ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆರೋಗ್ಯವಾಣಿ –104’ ಸ್ಥಗಿತ: ₹34.70 ಕೋಟಿಗೆ ಪಿಎಸ್‌ಎಂಆರ್‌ಐ ನೋಟಿಸ್‌

Last Updated 16 ಜನವರಿ 2022, 20:24 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಮೂರನೇ ಅಲೆ ಅಬ್ಬರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ‘ಆರೋಗ್ಯವಾಣಿ–104’ ಸ್ಥಗಿತಗೊಂಡಿದೆ. ಇದರಿಂದಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸುಲಭವಾಗಿ ಲಭ್ಯವಿದ್ದ ಆರೋಗ್ಯ ಸೇವಾ ಸೌಲಭ್ಯಕ್ಕೆ ಸಮಸ್ಯೆಯಾಗಿದೆ. ಜೊತೆಗೆ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿದ್ದ ಈ ಸಹಾಯವಾಣಿ ಕೇಂದ್ರದ 400ಕ್ಕೂ ಹೆಚ್ಚು ಸಿಬ್ಬಂದಿ ಬೀದಿಗೆ ಬೀಳುವ ಆತಂಕ ಎದುರಾಗಿದೆ.

‘ಒಡಂಬಡಿಕೆಯಂತೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿರುವ ಯೋಜನೆಯ ಗುತ್ತಿಗೆ ವಹಿಸಿರುವ ಹೈದರಾಬಾದ್‌ನ ಪೆರುಮಾಳ್ ಸ್ವಾಸ್ಥ್ಯ ನಿರ್ವಹಣೆ ಮತ್ತು ಸಂಶೋ­ಧನಾ ಸಂಸ್ಥೆ (ಪಿಎಸ್‌ಎಂಆರ್‌ಐ), ಈ ಸೇವೆ ಮುಕ್ತಾಯಗೊಳಿಸಲು ನಿರ್ಧರಿಸಿದೆ. ‘ಹಂತ ಹಂತವಾಗಿ ಹಣ ಬಿಡುಗಡೆ ಮಾಡಿದರೂ ಸೇವೆ ನೀಡಲು ಸಂಸ್ಥೆ ಸಿದ್ಧವಿಲ್ಲ. ಹೀಗಾಗಿ, ಹೊಸ ಸಂಸ್ಥೆಗೆ ಗುತ್ತಿಗೆ ನೀಡಲು ಟೆಂಡರ್‌ ಆಹ್ವಾನಿಸಲಾಗಿದೆ. ಶೀಘ್ರದಲ್ಲಿ ಈ ಸೇವೆ ಮತ್ತೆ ಆರಂಭಿಸುತ್ತೇವೆ’ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌ ತಿಳಿಸಿದರು.

₹ 34.70 ಕೋಟಿ ಪಾವತಿಸಿ: ‘ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ₹ 23.67 ಕೋಟಿ ಮತ್ತು ಒಡಂಬಡಿಕೆಯಂತೆ ನಡೆದುಕೊಳ್ಳದೇ ಇರುವುದರಿಂದ ಒಪ್ಪಂದ ಮುಕ್ತಾಯ ಮಾಡಿಕೊಂಡ ಕಾರಣಕ್ಕೆ (ಒಪ್ಪಂದ ಮುಕ್ತಾಯವಾದರೆ ಮೂರು ತಿಂಗಳ ಹಣ ಹೆಚ್ಚುವರಿಯಾಗಿ ಕೊಡಬೇಕು) ₹ 11.03 ಕೋಟಿ ಸೇರಿ ಒಟ್ಟು ₹ 34.70 ಕೋಟಿ ಪಾವತಿಸಬೇಕು’ ಎಂದು ಆರೋಗ್ಯ ಇಲಾಖೆಯ ಆಯುಕ್ತ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರಿಗೆ ಪಿಎಸ್‌ಎಂಆರ್‌ಐ ಮುಖ್ಯ ಹಣಕಾಸು ಅಧಿಕಾರಿ ಕೆ. ಚಂದ್ರಮೌಳಿ ಅವರು ಜ. 12ರಂದು ನೋಟಿಸ್‌ ನೀಡಿದ್ದಾರೆ.

2013ರಲ್ಲಿ ಹುಬ್ಬಳ್ಳಿ ಹಾಗೂ 2018ರಲ್ಲಿ ಬೆಂಗಳೂರಿನಲ್ಲಿ ಈ ಸಹಾಯವಾಣಿಯನ್ನು ಆರಂಭಿಸಲಾಗಿತ್ತು. ಆದರೆ, ₹ 40 ಲಕ್ಷ ಬಿಲ್ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಕೇಂದ್ರದ ದೂರವಾಣಿ ಸಂಪರ್ಕವನ್ನು ಬಿಎಸ್‌ಎನ್‌ಎಲ್‌ ಕಡಿತಗೊಳಿಸಿತ್ತು. ಹೀಗಾಗಿ, ನ. 29ರಿಂದಲೇ ಸಹಾಯವಾಣಿಯ ಚಟುವಟಿಕೆ ಸ್ಥಗಿತಗೊಳಿಸಿರುವ ಸಂಸ್ಥೆ, ನ. 30ರಂದು ಸರ್ಕಾರಕ್ಕೆ ನೋಟಿಸ್‌ ನೀಡಿತ್ತು. ಆ ನೋಟಿಸ್‌ನಲ್ಲಿ ಸರ್ಕಾರ ಬಾಕಿ ಉಳಿಸಿಕೊಂಡಿರುವ ₹ 24.12 ಕೋಟಿ ಪಾವತಿಸುವಂತೆ ಉಲ್ಲೇಖಿಸಿತ್ತು.

ನವೆಂಬರ್ ಅಂತ್ಯದ ಒಳಗೆ ₹ 10 ಕೋಟಿ ನೀಡುವುದಾಗಿ ಸಂಸ್ಥೆಗೆ ಆರೋಗ್ಯ ಇಲಾಖೆ ಭರವಸೆ ನೀಡಿತ್ತು. ಅಲ್ಲದೆ, ಡಿ. 22ರಂದು ₹ 1.25 ಕೋಟಿ ಮತ್ತು ಜ. 5ರಂದು ₹ 4.92 ಕೋಟಿ ನೀಡಿತ್ತು. ಉಳಿದ ಹಣವನ್ನು ಪಾವತಿಸುವುದಾಗಿ ಹೇಳಿದ್ದ ಇಲಾಖೆ, ಸೇವೆಯನ್ನು ಮುಂದುವರಿಸುವಂತೆಯೂ ತಿಳಿಸಿತ್ತು. ಈ ಮೊತ್ತದಲ್ಲಿ ಬಿಎಸ್‌ಎನ್‌ಎಲ್‌ ಬಾಕಿ ಬಿಲ್ ಅನ್ನು ಸಂಸ್ಥೆ ಪಾವತಿಸಿತ್ತು. ಆದರೆ, ಸಂಸ್ಥೆಯ ಐಟಿ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ 4 ತಿಂಗಳಿನಿಂದ ವೇತನ ಪಾವತಿ ಆಗಿರಲಿಲ್ಲ. ಹೀಗಾಗಿ ಆ ಸಿಬ್ಬಂದಿ ಕೆಲಸಕ್ಕೆ ಬರಲು ನಿರಾಕರಿಸಿದ್ದರು.

ಇದೀಗ, ₹ 10 ಕೋಟಿ ನೀಡುವ ಮಾತಿನಂತೆ ನಡೆದುಕೊಂಡಿಲ್ಲವೆಂದು ಕಾರಣ ನೀಡಿ, ಸಹಾಯವಾಣಿಗೆ ಸಂಬಂಧಿಸಿದಂತೆ ಸರ್ಕಾರದ ಜೊತೆ 2013 ಮಾರ್ಚ್ 6ರಂದು ಮಾಡಿಕೊಂಡಿದ್ದ ಒಡಂಬಡಿಕೆಯನ್ನು ‘ಮುಕ್ತಾಯ’
ಗೊಳಿಸುವುದಾಗಿ ನೋಟಿಸ್‌ ನೀಡಿರುವ ಪಿಎಸ್‌ಎಂಆರ್‌ಐ, ಫೆ. 22ರಂದು ಒಡಂಬಡಿಕೆಯಿಂದ ಹೊರಬರುವುದಾಗಿ ಸ್ಪಷ್ಟಪಡಿಸಿದೆ.

‘ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರ ಹಾಗೂ ಮಹಿಳಾ ಸಹಾಯವಾಣಿ (181) ಕೇಂದ್ರದ ಮೂಲಕ ಸೇವಾ ಸೌಲಭ್ಯ ಒದಗಿಸಿದ ಮೊತ್ತ 2021ರ ಮಾರ್ಚ್‌ವರೆಗೆ (ಹಳೆ ಬಾಕಿ) ₹ 16.07 ಕೋಟಿ ಉಳಿಕೆ ಆಗಿತ್ತು. ಈ ಮೊತ್ತವೂ ಸೇರಿ ಪ್ರಸಕ್ತ ಸಾಲಿನಲ್ಲಿ (2022) ಜ. 12ರವರೆಗೆ ₹ 31.76 ಕೋಟಿ ಸರ್ಕಾರ ನೀಡಬೇಕಿದೆ. ವಿವಿಧ ಹಂತಗಳಲ್ಲಿ ಸರ್ಕಾರ ₹ 17.09 ಕೋಟಿ ಪಾವತಿಸಿದೆ. ಉಳಿದ ₹ 14.67 ಕೋಟಿ ಹಾಗೂ ಶೇ 15ರಂತೆ ಬಡ್ಡಿ (ಜ. 12ರವರೆಗೆ) ₹ 9 ಕೋಟಿ ಸೇರಿ ₹ 23.67 ಕೋಟಿ ನೀಡಬೇಕಿದೆ. ಅಲ್ಲದೆ, ಒಡಂಬಡಿಕೆ ಮುಕ್ತಾಯಗೊಳಿಸಲು ಸರ್ಕಾರವೇ ಕಾರಣ ಆಗಿರುವುದರಿಂದ ಹೆಚ್ಚುವರಿಯಾಗಿ ₹ 11.03 ಕೋಟಿ ನೀಡಬೇಕು’ ಎಂದು ನೋಟಿಸ್‌ನಲ್ಲಿ ಸಂಸ್ಥೆ ವಿವರಿಸಿದೆ.

‘ಶೀಘ್ರದಲ್ಲಿ ಹೊಸ ಸಂಸ್ಥೆಗೆ ಗುತ್ತಿಗೆ’

‘ಸದ್ಯಕ್ಕೆ 104 ಆರೋಗ್ಯ ಸಹಾಯವಾಣಿ ಸ್ಥಗಿತಗೊಂಡಿದೆ. ಗುತ್ತಿಗೆ ವಹಿಸಿಕೊಂಡ ಸಂಸ್ಥೆಯೇ (ಪಿಎಸ್‌ಎಂಆರ್‌ಐ) ಒಡಂಬಡಿಕೆ ಮುಕ್ತಾಯದ ನೋಟಿಸ್‌ ನೀಡಿದೆ. ಅದನ್ನು ಅಂಗೀಕರಿಸುತ್ತೇವೆ. ಈಗಾಗಲೇ ಹೊಸ ಟೆಂಡರ್‌ ಕರೆದಿದ್ದೇವೆ. ಇನ್ನು 10 ದಿನಗಳಲ್ಲಿ ತಾಂತ್ರಿಕ ಬಿಡ್‌ ತೆರೆಯುತ್ತೇವೆ. ಈ ತಿಂಗಳ ಅಂತ್ಯದಲ್ಲಿ ಈ ಸಹಾಯವಾಣಿ ಮತ್ತೆ ಆರಂಭಿಸುತ್ತೇವೆ’ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್‌ ತಿಳಿಸಿದರು.

‘ಸರ್ಕಾರದಲ್ಲಿ ಹಂತ ಹಂತವಾಗಿಯೇ ಹಣ ನೀಡಲಾಗುತ್ತದೆ. ಒಂದೇ ಬಾರಿಗೆ ₹ 12 ಕೋಟಿ ಬಿಡುಗಡೆ ಮಾಡಿ ಎಂದು ಸಂಸ್ಥೆ ಹಟ ಹಿಡಿದಿದೆ. ನಾವು ಒಂದಷ್ಟು ಹಣ ಬಿಡುಗಡೆ ಮಾಡಿದ ನಂತರವೂ ಅವರು ಸೇವೆ ಆರಂಭಿಸಿಲ್ಲ. ಸಂಸ್ಥೆಯವರ ಮಾತುಗಳನ್ನು ಅಲ್ಲಿನ ಸಿಬ್ಬಂದಿ ಕೇಳುತ್ತಿಲ್ಲ. ಸಿಬ್ಬಂದಿ ಮೇಲೆ ಆಡಳಿತ ವರ್ಗಕ್ಕೆ ನಿಯಂತ್ರಣ ಇಲ್ಲ. ಎಲ್ಲರೂ ಹೊರಗುತ್ತಿಗೆ ಸಿಬ್ಬಂದಿ ಆಗಿರುವುದರಿಂದ ನಾವು ಮಧ್ಯಪ್ರವೇಶಿಸುವಂತಿಲ್ಲ. ಸದ್ಯ ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳನ್ನು 14410 ಸಹಾಯವಾಣಿ ಮೂಲಕ ನೀಡುತ್ತಿದ್ದೇವೆ. ಸಂಸ್ಥೆಯವರು ಕೋವಿಡ್‌ ಸಂದರ್ಭದಲ್ಲಿ ಸಹಾಯ ಮಾಡದೇ ಇದ್ದರೆ ಹೇಗೆ? ಹೀಗಾಗಿ, ಮತ್ತೆ ಅವರನ್ನು ಮುಂದುವರಿಸುವ ಪ್ರಶ್ನೆಯೇ ಇಲ್ಲ. ಅವರ ಬಾಕಿ ಹಣದ ಬಗ್ಗೆ ಮುಂದೆ ನೋಡೋಣ ಎಂದು ಎರಡೂ ಕೇಂದ್ರಗಳನ್ನು ಬಂದ್‌ ಮಾಡಿದ್ದೇವೆ. ಅವರಿಗೆ ಈ ಹಿಂದೆಯೂ ನೋಟಿಸ್‌ ನೀಡಿ ಶೇ 50ರಷ್ಟು ಹಣ ತಡೆಹಿಡಿಯುವುದಾಗಿ ಸೂಚನೆ ನೀಡಿದ್ದೆವು. ಈ ಎಲ್ಲ ಪರಿಸ್ಥಿತಿಯ ಕಾರಣಕ್ಕೆ ಪಿಎಸ್‌ಎಂಆರ್‌ಐ ಜೊತೆಗಿನ ಒಪ್ಪಂದ ರದ್ದು ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಏನಿದು ‘ಆರೋಗ್ಯವಾಣಿ–104’

ಆರೋಗ್ಯ ಸೇವಾ ಮಾಹಿತಿ ಒದಗಿಸಲು ದಿನದ 24 ಗಂಟೆ ಕಾರ್ಯಾಚರಿಸುವ ‘ಆರೋಗ್ಯವಾಣಿ–104’ ಅನ್ನು ಆರಂಭಿಸಲಾಗಿತ್ತು. ಚಿಕಿತ್ಸೆಗಾಗಿ ಸಕಾಲದಲ್ಲಿ ಆಸ್ಪತ್ರೆಗಳನ್ನು ತಲುಪಲು ಸಾಧ್ಯವಾಗದವರು ಈ ಸಂಖ್ಯೆಗೆ ಕರೆ ಮಾಡಿ, ತಜ್ಞ ವೈದ್ಯರ ಸಲಹೆ ಪಡೆಯಬಹುದು. ಆರೋಗ್ಯ ಸಲಹೆ, ಆಪ್ತ ಸಮಾಲೋಚನೆ, ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ, ಆರೋಗ್ಯ ಸಂಸ್ಥೆಗಳ ಅಥವಾ ಸಿಬ್ಬಂದಿಯ ವಿರುದ್ಧ ದೂರು, ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಸಾಮಾನ್ಯ ಕಾಯಿಲೆಗಳಾದ ಕೆಮ್ಮು, ಶೀತ, ಜ್ವರ, ಬೇಧಿ, ಹೊಟ್ಟೆನೋವು, ಸಕ್ಕರೆ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಔಷಧಿಯ ಶಿಫಾರಸ್ಸು ಹಾಗೂ ಅವುಗಳ ಸೇವನೆಯ ಬಗ್ಗೆ ದೂರವಾಣಿ ಮೂಲಕವೇ ಸಲಹೆ ಪಡೆಯಲು ಈ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು. ಆಪ್ತ ಸಮಾಲೋಚನೆ ಮತ್ತು ಸಲಹೆ (ಒತ್ತಡ, ಖಿನ್ನತೆ, ಆತಂಕ, ನಂತರದ ಆಘಾತ ಚೇತರಿಕೆ, ಎಚ್‌ಐವಿ, ಏಡ್ಸ್ ಇತ್ಯಾದಿ), ಆರೋಗ್ಯ ಮತ್ತು ರೋಗಲಕ್ಷಣಗಳ ಪರೀಕ್ಷೆಗೆ (ಆರಂಭಿಕ ಮೌಲ್ಯಮಾಪನ, ಜ್ವರ ಸಲಹೆ, ಗರ್ಭಧಾರಣೆ) ಸಂಬಂಧಿಸಿ ಪ್ರಥಮ ಚಿಕಿತ್ಸಾ ಮಾಹಿತಿ ಮತ್ತು ಸಲಹೆ ಪಡೆಯಲು ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT