ಶುಕ್ರವಾರ, ಅಕ್ಟೋಬರ್ 7, 2022
28 °C

ಅರಕೆರೆ ಗ್ರಾ. ಪಂ: ಸಿವಿಲ್‌ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಲಹಂಕ ತಾಲ್ಲೂಕಿನ ಅರೆಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ನಾಲ್ವರು ಸದಸ್ಯರು ಪಾಲ್ಗೊಳ್ಳದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಜನವರಿ 20ರಂದು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಏಕಸದಸ್ಯ ಪೀಠ ಗುರುವಾರ ಆದೇಶ ಹೊರಡಿಸಿದೆ.

ಅರಕೆರೆ ಗ್ರಾಮ ಪಂಚಾಯಿತಿಯ(ಮಾರಸಂದ್ರ ವ್ಯಾಪ್ತಿಯ) ಸದಸ್ಯರಾಗಿರುವ ಕೆ.ಆರ್‌. ತಿಮ್ಮೇಗೌಡ, ಪದ್ಮಾ ಕೃಷ್ಣಪ್ಪ, ಭಾಗ್ಯಮ್ಮ ಈಶ್ವರಾಚಾರಿ ಮತ್ತು ಮುನಿಲಕ್ಷ್ಮಮ್ಮ ಪರಶುರಾಮ್‌ ಅವರ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸ್ವಾತಿ ಎಂಬುವವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಾಲ್ವರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಬೇಕೆಂಬ ಕೋರಿಕೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮಾನ್ಯ ಮಾಡಿದ್ದರು.

ಹಿರಿಯ ಸಿವಿಲ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ನಾಲ್ವರೂ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಜಿ. ಪಂಡಿತ್‌ ಅವರಿದ್ದ ಏಕಸದಸ್ಯ ಪೀಠ, ಜ. 20ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿತು. ಪ್ರತಿವಾದಿಗಳಾದ ಸ್ವಾತಿ ಮತ್ತು ಇತರ 13 ಮಂದಿಗೆ ನೋಟಿಸ್‌ ಜಾರಿಗೆ ಆದೇಶಿಸಿತು. ಜಿಲ್ಲಾ ಚುನಾವಣಾಧಿಕಾರಿ ಮತ್ತು ಯಲಹಂಕ ತಹಶೀಲ್ದಾರ್‌ ಅವರ ಪರವಾಗಿ ಸರ್ಕಾರಿ ವಕೀಲರು ನೋಟಿಸ್‌ ಪಡೆದರು. ನೋಟಿಸ್‌ಗೆ ಉತ್ತರಿಸಲು ಪ್ರತಿವಾದಿಗಳಿಗೆ ಐದು ದಿನಗಳ ಕಾಲಾವಕಾಶ ನೀಡಲಾಗಿದೆ.

ಅಮಾನತು ಅಲ್ಲ; ನಿರ್ಬಂಧ

ಅರೆಕೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಕ.ಆರ್‌. ತಿಮ್ಮೇಗೌಡ, ಪದ್ಮಾ ಕೃಷ್ಣಪ್ಪ, ಭಾಗ್ಯಮ್ಮ ಈಶ್ವರಾಚಾರಿ ಮತ್ತು ಮುನಿಲಕ್ಷ್ಮಮ್ಮ ಪರಶುರಾಮ್‌ ಅವರನ್ನು ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ತಪ್ಪಾಗಿ ಪ್ರಕಟವಾಗಿತ್ತು.

ನ್ಯಾಯಾಲಯ ನಾಲ್ವರು ಗ್ರಾಮ ಪಂಚಾಯಿತಿ ಸದಸ್ಯರನ್ನು ಅಮಾನತು ಮಾಡಿರಲಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು