ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವತ್ಥ ನಾರಾಯಣ ಎಂ.ಬಿ ಪಾಟೀಲರನ್ನು ಭೇಟಿಯಾಗಿದ್ದಾರೆ: ಡಿ.ಕೆ ಶಿವಕುಮಾರ್

Last Updated 10 ಮೇ 2022, 16:35 IST
ಅಕ್ಷರ ಗಾತ್ರ

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಅವರನ್ನು ಗೋಪ್ಯವಾಗಿ ಭೇಟಿಮಾಡಿದ್ದಾರೆ ಎಂಬ ವದಂತಿ ಕಾಂಗ್ರೆಸ್‌– ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ನಾಂದಿಹಾಡಿದೆ.

ಪಿಎಸ್ಐ ನೇಮಕಾತಿ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮಗಳಲ್ಲಿ ತಮ್ಮ ವಿರುದ್ಧ ವಾಗ್ದಾಳಿ ನಡೆಸದಂತೆ ಮನವೊಲಿಸಲು ಸಚಿವರು ಪಾಟೀಲರನ್ನು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

ಆದರೆ, ಅಶ್ವತ್ಥ ನಾರಾಯಣ ಮತ್ತು ಎಂ.ಬಿ. ಪಾಟೀಲ ಇಬ್ಬರೂ ಭೇಟಿಯ ಸುದ್ದಿಯನ್ನು ನಿರಾಕರಿಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಶ್ವತ್ಥ ನಾರಾಯಣ ಅವರು ಎಂ.ಬಿ. ಪಾಟೀಲರನ್ನು ಭೇಟಿಮಾಡಿದ್ದಾರೆ. ತಮ್ಮ ಇಲಾಖೆಗಳ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬುದು ಅವರ ಉದ್ದೇಶ’ ಎಂದರು.

‘ಇದೊಂದು ಖಾಸಗಿ ಭೇಟಿ ಎಂದು ಅವರು ಹೇಳಬಹುದು. ಪಾಟೀಲರು ಶಿಕ್ಷಣ ಸಂಸ್ಥೆ ನಡೆಸುತ್ತಿರುವುದರಿಂದ ಅವರ ಸಲಹೆ ಪಡೆಯುವುದಕ್ಕೆ ಹೋಗಿದ್ದಾಗಿಯೂ ಸಬೂಬು ನೀಡಬಹುದು’ ಎಂದರು.

‘ಸಚಿವರು ಭೇಟಿ ಮಾಡಿಲ್ಲ’

‘ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ನಮ್ಮ ಮನೆಗೆ ಭೇಟಿ ನೀಡಿದ್ದರು ಎಂಬುದು ಸುಳ್ಳು ಮಾಹಿತಿ. ನಾವು ಭೇಟಿ ಮಾಡಿಲ್ಲ’ ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಒಂದು ರಾಜಕೀಯ ಪಕ್ಷದ ನಾಯಕ. ಅವರು ಸಚಿವರು. ಭೇಟಿ
ಆದರೆ ತಪ್ಪಿಲ್ಲ. ನನ್ನ ಮಗ ಮತ್ತು ಅವರ ಮಕ್ಕಳು ಸಹಪಾಠಿಗಗಳು. ಅದರಲ್ಲಿ ತಪ್ಪು ಹುಡುಕಲಾಗದು’ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅಶ್ವತ್ಥ ನಾರಾಯಣ ಕುಟುಂಬದ ಪಾತ್ರ ಕುರಿತ ಆರೋಪವಿದೆ. ತನಿಖೆ ನಡೆದಿರುವ ಹಂತದಲ್ಲಿ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ. ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT