ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲ್ಕೊರೆತ ಕುರಿತು ಒಳನೋಟ: ತಾಪಮಾನ ಏರಿಕೆಯ ಪಾಲು

Last Updated 23 ಜುಲೈ 2022, 19:29 IST
ಅಕ್ಷರ ಗಾತ್ರ

ಮಂಗಳೂರು: ‘ಕಡಲ ತೀರಗಳೆಂದರೆ ಅಲೆಗಳಿಗೆ ಆಟದ ಮೈದಾನವಿದ್ದಂತೆ ಎಂಬುದು ಕಡಲತೀರ ಅಧ್ಯಯನಕಾರರ ಅಭಿಪ್ರಾಯ. ಈ ಮೈದಾನವನ್ನು ನಾವು ಅತಿಕ್ರಮಿಸಿದರೆ ಅಲೆಗಳು ಉನ್ಮಾದಗೊಂಡಾಗ ನಮ್ಮ ಮನೆಯಂಗಳವನ್ನು ಅತಿಕ್ರಮಿಸುತ್ತವೆ..’ ಎನ್ನುತ್ತ ವೈಜ್ಞಾನಿಕ ಸತ್ಯವನ್ನು ಸರಳಮಾತಿನಲ್ಲಿ ಬಿಚ್ಚಿಟ್ಟರು ಸಾಗರ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಹೆಜಮಾಡಿ ಗಂಗಾಧರ ಭಟ್.

ಎಲ್ಲ ಕಡೆ ಸಮುದ್ರ ಒಂದೇ ತೆರನಾಗಿ ಇರುವುದಿಲ್ಲ. ಕೆಲವು ಕಡೆ ಒರಟಾದ ಅಲೆಗಳು ತರಲೆ ಮಾಡುತ್ತವೆ, ಇನ್ನು ಕೆಲವು ಕಡೆ ಶಿಸ್ತಿನ ಸಿಪಾಯಿಗಳಂತೆ ಇರುತ್ತವೆ. ಇವುಗಳ ವೈಜ್ಞಾನಿಕ ಅಧ್ಯಯನ ನಡೆಸಿ, ಕಡಲಿಗೆ ತಡೆಗೋಡೆ ಕಟ್ಟಿದಾಗ ಮಾತ್ರ ಸುಸ್ಥಿರವಾಗಲು ಸಾಧ್ಯ. ಕಡಲ ಸಂರಚನೆ ಅಧ್ಯಯನವು ಅದು ಮರಳು ಪ್ರಧಾನವೇ ಅಥವಾ ಕಲ್ಲಿನಿಂದ ಕೂಡಿದ ತೀರವೇ ಎಂಬುದನ್ನು ಸ್ಪಷ್ಟಪಡಿಸುತ್ತದೆ. ತರಲೆ ಮಾಡುವ ಅಲೆಗಳನ್ನು ನಿಯಂತ್ರಿಸಲು ತಡೆಗೋಡೆ ಕಟ್ಟುವುದೇ ಪರಿಹಾರವಲ್ಲ. ಕಲ್ಲುತಂದು ಹಾಕಿದರೆ ತಡೆಗೋಡೆ ಕಟ್ಟಿದಂತೆಯೂ ಅಲ್ಲ. ಅಬ್ಬರಿಸುವ ಅಲೆಗಳು ಕಲ್ಲನ್ನು ಸಮುದ್ರಕ್ಕೆ ಸೆಳೆದುಕೊಂಡು ಹೋಗುತ್ತವೆ ಎಂದು ಅಲೆಗಳ ಅಂತರಂಗವನ್ನು ಅವರು ವಿವರಿಸಿದರು.

ಕಡಲ ಅಧ್ಯಯನದಲ್ಲಿ ಕೆಸರು ಹಾಗೂ ಅಂಟು ಮಣ್ಣಿನ(ಸೆಡಿಮೆಂಟ್ಸ್‌) ಶೇಖರಣೆ ಹಾಗೂ ಜಾರುವಿಕೆ, ಅವು ಸಮುದ್ರ ದಡಕ್ಕೆ ಸಮಾನಾಂತರವಾಗಿ ಚಲಿಸುತ್ತಿವೆಯೇ ಎಂಬುದೂ ಮಹತ್ವದ್ದು. ಅಲೆಗಳು, ಉಬ್ಬರವಿಳಿತಗಳು ಮತ್ತು ಪ್ರವಾಹಗಳಿಂದ ದಡಕ್ಕೆ ಸಮಾನಾಂತರವಾಗಿರುವ ಕೆಸರುಗಳ ಚಲನೆಯನ್ನು ಸಮುದ್ರದ ದಿಕ್ಚ್ಯುತಿ (littoral drift) ಎಂದು ಪರಿಗಣಿಸಲಾಗುತ್ತದೆ. ಕರಾವಳಿಯ ತೀರದಲ್ಲಿ, ಕೆಲವು ಕಡೆ ಅವೈಜ್ಞಾಕವಾಗಿ ರಚಿಸಿರುವ ತಡೆಗೋಡೆಗಳು (sea walls) ಮತ್ತು ಇತರ ರಚನೆಗಳು ಅಲೆಯ ಗತಿಯನ್ನು ಬದಲಿಸುತ್ತವೆ. ನದಿ ಮತ್ತು ಸಮುದ್ರ ಸಂಗಮ ಪ್ರದೇಶದಲ್ಲಿ ಮಾನವ ನಿರ್ಮಿತ ನೆಲೆಗಳು ಮೇಲೆದ್ದಾಗ ಅಲ್ಲಿ ಸಂಗ್ರಹವಾಗುವ ಸೆಡಿಮೆಂಟ್ಸ್‌ ಆಚೀಚೆ ಹಂಚಿಕೆಯಾಗುತ್ತವೆ. ಇವು ಹೆಚ್ಚು ಶೇಖರಣೆಯಾಗದ ಭಾಗದಲ್ಲಿ ಮಳೆಗಾಲದಲ್ಲಿ ಕಡಲ್ಕೊರೆತ ತೀವ್ರವಾಗುವ ಸಾಧ್ಯತೆ ಇರುತ್ತದೆ. ತಡೆಗೋಡೆ, ಬ್ರೇಕ್‌ ವಾಟರ್‌ನಂತಹ ನಿಯಂತ್ರಕಗಳಿಂದ ಒಂದು ಕಡೆ ಲಾಭವಾದರೆ, ಇನ್ನೊಂದು ಕಡೆ ದೊಡ್ಡ ನಷ್ಟವಾಗುತ್ತದೆ. ವಿಭಿನ್ನ ಕಾಲದ ಉಪ ಗ್ರಹ ಆಧಾರಿತ ನಕ್ಷೆಗಳನ್ನು ತುಲನೆ ಮಾಡಿದರೆ, ಒಂದೆಡೆ ಕಡಲ ತಡಿ ಹಿಗ್ಗಿ ರುವ, ಇನ್ನೊಂದೆಡೆ ಕುಗ್ಗಿರುವ ವ್ಯತ್ಯಾಸ ಗೋಚರಿಸುತ್ತದೆ ಎಂದು ತಿಳಿಸಿದರು.

‘ಭೌಗೋಳಿಕ ನೆಲೆ, ಸಮುದ್ರದ ಆಳ, ಅಲೆಗಳ ಗಾತ್ರ, ಏರಿಳಿತ, ಅವಧಿ ಇಂತಹ ಸೂಕ್ಷ್ಮ ಸಂಗತಿಗಳು ಸಮುದ್ರ ತಡೆಗೋಡೆಯ ಸಾಫಲ್ಯ ಅಥವಾ ವೈಫಲ್ಯವನ್ನು ನಿರ್ಧರಿಸುತ್ತವೆ. ಕಲ್ಲಿನಿಂದ ಕೂಡಿದ ತೀರದಲ್ಲಿ ಕಡಲ್ಕೊರೆತ ಕಡಿಮೆ. ಇಂತಹ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸಿದಾಗ ಅಷ್ಟಾಗಿ ಸಮಸ್ಯೆ ಆಗದು. ಅಳಿವೆ ಬಾಗಿಲಿನಲ್ಲಿ ಅಭಿವೃದ್ಧಿ, ಬಂದರು ನಿರ್ಮಾಣ, ಇವುಗಳ ವಿಸ್ತರಣೆ ಆಗುವ ಕಾರಣ ಇಂತಹ ಪ್ರದೇಶಗಳಲ್ಲಿ ಕಡಲ್ಕೊರೆತ ಹೆಚ್ಚು. ಸಮುದ್ರಕ್ಕೆ ತಡೆಗೋಡೆ ಕಟ್ಟುವುದು ಸಂಪೂರ್ಣ ವಿಫಲ ಎನ್ನಲಾಗದು. ಆದರೆ, ಅಗಾಧ ಬಂಡವಾಳ ಹೂಡಿಕೆ, ಪಶ್ಚಿಮ ಘಟ್ಟದ ಅಮೂಲ್ಯ ಕಲ್ಲುಗಳನ್ನು ತಂದು, ಕಡಲ ತಡಿಗೆ ಸುರಿಯುವುದು ಎಷ್ಟರ ಮಟ್ಟಿಗೆ ಸುಸ್ಥಿರ ಎಂಬುದರ ಬಗ್ಗೆ ಯೋಚಿಸಬೇಕಾಗಿದೆ’ ಎನ್ನುತ್ತಾರೆ ತಜ್ಞರಾದ ಪ್ರೊ. ಆರ್‌.ಸಿ.ಭಟ್ಟ.

ಉಷ್ಣತೆ ಹೆಚ್ಚಿದಂತೆ ಸಮುದ್ರ ಮಟ್ಟ ಏರಿಕೆಯಾಗಿ ಅಲೆಗಳ ಚಲನೆ ಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಂಚಯಗೊಂಡ (accretion) ಭೂಮಿ ಮತ್ತೆ ಸಮುದ್ರದ ಒಡಲು ಸೇರುವ ಸಂದರ್ಭಗಳೂ ಇರುತ್ತವೆ. ಹೀಗಾಗಿ, ಜಾಗತಿಕ ತಾಪಮಾನ ಏರಿಕೆ ಕೂಡ ಕಡಲ್ಕೊರೆತದ ಮೇಲೆ ಪರಿಣಾಮ ಉಂಟುಮಾಡಿದೆ ಎಂಬುದು ಅವರ ಅಭಿಪ್ರಾಯ.

ಕರಾವಳಿಯಲ್ಲಿ ಸಾಧ್ಯತೆ ಇದ್ದಲ್ಲಿ ಕಾಂಡ್ಲಾ ಬೆಳೆಸಬಹುದು. ಕಡಲ ಅಂಚಿನಲ್ಲಿ ಬೆಳೆಯುವ ಬಳ್ಳಿಗಳು, ಪಾಮ್ ಟ್ರೀ, ಕುರುಚಲು ಗಿಡಗಳ ಹಸಿರು ಗೋಡೆ ನಿರ್ಮಾಣದಿಂದ ಸ್ವಲ್ಪ ಮಟ್ಟಿಗೆ ಕಡಲ್ಕೊರೆತ ತಡೆಗಟ್ಟ ಬಹುದು. ಸಿಆರ್‌ಝೆಡ್ ನಿಯಮಗಳ ಪುನರಾವರ್ತಿತ ತಿದ್ದುಪಡಿ, ರೆಸಾರ್ಟ್‌ ಗಳು, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಹೆಚ್ಚಿದರೆ, ಸಮಸ್ಯೆಯ ಗಂಭೀರತೆಯೂ ಹೆಚ್ಚುತ್ತದೆ.ಸಮುದ್ರದ ತೀರದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಮಾಡಿದರೆ, ಸಮಸ್ಯೆಗಳು ಬಿಗಡಾಯಿಸಲಾರವು ಎಂಬುದು ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT