ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ಗಾಂಧಿ ಯುವಕ, ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಲಿ: ಮಲ್ಲಿಕಾರ್ಜುನ ಖರ್ಗೆ

Last Updated 23 ಸೆಪ್ಟೆಂಬರ್ 2022, 10:25 IST
ಅಕ್ಷರ ಗಾತ್ರ

ಕಲಬುರಗಿ: ‘ಪಕ್ಷದ ನಾಯಕ ರಾಹುಲ್ ಗಾಂಧಿ ಅವರೇ ಮತ್ತೊಮ್ಮೆ ಅಧ್ಯಕ್ಷರಾಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಅವರು ಯುವಕರಾಗಿದ್ದು, ಸೈದ್ಧಾಂತಿಕ ಸ್ಪಷ್ಟತೆಯೂ ಇದೆ. ಪಕ್ಷವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯವೂ ಅವರಿಗೆ ಇದೆ’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ 16ರಂದು ಈ ಕುರಿತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೆ. ಆದರೆ, ಈ ಬಾರಿ ತಮ್ಮ ಕುಟುಂಬದವರು ಅಧ್ಯಕ್ಷರಾಗಬಾರದು ಎಂಬ ನಿಲುವಿಗೆ ಅಂಟಿಕೊಂಡಿದ್ದಾರೆ. ಸದ್ಯಕ್ಕೆ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈಗಲೂ ರಾಹುಲ್ ಗಾಂಧಿ ಅವರು ಮನಸ್ಸು ಮಾಡಬೇಕು’ ಎಂದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ‘ರಾಹುಲ್ ಗಾಂಧಿ ಅವರೇ ಪಕ್ಷ ಮುನ್ನಡೆಸಲು ಎಂಬುದು ನನ್ನ ಅಭಿಪ್ರಾಯ. ಹಾಗಾಗಿ, ನಾನು ಸ್ಪರ್ಧಿಸುವ ಪ್ರಶ್ನೆಯೇ ಬರುವುದಿಲ್ಲ. ಪಕ್ಷ ಕೊಟ್ಟ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಚೀತಾ ಬರದಿದ್ದರೂ ದೇಶ ನಡೆಯುತ್ತದೆ: ‘ದೇಶದಲ್ಲಿ ಹಸಿವಿನಿಂದ ಬಳಲುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಕೊರೊನಾ ಬಳಿಕ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಜನಸಾಮಾನ್ಯರ ಆದಾಯದ ಮೂಲಗಳಿಗೆ ಹೊಡೆತ ಬಿದ್ದಿದೆ. ಜನರಿಗೆ ಉದ್ಯೋಗ ಕೊಡಲು, ಹಸಿವು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ಮಾಡುವುದನ್ನು ಬಿಟ್ಟು ಏನೋ ಸಾಧನೆ ಮಾಡಿದೆ ಎಂಬಂತೆ ನಮೀಬಿಯಾದಿಂದ ಚೀತಾಗಳನ್ನು ತಂದು ದೊಡ್ಡ ಪ್ರಚಾರ ಪಡೆದರು. ಮಾಧ್ಯಮಗಳೂ ಚೀತಾಗಳು ಬಂದಿರುವ ಸುದ್ದಿ ಬಿಟ್ಟು ಬೇರೆ ಏನೂ ನಡೆದೇ ಇಲ್ಲವೇ ಎಂಬಂತೆ ಎರಡು ದಿನಗಳ ಕಾಲ ಸುದ್ದಿ ಪ್ರಸಾರ ಮಾಡಿದವು. ಚೀತಾಗಳು ಬರದಿದ್ದರೂ ದೇಶ ನಡೆಯುತ್ತದೆ. ಮೊದಲು ದೇಶದ ಸಮಸ್ಯೆಗಳತ್ತ ಗಮನ ಹರಿಸಲಿ ಎಂದು ಒತ್ತಾಯಿಸಿದರು.

‘ಮೋದಿಯವರು ಮಾತೆತ್ತಿದರೆ ಕಳೆದ 70 ವರ್ಷಗಳಲ್ಲಿ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ ಎಂದು ವೈದ್ಯರು, ಎಂಜಿನಿಯರುಗಳ ಮುಂದೆ ಹೇಳುತ್ತಾರೆ. ಆ ವೈದ್ಯರು, ಎಂಜಿನಿಯರುಗಳು ಕಾಂಗ್ರೆಸ್ ಸರ್ಕಾರ ನಿರ್ಮಿಸಿದ್ದ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಲಿತವರು ಎಂಬುದನ್ನು ಮೋದಿ ಮರೆತಂತಿದೆ’ ಎಂದು ಛೇಡಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಡಾ. ಶರಣಪ್ರಕಾಶ ಪಾಟೀಲ, ಶಾಸಕ ಶರಣಬಸಪ್ಪ ದರ್ಶನಾಪೂರ, ಕಾಂಗ್ರೆಸ್ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಇದ್ದರು.

‘ಭಾಗವತ್ ಮೊದಲು ಅಸ್ಪೃಶ್ಯತೆ ನಿವಾರಿಸಲಿ’
‘ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಅವರು ದೆಹಲಿಯಲ್ಲಿ ಮಸೀದಿಗೆ ಭೇಟಿ ನೀಡಿದ್ದಾರೆ. ಇದರ ಬಗ್ಗೆ ನಮ್ಮ ತಕರಾರೇನೂ ಇಲ್ಲ. ಆದರೆ, ನಾವೆಲ್ಲ ಹಿಂದೂ ಎಂದು ಕರೆಯುವ ಆರ್‌ಎಸ್‌ಎಸ್‌ನವರು ದೇಶದಲ್ಲಿ ಇಂದಿಗೂ ಜೀವಂತ ಇರುವ ಅಸ್ಪೃಶ್ಯತೆ ಬಗ್ಗೆ ಏಕೆ ಮಾತನಾಡುವುದಿಲ್ಲ? ದೇವಸ್ಥಾನದ ಕಂಬ ಮುಟ್ಟಿದ್ದಕ್ಕೆ ದಂಡ ವಿಧಿಸಲಾಗಿದೆ. ಮ್ಯಾನೇಜ್‌ಮೆಂಟ್ ಇವೆಂಟ್‌ನಂತೆ ನಾಲ್ಕಾರು ಜನ ದಲಿತರ ಮನೆಗೆ ತೆರಳಿ ಊಟ ಮಾಡಿದರೆ ಅಸ್ಪೃಶ್ಯತೆ ನಿವಾರಣೆಯಾಗುವುದಿಲ್ಲ’ ಎಂದು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

‘ನಿಜವಾಗಿಯೂ ಅಸ್ಪೃಶ್ಯತೆ ನಿವಾರಣೆಗೆ ಮುಂದಾದರೆ ಭಾಗವತ್ ಅವರು ಮಹಾತ್ಮ ಜ್ಯೋತಿಬಾ ಫುಲೆ, ಡಾ. ಬಾಬಾಸಾಹೇಬ ಅಂಬೇಡ್ಕರ್, ಸಂತ ತುಕಾರಾಮರ ಸಾಲಿಗೆ ಸೇರುತ್ತಾರೆ. ಆ ಕೆಲಸವನ್ನು ಆದಷ್ಟು ಬೇಗ ಮಾಡಲಿ’ ಎಂದು ಸಲಹೆ ನೀಡಿದರು.

‘ಮೋದಿ ಸಹಕಾರದಿಂದ ಅದಾನಿಗೆ ಶ್ರೀಮಂತಿಕೆ ಪಟ್ಟ’
ಉದ್ಯಮಿ ಗೌತಮ್ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗುವಲ್ಲಿ ನರೇಂದ್ರ ಮೋದಿ ಅವರ ಕೊಡುಗೆ ಸಾಕಷ್ಟಿದೆ. ಲಕ್ಷಾಂತರ ಜನರಿಗೆ ನೌಕರಿ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನು ನಷ್ಟದ ನೆಪದಲ್ಲಿ ಮೋದಿ ಅವರು ಅದಾನಿಗೆ ಹಸ್ತಾಂತರಿಸಿದ್ದರಿಂದಲೇ ಕೆಲವೇ ವರ್ಷಗಳಲ್ಲಿ ಶ್ರೀಮಂತ ವ್ಯಕ್ತಿಯಾಗಲು ಕಾರಣವಾಗಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದರು.

‘ವಿಮಾನ ನಿಲ್ದಾಣಗಳು, ಬಂದರು, ಪೆಟ್ರೋಲಿಯಂ ಕಂಪನಿಗಳು ಸೇರಿದಂತೆ ಸಾರ್ವಜನಿಕರ ತೆರಿಗೆ ಹಣದಿಂದ ಕಟ್ಟಿದ್ದ ಸಂಸ್ಥೆಗಳನ್ನು ಮೋದಿ ತಮ್ಮ ಸ್ನೇಹಿತನಿಗೆ ಮಾರಾಟ ಮಾಡಿದ್ದಾರೆ. ಸ್ವಂತ ದುಡಿಮೆಯಿಂದ ಶ್ರೀಮಂತರಾದರೆ ನಮ್ಮ ತಕರಾರಿಲ್ಲ. ಆದರೆ, ಮೋದಿ ತಮ್ಮ ಕೆಲವೇ ಕೆಲವು ಸ್ನೇಹಿತರಿಗೆ ಅನುಕೂಲವಾಗುವ ನೀತಿಗಳನ್ನು ರೂಪಿಸಿದ್ದರಿಂದ ಶ್ರೀಮಂತರಾಗಿದ್ದಾರೆ. ಹಲವು ದಶಕಗಳಿಂದ ಕೈಗಾರಿಕೆ ಹೊಂದಿರುವ ಟಾಟಾ, ಬಿರ್ಲಾಗಳು ಇನ್ನೂ ವಿಶ್ವದಲ್ಲೇ ಅತ್ಯಂತ ಶ್ರೀಮಂತರಾಗಲು ಏಕೆ ಸಾಧ್ಯವಾಗಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT