ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯವಿಲ್ಲದೇ ಪರದಾಟ: ಅಂಗನವಾಡಿ ಕಾರ್ಯಕರ್ತೆಯರಿಂದ ಆಕ್ರೋಶ

ಅಹೋರಾತ್ರಿ ಪ್ರತಿಭಟನೆ: ಅಂಗನವಾಡಿ ಕಾರ್ಯಕರ್ತೆಯರಿಂದ ಆಕ್ರೋಶ
Last Updated 25 ಜನವರಿ 2023, 19:33 IST
ಅಕ್ಷರ ಗಾತ್ರ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಜ.23ರಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದು, ಬೇಡಿಕೆ ಈಡೇರಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಉದ್ಯಾನದಲ್ಲಿ ಮಕ್ಕಳ ಸಮೇತ ಮೊಕ್ಕಾಂ ಹೂಡಿರುವ ಮಹಿಳೆಯರು, ಮೂಲಸೌಕರ್ಯ ಗಳಿಲ್ಲದೇ ಪರದಾಡುತ್ತಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಿಂದ ನಗರಕ್ಕೆ ಬಂದಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉದ್ಯಾನದಲ್ಲೇ ಬಿಸಿಲು–ಚಳಿ ಲೆಕ್ಕಿಸದೇ ಹಗಲು–ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆ ಆರಂಭವಾಗಿ ಬುಧವಾರಕ್ಕೆ ಮೂರು ದಿನವಾದರೂ ಸರ್ಕಾರದ ಯಾವುದೇ ಅಧಿಕಾರಿ ಯಾಗಲೀ ಜನಪ್ರತಿನಿಧಿಗಳಾಗಲೀ ಸ್ಥಳಕ್ಕೆ ಭೇಟಿ ನೀಡದಿದ್ದರಿಂದ ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

‘ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಬೇಕು. ಅನ್ನದ ಕೇಂದ್ರ ಗಳಾಗಿರುವ ಅಂಗನವಾಡಿಗಳನ್ನು ಅಕ್ಷರ ಕೇಂದ್ರಗಳಾಗಿ ಮಾರ್ಪಡಿಸಬೇಕು. ಗ್ರ್ಯಾಚ್ಯುಟಿ ಪಾವತಿಸಬೇಕು ಎನ್ನುವುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಲಾಗಿದೆ’ ಎಂದು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಅಧೀನದ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜ್ಯದ ಮಕ್ಕಳ ಅಭಿವೃದ್ಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಪಾತ್ರ ಪ್ರಮುಖವಾಗಿದೆ. ಆದರೆ, ಸರ್ಕಾರ ಕಾರ್ಯಕರ್ತೆಯರು ಹಾಗೂ ಸಹಾಯಕಿ ಯರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಕೆಲಸಕ್ಕೆ ಗೈರಾಗಿ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮೌನವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬೇಡಿಕೆ ಈಡೇರಿಕೆಗಾಗಿ ಹಲವು ವರ್ಷಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಸುಳ್ಳು ಭರವಸೆ ನೀಡುವ ಸರ್ಕಾರ, ಕೊಟ್ಟ ಮಾತು ತಪ್ಪುತ್ತಿದೆ. ಈ ಬಾರಿ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಹೇಳಿದರು.

ಶೌಚಾಲಯಗಳ ಕೊರತೆ, ಶುಲ್ಕವೂ ಏರಿಕೆ: ಉದ್ಯಾನದಲ್ಲಿ ಒಂದೇ ಶೌಚಾಲಯವಿದೆ. ನಿತ್ಯವೂ ಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದು, ನಿತ್ಯಕರ್ಮಗಳಿಗಾಗಿ ಅವರೆಲ್ಲ ಪರದಾಡುವ ಸ್ಥಿತಿ ಇದೆ.

ಉದ್ಯಾನ ಸಮೀಪದಲ್ಲಿ ಬಿಬಿಎಂಪಿ ಶೌಚಾಲಯವಿದ್ದು, ಬಹುತೇಕ ಮಹಿಳೆಯರು ಅದನ್ನೇ ಬಳಸುತ್ತಿದ್ದಾರೆ. ₹ 5 ನಿಗದಿಪಡಿಸಲಾಗಿದ್ದ ಬಳಕೆದಾರರ ಶುಲ್ಕವನ್ನು ದಿಢೀರ್ ₹ 10 ಮಾಡಲಾಗಿದೆ.

‘ಮೊದಲ ದಿನದಿಂದಲೇ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದೇನೆ. ಶೌಚಾಲಯಕ್ಕೆ ಹೋಗಬೇಕಾದರೆ ಗಂಟೆಗಟ್ಟಲೇ ಕಾಯಬೇಕು. ಕುಡಿಯುವ ನೀರಿಗೂ ಅಲೆದಾಡಬೇಕು. ಆರೋಗ್ಯವೂ ಹಾಳಾಗುತ್ತಿದೆ’ ಎಂದು ಪ್ರತಿಭಟನಾನಿರತ ಮಹಿಳೆ ಸುಮಂಗಲಾ ಅಳಲು ತೋಡಿಕೊಂಡರು.

‘ಬಿಬಿಎಂಪಿ ಶೌಚಾಲಯದಲ್ಲಿ ಒಂದು ಬಾರಿ ಬಳಕೆಗೆ ₹10 ತೆಗೆದುಕೊಳ್ಳುತ್ತಿದ್ದಾರೆ. ಒಂದು ದಿನ ಹಲವು ಬಾರಿ ಶೌಚಾಲಯ ಬಳಸಿದರೆ, ಹೆಚ್ಚಿನ ಹಣ ಪಾವತಿಸಬೇಕಾದ ಸ್ಥಿತಿ ಇದೆ’ ಎಂದು ಹೇಳಿದರು.

ಎಲ್ಲಾ ಅಂಗನವಾಡಿ ಸಂಘಟನೆಗಳ ಬೇಡಿಕೆ ಈಡೇರಿಕೆ ಕಷ್ಟ: ಆಚಾರ

ಕೊಪ್ಪಳ: ‘ಅಂಗನವಾಡಿ ಕಾರ್ಯಕರ್ತೆಯರದ್ದೇ ಆರು–ಏಳು ಸಂಘಟನೆಗಳಿವೆ. ಅವರದ್ದೇ ತಂಡಗಳಿವೆ. ಪದೇ ಪದೇ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಲೇ ಇದ್ದರೆ, ಸದಾ ಅವರ ಬಳಿಯೇ ಇರಲು ಆಗುವುದೇ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್ ಪ್ರಶ್ನಿಸಿದರು.

‘ಒಂದು ಸಂಘಟನೆಯು ಈ ಹಿಂದೆ ಪ್ರತಿಭಟಿಸಿದಾಗ, ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದ್ದೆ. ಅಷ್ಟರಲ್ಲಿ ಮತ್ತೊಂದು ಸಂಘಟನೆ ಪ್ರತಿಭಟನೆ ಆರಂಭಿಸಿತು. ಸಚಿವನಾಗಿ ಹಣಕಾಸಿನ ಎಲ್ಲಾ ಬೇಡಿಕೆಗಳನ್ನು ನಾನೊಬ್ಬನೇ ಈಡೇರಿಸಲು ಆಗದು. ಇದನ್ನು ಬಜೆಟ್‌ಗೂ ಮುನ್ನ ಸಿ.ಎಂ ಜೊತೆ ಚರ್ಚಿಸುವೆ’ ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು. ‘ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ನಮ್ಮ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಸ್ಪಂದಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT