ಬುಧವಾರ, ಆಗಸ್ಟ್ 10, 2022
23 °C
ಬಿಎಸ್‌ವೈ ಕುಟುಂಬಕ್ಕೆ ಕಮಿಷನ್‌: ಬಿಜೆಪಿ ಶಾಸಕ ಎಚ್‌.ವಿಶ್ವನಾಥ್ ಆರೋಪ

ಭದ್ರಾ ಮೇಲ್ದಂಡೆ ಯೋಜನೆ: ₹ 2,000 ಕೋಟಿ ಕಿಕ್‌ಬ್ಯಾಕ್‌ ಆರೋಪ

‌ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ₹20 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳ ಟೆಂಡರ್‌ ಕರೆದಿದ್ದು, ಅದರಲ್ಲಿ ಮುಖ್ಯಮಂತ್ರಿ ಕುಟುಂಬದವರು ಶೇ 10 ರಷ್ಟು ಕಮಿಷನ್‌ ಪಡೆದಿದ್ದಾರೆ’ ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಎಚ್‌.ವಿಶ್ವನಾಥ್ ಆರೋಪಿಸಿದರು.

ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್‌ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕಮುಖ್ಯಮಂತ್ರಿ ಬದಲಾವಣೆ ಮಾಡಲೇಬೇಕು ಎಂದು ಹೇಳಿಕೆ ನೀಡಿದ್ದ ವಿಶ್ವನಾಥ್‌, ಶುಕ್ರವಾರವೂ ವಾಗ್ದಾಳಿ ಮುಂದುವರಿಸಿದರು. ಆಡಳಿತ ಪಕ್ಷದವರೇ ಆದ ಅವರು, ಮುಖ್ಯಮಂತ್ರಿ ಕುಟುಂಬ ಭಾರಿ ಭ್ರ‌ಷ್ಟಾಚಾರ ಮಾಡಿದೆ ಎಂದು ಗಂಭೀರ ಆರೋಪವನ್ನೂ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕಮಿಷನ್‌ ಹೊಡೆಯಲು ತರಾತುರಿಯಲ್ಲಿ ಟೆಂಡರ್‌ ಕರೆಯಲಾಗಿದೆ‘ ಎಂದು ಹೇಳಿದರು.

’ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಮೊತ್ತ ₹21,470 ಕೋಟಿಗಳು. ಈ ಯೋಜನೆಗೆ ಹಣವೇ ಇಟ್ಟಿಲ್ಲ. ಅದಕ್ಕೂ ಮೊದಲೇ ಟೆಂಡರ್‌ ಕರೆಯಲಾಗಿದೆ. ಕಿಕ್‌ ಬ್ಯಾಕ್‌ ಪಡೆಯುವ ಹುನ್ನಾರ ಇದರ ಹಿಂದಿದೆ. ಕಾಮಗಾರಿಗೆ ಹಣಕಾಸು ಇಲಾಖೆಯ ಅನುಮತಿ ಪಡೆದಿಲ್ಲ. ಮಂಡಳಿ ಸಭೆಯನ್ನೂ ಮಾಡಿಲ್ಲ‘ ಎಂದು ವಿಶ್ವನಾಥ್‌ ದೂರಿದರು.

’ಕಾವೇರಿ ನೀರಾವರಿ ನಿಗಮದಲ್ಲೂ ಅಕ್ರಮ ನಡೆದಿದೆ. ಇದು ಗುತ್ತಿಗೆದಾರರ ಆಧಾರಿತ ಸರ್ಕಾರವೇ‘ ಎಂದೂ ಪ್ರಶ್ನಿಸಿದರು.

‘ನಾನು ನಿನ್ನೆಯಾಗಲಿ, ಇವತ್ತಾಗಲಿ ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳ ವಿರುದ್ಧ ಮಾತನಾಡಿಲ್ಲ. ಪಕ್ಷದ ನೈತಿಕತೆ, ಪಾರದರ್ಶಕತೆ, ಭ್ರಷ್ಟಾಚಾರ ಮತ್ತು ನಡವಳಿಕೆಯ ಬಗ್ಗೆ ಆತಂಕದಿಂದ ಮಾತನಾಡಿದ್ದೇನೆ. ಅದನ್ನು ಅರ್ಥ ಮಾಡಿಕೊಳ್ಳ
ಬೇಕು. ಸರ್ಕಾರದ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಏನಿದೆ ಎಂಬುದನ್ನು ಅರುಣ್‌ಸಿಂಗ್ ಅವರಿಗೂ ತಿಳಿಸಿದ್ದೇನೆ’ ಎಂದರು.

ನಿಯಮಾನುಸಾರ ಟೆಂಡರ್‌: ಜಲಸಂಪನ್ಮೂಲ ಇಲಾಖೆ

‘ಎಚ್‌.ವಿಶ್ವನಾಥ್ ಆರೋಪದಲ್ಲಿ ಸತ್ಯಾಂಶವಿಲ್ಲ. ₹4,026.60 ಕೋಟಿ ಮೊತ್ತದ 7 ಕಾಮಗಾರಿಗಳ ಪ್ಯಾಕೇಜ್‌ಗಳಿಗೆ ಟೆಂಡರ್‌ ಅನ್ನು ಕೆಟಿಪಿಪಿ ನಿಯಮ ಅನುಸಾರವೇ ಕೈಗೊಳ್ಳಲಾಗಿದೆ’ ಎಂದು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಲಕ್ಷ್ಮಣರಾವ್‌ ಪೇಶ್ವೆ ಸ್ಪಷ್ಟನೆ ನೀಡಿದ್ದಾರೆ.

‘ಭದ್ರಾ ಮೇಲ್ದಂಡೆ ಯೋಜನೆಯ ಪರಿಷ್ಕೃತ ಅಂದಾಜು ₹21,473.67 ಕೋಟಿ. ಸಮಗ್ರ ಪರಿಷ್ಕೃತ ಯೋಜನಾ ವರದಿಗೆ 2020ರ ಡಿಸೆಂಬರ್‌ 16 ರಂದು ಆರ್ಥಿಕ ಇಲಾಖೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ₹16,125.40 ಕೋಟಿ ಪಾಲು ನೀಡಲಿದ್ದು, ಕೇಂದ್ರ ಜಲಶಕ್ತಿ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯೂ ಒಪ್ಪಿಗೆ ನೀಡಿದೆ‘ ಎಂದಿದ್ದಾರೆ.

‘ಈ ಯೋಜನೆಯನ್ನು 2023–24ರೊಳಗೆ ಪೂರ್ಣಗೊಳಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ಹೀಗಾಗಿ, ಡ್ರಿಪ್‌ ಕಾಮಗಾರಿಗಳ ಅಂದಾಜು ಪಟ್ಟಿ ಮತ್ತು ಡಿಟಿಪಿಗೆ ತಜ್ಞರನ್ನು ಒಳಗೊಂಡ ಡ್ರಿಪ್‌ ಸಮಿತಿಯ 5 ಸಭೆಗಳಲ್ಲಿ ಚರ್ಚಿಸಲಾಗಿದೆ. ನಿಗಮದ ಅಂದಾಜು ಪರಿಶೀಲನಾ ಸಮಿತಿಯಿಂದ ತೀರುವಳಿ ಪಡೆದು ಕೆಟಿಪಿಪಿ ನಿಯಮಾನುಸಾರ 7 ಪ್ಯಾಕೇಜ್‌ಗಳಿಗೆ ಟೆಂಡರ್‌ ಕರೆಯಲಾಗಿದೆ‘ ಎಂದು ಅವರು ತಿಳಿಸಿದ್ದಾರೆ. 

’ಕೋವಿಡ್‌ನಿಂದಾಗಿ ಕಳೆದ ವರ್ಷ ಟೆಂಡರ್‌ ಕರೆಯಲಾಗಿರಲಿಲ್ಲ. ಹಣಕಾಸು ಇಲಾಖೆ, ಮಂಡಳಿ ಸಭೆ ಮತ್ತು ಸಚಿವ ಸಂಪುಟದ ಒಪ್ಪಿಗೆ ಪಡೆದು ಟೆಂಡರ್ ಕರೆಯಲಾಗಿದೆ‘ ಎಂದು ಅವರು ತಿಳಿಸಿದ್ದಾರೆ.

ಆರೋಪದಲ್ಲಿ ಹುರುಳಿಲ್ಲ:ಬಿಎಸ್‌ವೈ

‘ವಿಶ್ವನಾಥ್‌ ಆರೋಪಗಳಲ್ಲಿ ಹುರುಳಿಲ್ಲ. ಈ ಬಗ್ಗೆ ನೀರಾವರಿ ಇಲಾಖೆಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

‘ನಿಮ್ಮ ಮಗ ವಿಜಯೇಂದ್ರ ವಿರುದ್ಧ ವಿಶ್ವನಾಥ್‌ ನೇರ ಆರೋಪ ಮಾಡಿದ್ದಾರಲ್ಲ’ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ‘ವಿಶ್ವನಾಥ್‌  ಬಗ್ಗೆ ಏನೂ ಮಾತನಾಡಲು ಬಯಸುವುದಿಲ್ಲ. ಅವರ ಬಗ್ಗೆ ಹೈಕಮಾಂಡ್‌ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ’ ಎಂದಷ್ಟೇ ಹೇಳಿದರು.

ಎಚ್‌ಡಿಕೆ ವಿರುದ್ಧ ಆರೋಪ ಮಾಡಿದ್ದ ರೆಡ್ಡಿ:

2006 ರಲ್ಲಿ ವಿಧಾನಪರಿಷತ್‌ನ ಬಿಜೆಪಿ ಸದಸ್ಯರಾಗಿದ್ದ ಗಾಲಿ ಜನಾರ್ದನ ರೆಡ್ಡಿ, ಅಂದಿನ ಜೆಡಿಎಸ್‌– ಬಿಜೆಪಿ ಮೈತ್ರಿ ಸರ್ಕಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗಣಿ ಮಾಲೀಕರಿಂದ ₹150 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.

‘ಗಣಿ ಕಪ್ಪ’ ಕೇಳಿದ್ದಕ್ಕೆ ತಮ್ಮ ಬಳಿ ಸಿ.ಡಿ ಇದೆ ಎಂದು ರೆಡ್ಡಿ ಹೇಳಿಕೊಂಡಿದ್ದರು.

ಈ ಆರೋಪದ ಬಗ್ಗೆ ಲೋಕಾಯುಕ್ತ ತನಿಖೆಗೆ ಕುಮಾರಸ್ವಾಮಿ  ಆದೇಶಿಸಿದ್ದರು. ತನಿಖೆ ವೇಳೆ ಜನಾರ್ದನ ರೆಡ್ಡಿ ಯಾವುದೇ ಸಿ.ಡಿಯನ್ನೂ ಮುಂದಿಡಲಿಲ್ಲ. ಪ್ರಕರಣದ ತನಿಖೆಯು ‘ಅಕ್ರಮ ಗಣಿಗಾರಿಕೆ‘ಯತ್ತ ತಿರುಗಿದ್ದರಿಂದಾಗಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಜತೆಗೆ ಜೈಲಿಗೂ ಹೋದರು. ಆರೋಪ ಮಾಡಿದ್ದ ರೆಡ್ಡಿ ಸಹ ಜೈಲುವಾಸ ಅನುಭವಿಸಿದರು. ಈಗ ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರೇ ಆದ ಎಚ್‌.ವಿಶ್ವನಾಥ್‌ ಆರೋಪ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು