ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಮಂಡಳಿಗೆ ನೇಮಕ: ಹೈಕೋರ್ಟ್ ನೋಟಿಸ್

Last Updated 15 ಏಪ್ರಿಲ್ 2021, 20:14 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವನ್ಯಜೀವಿ ಮಂಡಳಿಗೆ 10 ಸದಸ್ಯರ ನಾಮನಿರ್ದೇಶನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳಿಗೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ.

ಪರಿಸರ ಎಂಜಿನಿಯರ್ ಭೋಜರಾಜ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಚೇತನ್ ಬಿ., ಸೋಮಶೇಖರ್ ಎ.ಆರ್‌., ಅಲೋಕ್ ವಿಶ್ವನಾಥ್ (ಯಲಹಂಕ ಶಾಸಕ ಎಸ್‌.ಆರ್. ವಿಶ್ವನಾಥ ಅವರ ಪುತ್ರ), ನವೀನ್ ಜೆ.ಎಸ್., ವಿನೋದ್‌ಕುಮಾರ್‌ ಬಿ. ನಾಯಕ, ದಿನೇಶ್ ಸಿಂಘ್ವಿ, ಕೆ.ಎಸ್‌.ಎನ್‌. ಚಿಕ್ಕೆರೂರು (ನಿವೃತ್ತ ಐಪಿಎಸ್ ಅಧಿಕಾರಿ), ತ್ಯಾಗ್‌ ಉತ್ತಪ್ಪ, ಜೋಸೆಫ್‌ ಹೂವರ್‌ ಅವರನ್ನು ಒಳಗೊಂಡಂತೆ ಮಂಡಳಿಯನ್ನು ಪುನರ್ ರಚಿಸಿ ಸರ್ಕಾರ 2020 ಅಕ್ಟೋಬರ್ 16ರಂದು ಅಧಿಸೂಚನೆ ಹೊರಡಿಸಿತ್ತು. ಈ ನೇಮಕವು ವನ್ಯಜೀವಿ ಕಾಯ್ದೆಯ ಸೆಕ್ಷನ್ 6(1)(ಡಿ) ಮತ್ತು (ಇ) ಅಡಿಯಲ್ಲಿನ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ

‘ಇದು ರಾಜಕೀಯ ಪ್ರೇರಿತ ನೇಮಕವಾಗಿದ್ದು, ಒಂಬತ್ತು ಜನರಿಗೆ ಪರಿಸರ ವಿಜ್ಞಾನ ಮತ್ತು ಸಂರಕ್ಷಣೆ ಬಗ್ಗೆ ಆಳವಾದ ಜ್ಞಾನ ಇಲ್ಲ. ಅಲ್ಲದೇ, ಪರಿಶಿಷ್ಟ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಸದಸ್ಯರನ್ನು ಒಳಗೊಂಡಿಲ್ಲ. ಇದು ಕಾನೂನಿಗೆ ವಿರುದ್ಧವಾದ ನೇಮಕ’ ಎಂದು ಅವರು ವಾದಿಸಿದ್ದಾರೆ.

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಆರ್. ವಿಶ್ವನಾಥ್ ಸಮ್ಮುಖದಲ್ಲಿ ಮಂಡಳಿಯ 15ನೇ ಸಭೆಯನ್ನು 2021ರ ಜನವರಿ 19ರಂದು ನಡೆಸಲಾಗಿದೆ. ಆ ಮೂಲಕ ವನ್ಯಜೀವಿ ಮಂಡಳಿಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ’ ಎಂದು ದೂರಿದ್ದಾರೆ.

‘ಗ್ರೇಟರ್ ಹೆಸರುಘಟ್ಟ ಸಂರಕ್ಷಣಾ ಮೀಸಲು ಪ್ರದೇಶದ ಪ್ರಸ್ತಾವನೆ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ. ಮಂಡಳಿ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವನಾಥ್ ಅವರ ಆಣತಿಯಂತೆ ಈ ಪ್ರಸ್ತಾವನೆ ತಿರಸ್ಕರಿಸಿದ್ದಾರೆ’ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT