ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಗುಣಮಟ್ಟ ಸುಧಾರಣೆಗೆ ರಾಜ್ಯದಲ್ಲಿ ಮತ್ತೆ ಹತ್ತು ಕಾಮಗಾರಿ

Last Updated 5 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ವಾಯು ಗುಣಮಟ್ಟ ಸುಧಾರಿಸಲು ಕಳೆದ ವರ್ಷ ಕೇಂದ್ರ ನೀಡಿದ್ದ ₹279 ಕೋಟಿ ಜತೆಗೆ ಈ ಬಾರಿ ಇನ್ನೂ ₹140 ಕೋಟಿ ಅನುದಾನವನ್ನು ರಾಜ್ಯ ಪಡೆದಿದೆ. ಈ ಅನುದಾನದಲ್ಲಿ 10 ಕಾಮಗಾರಿಗಳನ್ನು ಒಳಗೊಂಡ ಕ್ರಿಯಾ ಯೋಜನೆಗೆ ರಾಜ್ಯ ಮಟ್ಟದ ಅನುಷ್ಠಾನ ಉಸ್ತುವಾರಿ ಸಮಿತಿ(ಎಸ್‌ಎಲ್‌ಎಂಐಸಿ) ಅನುಮೋದನೆ ನೀಡಿದೆ. ಬಿಎಂಟಿಸಿ ಮತ್ತು ಬಿಬಿಎಂಪಿ ಈ ಯೋಜನೆಗಳನ್ನು ಅನುಷ್ಠಾನ ಮಾಡಲಿವೆ.

15ನೇ ಹಣಕಾಸು ಆಯೋಗದಿಂದ ಪಡೆದಿದ್ದ ಅನುದಾನದಲ್ಲಿ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾರ್ಜಿಂಗ್ ಸೌಲಭ್ಯ, ಡಬಲ್ ಡೆಕ್ಕರ್ ಬಸ್‌ಗಳ ಖರೀದಿ ಸೇರಿ ವಿವಿಧ ಕಾಮಗಾರಿಗಳಿಗೆ ₹46 ಕೊಟಿಯನ್ನು ಬಿಎಂಟಿಸಿ ಪಡೆದಿದೆ. ಕಸ ಗುಡಿಸುವ ಯಂತ್ರಗಳು, ಉತ್ತಮವಾದ ಪಾದಚಾರಿ ಮಾರ್ಗ ನಿರ್ಮಾಣ, ಕಟ್ಟಡಗಳ ಅವಶೇಷ ತೆರವುಗೊಳಿಸುವ ಕಾಮಗಾರಿಗಳಿಗೆ ಬಿಬಿಎಂಪಿ ಅನುದಾನ ಪಡೆದುಕೊಂಡಿದೆ.

15ನೇ ಹಣಕಾಸು ಆಯೋಗದಿಂದ ಮುಂದಿನ ಹಣಕಾಸು ವರ್ಷದಲ್ಲಿ ₹145 ಕೋಟಿ ಅನುದಾನ ಪಡೆಯಲು ಬೆಂಗಳೂರು ಅರ್ಹವಾಗಿದೆ ಎಂದು ‘ಪ್ರಜಾವಾಣಿ’ಗೆ ಲಭಿಸಿರುವದಾಖಲೆಗಳು ಹೇಳುತ್ತಿವೆ.

ವಾಯು ಮಾಲಿನ್ಯ ತಗ್ಗಿಸಲು ಅನುದಾನ ಲಭ್ಯವಾಗುತ್ತಿದ್ದರೂ, ಯೋಜನೆಗಳ ಅನುಷ್ಠಾನ ಮಾತ್ರ ಪ್ರಗತಿ ಹೊಂದಿಲ್ಲ. ನಿಯಮಿತವಾಗಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸದಿರುವುದು, ಅನಗತ್ಯ ಕಾಮಗಾರಿಗಳ ಆಯ್ಕೆಯ ಸುತ್ತ ವಿವಾದಗಳು ಏರ್ಪಡುತ್ತಿರುವುದರಿಂದ 2020-21ರಲ್ಲಿ ಮಂಜೂರಾದ ₹279 ಕೋಟಿ ಬಳಕೆಯಾಗದೆ ಉಳಿದುಕೊಂಡಿದೆ.

ಗಾಳಿಯ ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ, ಶಬ್ದದ ಪ್ರಮಾಣ ಅಳೆಯುವ ಮೀಟರ್ ಖರೀದಿ, ಹೊಗೆ ತಪಾಸಣೆಗೆ ಸೆನ್ಸಾರ್, ಕಸ ಗುಡಿಸುವ ಯಂತ್ರಗಳ ಖರೀದಿ... ಈ ಕಾಮಗಾರಿಗಳು ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸಲಾದ ಹೊಸ ಪಟ್ಟಿಯಲ್ಲೂ ಸೇರ್ಪಡೆಯಾಗಿವೆ.

ವಾಯು ಮಾಲಿನ್ಯ ತಪ್ಪಿಸಲು ಇರುವ ಮಾನದಂಡಗಳನ್ನು ಪಾಲಿಸದೆ ಅನುದಾನ ಘೋಷಣೆಯಿಂದ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ. ‘ಗಾಳಿ ಗುಣಮಟ್ಟದ ಕುರಿತು ನಗರ ಕ್ರಿಯಾ ಯೋಜನೆ ಸಂಬಂಧ 2019ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಅದನ್ನು ಪಾಲಿಸಲಾಗುತ್ತಿದೆಯೇ ಎಂಬುದು ಮುಖ್ಯ. ಪಾದಚಾರಿ ಮಾರ್ಗಗಳ ಗುಣಮಟ್ವ ಇಲ್ಲದಿರುವುದೇ ಇದಕ್ಕೆ ಉದಾಹರಣೆ’ ಎಂದು ಈ ಕ್ಷೇತ್ರದಲ್ಲಿ ಅಧ್ಯಯನ ನಡೆಸಿರುವ ಐಶ್ವರ್ಯಾ ಸುಧೀರ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT