ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಅಗತ್ಯ: ಎಂ. ವೆಂಕಯ್ಯನಾಯ್ಡು ಪ್ರತಿಪಾದನೆ

Last Updated 24 ಏಪ್ರಿಲ್ 2022, 15:42 IST
ಅಕ್ಷರ ಗಾತ್ರ

ಬೆಂಗಳೂರು: ಚುನಾಯಿತ ಪ್ರತಿನಿಧಿಗಳ ಪಕ್ಷಾಂತರ ದೊಡ್ಡ ಪಿಡುಗಾಗಿ ದೇಶವನ್ನು ಬಾಧಿಸುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಪಕ್ಷಾಂತರ ನಿಷೇಧ ಕಾಯ್ದೆಯ ತಿದ್ದುಪಡಿ ಅಗತ್ಯ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಪ್ರತಿಪಾದಿಸಿದರು‌.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ‘ನವ ಭಾರತದಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ಮಾತನಾಡಿದ ಅವರು, ‘ಪಕ್ಷಾಂತರಿಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿರುವ ಲೋಪಗಳನ್ನು ಗುರುತಿಸಿ, ಸೂಕ್ತ ತಿದ್ದುಪಡಿಗಳನ್ನು ತರಬೇಕು’ ಎಂದರು.

ಪಕ್ಷಾಂತರದಿಂದಾಗಿ ದೇಶದ ರಾಜಕಾರಣದಲ್ಲಿ ಮೌಲ್ಯಗಳ ಕುಸಿತವಾಗುತ್ತಿದೆ. ಅದು ಕ್ರಮೇಣ ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸುತ್ತಿದೆ. ರಾಜಕಾರಣದಲ್ಲಿ ಮೌಲ್ಯ ಕುಸಿತ ತಡೆಯುವ ಮೂಲಕ ಪ್ರಜಾಪ್ರಭುತ್ವವನ್ನು ಕಾಪಾಡಬೇಕಿದೆ ಎಂದು ಹೇಳಿದರು.

ಪಕ್ಷಾಂತರ ಮಾಡುವವರು ಹುದ್ದೆಗೆ ರಾಜೀನಾಮೆ ನೀಡುವುದನ್ನು ಕಡ್ಡಾಯಗೊಳಿಸಬೇಕು. ಪುನರಾಯ್ಕೆ ಆಗುವವರೆಗೆ ಯಾವುದೇ ಹುದ್ದೆ ನೀಡಬಾರದು. ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯ ಪ್ರಕರಣಗಳ ಇತ್ಯರ್ಥಕ್ಕೆ ಸಭಾಧ್ಯಕ್ಷರು, ಸಭಾಪತಿ ಮತ್ತು ನ್ಯಾಯಾಲಯಗಳಿಗೆ ಅಧಿಕಾರವಿದೆ. ಆದರೆ, ಸದಸ್ಯರ ಅಧಿಕಾರದ ಅವಧಿ ಮುಗಿದರೂ ತೀರ್ಪು ಬರುವುದಿಲ್ಲ. ಮೂರು ತಿಂಗಳೊಳಗೆ ಈ ಪ್ರಕರಣಗಳನ್ನು ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಉಪ ರಾಷ್ಟ್ರಪತಿ ಹೇಳಿದರು.

ಶಾಸನಸಭೆಗಳ ಒಳಗಿನ ಮತ್ತು ಹೊರಗಿನ ನಡವಳಿಕೆಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳು ಸ್ವಯಂ ನೀತಿಸಂಹಿತೆ ಅಳವಡಿಸಿಕೊಳ್ಳಬೇಕು. ರಚನಾತ್ಮಕ ಚಟುವಟಿಕೆಗಳನ್ನು ಬೆಂಬಲಿಸುವ ಬದ್ಧತೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ತೋರಬೇಕು ಎಂದು ಸಲಹೆ ನೀಡಿದರು.

ಸಾಂವಿಧಾನಿಕ ಸಂಸ್ಥೆಗಳು, ಸಾಂವಿಧಾನಿಕ ಹುದ್ದೆಗಳ ಮೇಲಿನ ದಾಳಿ ಹಾಗೂ ಅವುಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಿಲ್ಲಬೇಕು. ರಾಜಕೀಯದಲ್ಲಿರುವ ವ್ಯಕ್ತಿಗಳ ಕುಟುಂಬವನ್ನು ಗುರಿಯಾಗಿಸಿ ಟೀಕಾಪ್ರಹಾರ ನಡೆಸುವುದೂ ಕೊನೆಯಾಗಬೇಕು. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುವುದಕ್ಕೆ ಬದ್ಧತೆ ತೋರಿಸಬೇಕು‌ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳು ಬಲಗೊಳ್ಳಲಿ: ಭಾನುವಾರ ಪಂಚಾಯತ್‌ ರಾಜ್‌ ದಿನ ಎಂಬುದನ್ನು ನೆನಪಿಸಿದ ವೆಂಕಯ್ಯ ನಾಯ್ಡು, ‘ಮೂರು ಹಂತದ ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಿಂದ ಭಾರತದ ಪ್ರಜಾಪ್ರಭುತ್ವ ಹೆಚ್ಚು ಸದೃಢವಾಗಿದೆ. ಈ ಸಂದರ್ಭದಲ್ಲಿ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಅಧಿಕಾರ, ಅನುದಾನ ಮತ್ತು ಚುನಾಯಿತ ಆಡಳಿತ ವ್ಯವಸ್ಥೆ ನೀಡುವ ಮೂಲಕ ಅವುಗಳನ್ನು ಬಲಪಡಿಸಬೇಕು’ ಎಂದರು.

ಸಂಸದ ಪಿ.ಸಿ. ಮೋಹನ್‌, ಬೆಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಕೆ. ಸದಾಶಿವ ಶೆಣೈ, ಉಪಾಧ್ಯಕ್ಷ ಶ್ಯಾಮ್‌ ಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಎಚ್‌.ವಿ. ಕಿರಣ್‌ ಉಪಸ್ಥಿತರಿದ್ದರು.

‘ಅಭಿಪ್ರಾಯ ಹೇರಬೇಡಿ’

‘ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಪತ್ರಕರ್ತರ ವೈಯಕ್ತಿಕ ಅಭಿಪ್ರಾಯ ಹೇರಲು ಅವಕಾಶ ಇರಬಾರದು. ಆಗ ಮಾತ್ರ ನಿಷ್ಪಕ್ಷಪಾತ ಸುದ್ದಿ ಪ್ರಕಟಿಸಲು ಸಾಧ್ಯ’ ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದರು.

‘ಸುದ್ದಿ ಸಂಪೂರ್ಣವಾಗಿ ವೈಯಕ್ತಿಕ ಅಭಿಪ್ರಾಯಗಳಿಂದ ಮುಕ್ತವಾಗಿ ಇರಬೇಕು. ಅಭಿಪ್ರಾಯಗಳು ಅಂಕಣ ಮತ್ತು ಸಂಪಾದಕೀಯಕ್ಕೆ ಸೀಮಿತವಾಗಿರಲಿ. ಸುದ್ದಿಯಲ್ಲಿ ಪತ್ರಕರ್ತರ ಅಭಿಪ್ರಾಯ ಹೇರುವುದು ಜನರನ್ನು ಗೊಂದಲಕ್ಕೆ ತಳ್ಳಲು ಕಾರಣವಾಗುತ್ತದೆ’ ಎಂದರು.

‘ಮಾಧ್ಯಮಗಳಲ್ಲಿನ ಸುದ್ದಿ ಸತ್ಯಕ್ಕೆ ಹತ್ತಿರವಾಗಿ ಇರಬೇಕು. ಯಾವತ್ತೂ ಪ್ರಚೋದನಕಾರಿ ಸ್ವರೂಪದಲ್ಲಿ ಸುದ್ದಿ ಪ್ರಕಟಿಸಬಾರದು. ಈಗ ರಾಜಕೀಯ ಪಕ್ಷಗಳೂ ಮಾಧ್ಯಮ ಸಂಸ್ಥೆಗಳನ್ನು ನಡೆಸುತ್ತಿವೆ. ಇನ್ನು ಸ್ವತಂತ್ರ ಮಾಧ್ಯಮ ಇರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಾಮಾಜಿಕ ಮಾಧ್ಯಮಗಳು ದೇಶದಲ್ಲಿ ದ್ವೇಷ ಬಿತ್ತಿ, ಜನರ ನಡುವೆ ಒಡಕು ಮೂಡಿಸುತ್ತಿವೆ. ಅವುಗಳ ಮೇಲೆ ನಿಯಂತ್ರಣ ಇಲ್ಲ. ನಿಗಾ ಇಡುವ ವ್ಯವಸ್ಥೆಯೂ ಸರಿಯಾಗಿಲ್ಲ. ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುವುದು ಅಗತ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT