ಔಷಧೀಯ ಸಸ್ಯಗಳು, ಜೇನು ಹುಳು, ಜೀರುಂಡೆ, ಮಿಂಚು ಹುಳುಗಳು ಸೇರಿ ಅನೇಕ ಬಗೆಯ ಪರೋಪಕಾರಿ ಕೀಟಗಳು ನಾಶವಾಗಿವೆ. ನಮ್ಮ ಒಂದು ತಾಲ್ಲೂಕಿನಲ್ಲೇ ವರ್ಷಕ್ಕೆ ಸುಮಾರು ₹8 ಕೋಟಿ ಮೌಲ್ಯದಷ್ಟು ಮೊತ್ತದ ಕಳೆ ನಾಶಕ ಮಾರಾಟವಾಗುತ್ತದೆ. ನೆರೆಯ ಎಚ್‌.ಡಿ.ಕೋಟೆ, ಪಿರಿಯಾಪಟ್ಟಣ ಸುತ್ತಮುತ್ತಲಿನ ತಾಲ್ಲೂಕುಗಳು ಸೇರಿದರೆ ಈ ರಾಸಾಯನಿಕ ವಾರ್ಷಿಕ ಮಾರಾಟದ ಮೊತ್ತ ₹30 ಕೋಟಿ ದಾಟಬಹುದು ಎನ್ನುತ್ತಾರೆ ಅವರು.

ಮಲೆನಾಡು ಭಾಗದ ಬೆಟ್ಟ– ಗುಡ್ಡಗಳಲ್ಲಿ ಬೆಳೆಯುವ ಆನೆ ಹುಲ್ಲೂ ಗ್ಲೈಕೊ ಫಾಸ್ಪೇಟ್ ಬಳಕೆಯಿಂದ ನಾಶವಾಗುತ್ತಿವೆ ಎಂದು ಅವರು ಹೇಳಿದರು.

‘ನಮ್ಮ ರಾಜ್ಯದ ಕೆಲವು ರೈತರು ಸುಲಭವಾಗಿ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಶುಂಠಿ ಬೆಳೆಗಾರರಿಗೆ ಭೂಮಿಯನ್ನು ಕೊಟ್ಟು ಭೂಮಿ ಬರಡು ಮಾಡಿ, ಜೀವ ವೈವಿಧ್ಯಗಳ ನಾಶಕ್ಕೆ ಕಾರಣರಾಗುತ್ತಿದ್ದಾರೆ. ಜಲಮೂಲವೂ ವಿಷಮಯವಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃಷಿ ಇಲಾಖೆ ಯಾವುದೇ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ ರೈತ ಸಂಜಯ್‌.

ಶಿವಮೊಗ್ಗ ಜಿಲ್ಲೆಯಲ್ಲಿ ವಾರ್ಷಿಕ ₹ 10 ಕೋಟಿ ಮೊತ್ತದ ಸರಾಸರಿ 2 ಲಕ್ಷ ಲೀಟರ್ ಕಳೆನಾಶಕ, ವಿಜಯಪುರ ಜಿಲ್ಲೆಯಲ್ಲಿ ವಾರ್ಷಿಕ ಅಂದಾಜು ₹4 ಕೋಟಿ ಮೊತ್ತದ ಕಳೆ ನಾಶಕ ರಾಸಾಯನಿಕ ಮಾರಾಟವಾಗುತ್ತಿದೆ.

‘ದ್ರಾಕ್ಷಿ ತೋಟ, ಕಬ್ಬಿನ ಹೊಲ, ಈರುಳ್ಳಿ, ಗೋಧಿ, ಕಡಲೆ, ತೊಗರಿ, ಜೋಳದ ಹೊಲ, ಲಿಂಬೆ ತೋಟಗಳಲ್ಲಿ ಮಳೆಗಾಲದಲ್ಲಿ ಏಳುವ ಕಳೆಯನ್ನು ಸ್ವಚ್ಛ ಮಾಡಲು ಕೂಲಿ ಆಳುಗಳ ಕೊರತೆ ಇರುವುದರಿಂದ ಹೆಚ್ಚಿನ ರೈತರು ಕಳೆ ನಾಶಕ ಸಿಂಪಡಿಸುವ ಸುಲಭ ವಿಧಾನಕ್ಕೆ ಮೊರೆ ಹೋಗಿದ್ದಾರೆ.‌ ಇದರಿಂದ ರೈತರಿಗೆ ಉಳಿತಾಯವಾಗುತ್ತದೆ. ಆದರೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆವಿಜಯಪುರ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್.

ಈ ಕುರಿತು ಪ್ರತಿಕ್ರಿಯೆಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಪ್ರಯತ್ನಿಸಿದಾಗ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ. ಹಲವು ಜಿಲ್ಲೆಗಳಲ್ಲಿ ಈ ರಾಸಾಯನಿಕ ಬಳಕೆಯ ಪ್ರಮಾಣವನ್ನು ಅಧ್ಯಯನ ನಡೆಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ.

ಕೇರಳದಲ್ಲಿ ನಿಷೇಧ, ಕರ್ನಾಟಕದಲ್ಲಿ ಬಳಕೆ!
ಗ್ಲೈಕೊ ಫಾಸ್ಪೇಟ್ ಬಳಕೆಯನ್ನು ಕೇರಳದಲ್ಲಿ 2019ರಲ್ಲಿ ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಕೃಷಿ ಇಲಾಖೆಯ ಲಂಗು– ಲಗಾಮು ಇಲ್ಲ. ಹೀಗಾಗಿ ಕೇರಳದ ಶುಂಠಿ ಬೆಳೆಗಾರರು ವ್ಯಾಪಕವಾಗಿ ಈ ರಾಸಾಯನಿಕವನ್ನು ಬಳಸುತ್ತಿದ್ದಾರೆ. ಒಮ್ಮೆ ಒಂದು ಕಡೆ ಜಮೀನಿನಲ್ಲಿ ಶುಂಠಿ ಬೆಳೆದ ಮೇಲೆ ಬಳಿಕ ಅವರು ಮತ್ತೊಂದು ಕಡೆ ಬೆಳೆಯುತ್ತಾರೆ.

* ಕೇರಳದ ಶುಂಠಿ ಬೆಳೆಗಾರರ ಸಂಘದ ಅಧಿಕೃತ ಮಾಹಿತಿಯ ಪ್ರಕಾರ 2020–21 ರ ಸಾಲಿನಲ್ಲಿ ಕೇರಳದ ವಯನಾಡು, ಕಣ್ಣೂರು, ಪಾಲಕ್ಕಾಡ್‌ ಮತ್ತು ಇತರ ಜಿಲ್ಲೆಗಳ 20 ಸಾವಿರಕ್ಕೂ ಹೆಚ್ಚು ರೈತರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಲ್ಲಿ ಶುಂಠಿ ಕೃಷಿ ನಡೆಸಿದ್ದರು. ಕೇರಳದ ರೈತರು ಪ್ರತಿ ಎಕರೆ ಭೂಮಿಯನ್ನು ₹3 ಲಕ್ಷದಿಂದ ರಿಂದ ₹7 ಲಕ್ಷದವರೆಗೆ ಗುತ್ತಿಗೆ ಪಡೆದು ಶುಂಠಿ ಬೆಳೆಯುತ್ತಾರೆ. ಒಂದು ಅಂದಾಜಿನ ಪ್ರಕಾರ, 10 ಎಕರೆ ಭೂಮಿಯಲ್ಲಿ ₹60 ಲಕ್ಷದಿಂದ ₹70 ಲಕ್ಷ ಬಂಡವಾಳ ತೊಡಗಿಸುತ್ತಾರೆ. ಇವರು ಕಳೆ ನಾಶಕ್ಕಾಗಿ ಗ್ಲೈಕೊ ಫಾಸ್ಪೇಟ್ ಯಥೇಚ್ಛವಾಗಿ ಬಳಕೆ ಮಾಡುತ್ತಾರೆ.

ಮಾನವ ಮತ್ತು ಜಾನುವಾರುಗಳಿಗೂ ಹಾನಿಕಾರಕ:ಗ್ಲೈಕೊ ಫಾಸ್ಪೇಟ್ ಬಳಕೆಯಿಂದ ಚರ್ಮ, ಕಣ್ಣುಗಳ ಮೇಲೆ ಹಾನಿಯಾಗುವುದಲ್ಲದೇ, ಉಸಿರಾಟಕ್ಕೂ ತೊಂದರೆಯಾಗುತ್ತದೆ. ಯಾವುದೇ ಸಸ್ಯಗಳ ಮೇಲೆ ಇದ್ದ ಈ ರಾಸಾಯನಿಕ ಮೈಗೆ ಸೋಕಿದರೂ ಸಾಕು ಮೈಯುರಿ ಕಾಣಿಸಿಕೊಳ್ಳುತ್ತದೆ. ಇದರ ಅಂಶ ಹೆಚ್ಚು ಪ್ರಮಾಣದಲ್ಲಿ ದೇಹಕ್ಕೆ ಹೋದರೆ ಕ್ಯಾನ್ಸರ್‌ಗೆ ಕಾರಣವಾಗಲೂಬಹುದು ಎಂಬ ವಾದವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT