ಮಂಗಳವಾರ, ಸೆಪ್ಟೆಂಬರ್ 21, 2021
28 °C

ಎಸ್‌ಐಟಿ ಮುಖ್ಯಸ್ಥರಿಲ್ಲದ ತನಿಖೆ ಕಾನೂನು ಬದ್ಧತೆ ವಿಷಯವಾಗಲಿದೆ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಗೈರಿನ ನಡುವೆ ಶಾಸಕ ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆ ಮುಂದುವರಿಸಿರುವುದು ಕಾನೂನು ಬದ್ಧತೆಯ ವಿಷಯವಾಗುತ್ತದೆ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2021ರ ಮಾರ್ಚ್ 10ರಂದು ಗೃಹ ಸಚಿವರು ಸಹಿ ಮಾಡಿದ ಟಿಪ್ಪಣಿ ಆಧರಿಸಿ 2021ರ ಮಾರ್ಚ್ 11ರಂದು ಎಸ್‌ಐಟಿ ರಚಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಸೌಮೇಂದು ಮುಖರ್ಜಿ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ, ಜಂಟಿ ಪೊಲೀಸ್ ಕಮಿಷನರ್(ಅಪರಾಧ) ಸಂದೀಪ್ ಪಾಟೀಲ ಸಹಿ ಮಾಡಿ ಸಲ್ಲಿಸಿದ್ದ ತನಿಖಾ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಪರಿಶೀಲನೆ ನಡೆಸಿತು.

‘ಮೇ 1ರಿಂದ ಸೌಮೇಂದು ಮುಖರ್ಜಿ ಅವರು ವೈದ್ಯಕೀಯ ರಜೆಯಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಎಸ್‌ಐಟಿ ಮುಖ್ಯಸ್ಥರು ಅಂಗೀಕರಿಸಿದ್ದಾರೆಯೇ ಎಂಬುದು ಕೂಡ ಇದರಲ್ಲಿ ಉಲ್ಲೇಖವಾಗಿಲ್ಲ’ ಎಂದು ಪೀಠ ಹೇಳಿತು.

‘ಎಸ್‌ಐಟಿ ತನಿಖೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ನಾಲ್ಕು ಅರ್ಜಿಗಳಲ್ಲಿ ಎರಡು ಅರ್ಜಿಗಳಲ್ಲಿ ಈ ಪ್ರಶ್ನೆ ಇದೆ. ಸೌಮೇಂದು ಮುಖರ್ಜಿ ಅವರನ್ನು ಬದಲಾವಣೆ ಮಾಡಿರುವ ಬಗ್ಗೆ ಯಾವುದೇ ಆದೇಶ ಇಲ್ಲ’ ಎಂದು ಪೀಠ ತಿಳಿಸಿದೆ.

ರಾಜ್ಯ ಸರ್ಕಾರ ಆಕ್ಷೇಪ ಹೇಳಿಕೆ ಸಲ್ಲಿಸಿದ ಬಳಿಕ ಎಸ್‌ಐಟಿ ರಚನೆ ಸಿಂಧುವೇ ಎಂಬ ವಿಷಯವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಆ.12ಕ್ಕೆ ಮುಂದೂಡಿತು.

ತನಿಖೆಗೆ ಸಂಬಂಧಿಸಿದ ವಿವರವನ್ನು ಪತ್ರಿಕೆಯೊಂದು ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ಪ್ರಕಟಿಸಿದೆ. ಅದರಲ್ಲಿ ಅರ್ಜಿದಾರರನ್ನು ಅವಹೇಳನ ಮಾಡಲಾಗಿದೆ ಎಂದು ಸಂತ್ರಸ್ತೆ ಪರ ವಕೀಲರಾದ ಇಂದಿರಾ ಜೈಸಿಂಗ್ ತಿಳಿಸಿದರು. ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪೀಠ ಅನುಮತಿ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು