ಗುರುವಾರ , ಅಕ್ಟೋಬರ್ 6, 2022
22 °C

ವಿಧಾನಸಭೆ ಕೋಲಾಹಲ: ಕೆರೆ ಒತ್ತುವರಿ ವಿಚಾರವಾಗಿ ಬಿಜೆಪಿ, ಕಾಂಗ್ರೆಸ್‌ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿನ ಕೆರೆಗಳ ಒತ್ತುವರಿ ವಿಷಯ ವಿಧಾನಸಭೆಯಲ್ಲಿ ಸೋಮವಾರ ಕೋಲಾಹಲಕ್ಕೆ ಕಾರಣವಾಯಿತು. ‘ಬೆಂಗಳೂರಿನ ಕೆರೆಗಳನ್ನು ಮುಚ್ಚಿದ್ದು ಯಾರು’ ಎಂಬ ಪ್ರಶ್ನೆಯನ್ನೇ ಮುಂದಿಟ್ಟುಕೊಂಡು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ತೀವ್ರ ವಾಕ್ಸಮರ ನಡೆಸಿದರು.

ಅತಿವೃಷ್ಟಿ ಮತ್ತು ಪ್ರವಾಹದ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಕಂದಾಯ ಸಚಿವ ಆರ್‌. ಅಶೋಕ ಕೆರೆ ಒತ್ತುವರಿ ಬಗ್ಗೆ ಪ್ರಸ್ತಾಪಿಸಿದರು. ‘ಬೆಂಗಳೂರಿನಲ್ಲಿ ಈ ಬಾರಿ ಮಾತ್ರ ಪ್ರವಾಹ ಬಂದಿಲ್ಲ. ಹಿಂದೆಯೂ ಹಲವು ಬಾರಿ ಇದೇ ಸಮಸ್ಯೆ ಆಗಿತ್ತು. ಇದು ಮಾನವ ನಿರ್ಮಿತ ಸಮಸ್ಯೆ. ಹಿಂದೆ ಆಡಳಿತ ನಡೆಸಿದವರಿಗೆ ದೂರದೃಷ್ಟಿ ಇದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ’ ಎಂದರು.

ಆಗ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ಕೆ.ಜೆ. ಜಾರ್ಜ್‌, ‘ನಾನು ಕೆರೆ ಕಬಳಿಸಿದ್ದೇನೆ ಎಂದು ನಿಮ್ಮ ಪಕ್ಷದವರು ಟ್ರೋಲ್‌ ಮಾಡುತ್ತಿದ್ದಾರೆ. ನನ್ನ ಕಾಲದಲ್ಲಿ ಯಾವ ಕೆರೆ ಮುಚ್ಚಿದ್ದೇನೆ ತೋರಿಸಿ? ನಾನು ಕಾನೂನುಬಾಹಿರ ಕೆಲಸ ಮಾಡಿದ್ದರೆ ಕ್ರಮ ಜರುಗಿಸಿ’ ಎಂದು ಸವಾಲು ಹಾಕಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ‘ಯಾರು ಕೆರೆ ಕಬಳಿಸಿದ್ದಾರೆ ಎಂಬುದರ ತನಿಖೆ ಮಾಡಲಾಗುವುದು. ಕೆರೆಗಳ ಜಮೀನು ಮತ್ತು ನಿರ್ಬಂಧಿತ ವಲಯದಲ್ಲಿ (ಬಫರ್‌ ಝೋನ್‌) ಅತಿಕ್ರಮಣ, ಕಟ್ಟಡ ನಿರ್ಮಾಣ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2007ರಲ್ಲಿ ಆದೇಶ ಹೊರಡಿಸಿತ್ತು. ಆ ಬಳಿಕವೂ ಹಲವು ಕೆರೆಗಳ ಅತಿಕ್ರಮಣ ನಡೆದಿದೆ. ಇದಕ್ಕೆ ಹೊಣೆ ಯಾರು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಕೆರೆಗಳ ಕಣ್ಮರೆಗೆ ಕಾರಣವಾಗಿರುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಕೆರೆ ಸ್ವರೂಪ ಅಳಿಸಲು ಯತ್ನ: ‘ಮೂಲ ಸ್ವರೂಪ ಕಳೆದುಕೊಂಡ ಕೆರೆಗಳನ್ನು ದಾಖಲೆಗಳಿಂದ ಅಳಿಸಿ ಹಾಕುವ ಪ್ರಯತ್ನ 2018ರಲ್ಲಿ ನಡೆದಿತ್ತು. ಭೂ ಕಂದಾಯ ಕಾಯ್ದೆಯ ಸೆಕ್ಷನ್‌–68ರ ಅಡಿಯಲ್ಲಿ ಆ ರೀತಿಯ ತೀರ್ಮಾನ ಕೈಗೊಳ್ಳಲು ಅವಕಾಶ ಇಲ್ಲ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಭಿಪ್ರಾಯ ನೀಡಿದ್ದರು. ಅದನ್ನು ಬದಿಗೊತ್ತಿ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಜನರಿಂದ ವಿರೋಧ ವ್ಯಕ್ತವಾದ ಕಾರಣದಿಂದ ಸರ್ಕಾರ ಆ ತೀರ್ಮಾನವನ್ನು ಅನು ಷ್ಠಾನಕ್ಕೆ ತಂದಿರಲಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

ಅಲ್ಲಗಳೆದ ಸಿದ್ದರಾಮಯ್ಯ: ‘ನಮ್ಮ ಅವಧಿಯಲ್ಲಿ ಆ ರೀತಿಯ ತೀರ್ಮಾನ ಕೈಗೊಂಡಿರಲಿಲ್ಲ. ಮೂಲ ಸ್ವರೂಪ ಕಳೆದುಕೊಂಡ ಕೆರೆಗಳನ್ನು ಪಟ್ಟಿಯಿಂದ ಕೈಬಿಡುವ ನಿರ್ಧಾರ ಮಾಡಿದ್ದೆವು. ಆದರೆ, ಅದನ್ನು ಅನುಷ್ಠಾನಕ್ಕೆ ತರಲಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಬಲಕ್ಕೆ ನಿಂತ ಜಾರ್ಜ್‌, ‘ಆಗ ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಕ್ಷೇತ್ರದಲ್ಲಿ ಉಂಟಾದ ಸಮಸ್ಯೆ ಕಾರಣದಿಂದ ಈ ಪ್ರಸ್ತಾವ ಸಂಪುಟದ ಮುಂದೆ ಬಂದಿತ್ತು’ ಎಂದರು.

‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಏಕೆ ಮುಟ್ಟಿಕೊಳ್ಳುತ್ತೀರಿ? ಕೆರೆಗಳನ್ನು ನುಂಗುವುದೇ ನಿಮ್ಮ ಉದ್ದೇಶವಾಗಿತ್ತು ಎಂಬುದು ಸಾಬೀತಾಗಿದೆ’ ಎಂದು ಬೊಮ್ಮಾಯಿ ಏರಿದ ಧ್ವನಿಯಲ್ಲಿ ಹೇಳಿದರು.

‘ಹಳೆಯ ವಿಷಯ ಪ್ರಸ್ತಾಪಿಸಿ ದಿಕ್ಕು ತಪ್ಪಿಸಬೇಡಿ. ಸುಭಾಶ್‌ ನಗರದ ಕೆರೆಯಲ್ಲಿ ಬಸ್‌ ನಿಲ್ದಾಣವಿದೆ. ಅದನ್ನು ಮತ್ತೆ ಕೆರೆಯನ್ನಾಗಿ ಮಾಡಲು ಸಾಧ್ಯವೆ’ ಎಂದು ಸಿದ್ದರಾಮಯ್ಯ ಕೇಳಿದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ವಾಕ್ಸಮರಕ್ಕೆ ಇಳಿದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಮಧ್ಯಾಹ್ನದ ಭೋಜನ ವಿರಾಮಕ್ಕೆ ಮುಂದೂಡಿದರು.

‘ಸೊಳ್ಳೆ ಕಾಟಕ್ಕೆ ಕೆರೆ ಮುಚ್ಚಿದ್ದರಂತೆ’
‘ಸೊಳ್ಳೆ ಕಾಟದ ಕಾರಣಕ್ಕಾಗಿ ಕೆರೆಗಳನ್ನು ಮುಚ್ಚಿರಬಹುದು’ ಎಂದು ಕಾಂಗ್ರೆಸ್‌ ಶಾಸಕ ಕೆ.ಜೆ. ಜಾರ್ಜ್‌ ವಿಧಾನಸಭೆಯಲ್ಲೇ ಹೇಳಿದ್ದರು. ಈ ವಿಷಯವನ್ನು ಮುಂದಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ‘ಟ್ರೋಲ್‌’ ಮಾಡಲಾಗುತ್ತಿದೆ. ಸೋಮವಾರ ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ ಅವರು, ತೀವ್ರ ಬೇಸರ ವ್ಯಕ್ತಪಡಿಸಿದರು.

42 ಕೆರೆಗಳ ಪಟ್ಟಿ ನೀಡಿದ ಅಶೋಕ
ನಗರದಲ್ಲಿ 1977ರಿಂದ ಈವರೆಗೆ 42 ಕೆರೆಗಳು ಒತ್ತುವರಿಯಾಗಿವೆ ಎಂದು ಕಂದಾಯ ಸಚಿವ ಆರ್‌. ಅಶೋಕ ಸದನದಲ್ಲೇ ಪಟ್ಟಿ ಓದಿದರು.

ಬಿಡಿಎ 22 ಕೆರೆಗಳನ್ನು ಒತ್ತುವರಿ ಮಾಡಿದೆ. ಬಿಡಿಎ ಅನುಮೋದಿತ ಬಡಾವಣೆಯಲ್ಲಿ ಒಂದು ಕೆರೆ ಮುಚ್ಚಲಾಗಿದೆ. ಬಿಬಿಎಂಪಿ ಐದು ಕೆರೆಗಳನ್ನು ಮುಚ್ಚಿದೆ. ಖಾಸಗಿ ಒತ್ತುವರಿದಾರರು ಏಳು ಕೆರೆಗಳನ್ನು ಅತಿಕ್ರಮಣ ಮಾಡಿದ್ದಾರೆ. ಬಿಡಿಎ ಕೆರೆಗಳನ್ನು ಮುಚ್ಚಿ ನಿರ್ಮಿಸಿದ ಬಡಾವಣೆಗಳಲ್ಲಿ ಅಂದಾಜು ₹ 11,640 ಕೋಟಿ ಮೌಲ್ಯದ ನಿವೇಶನಗಳನ್ನು ಮಾರಾಟ ಮಾಡಿದೆ ಎಂದರು.

‘ಶಕ್ತಿಯುತವಾದಷ್ಟೂ ವಿರೋಧಿಗಳು ಹೆಚ್ಚು’
‘ನಾವು ಶಕ್ತಿಯುತವಾದಷ್ಟೂ ವಿರೋಧಿಗಳು ಹೆಚ್ಚು. ದುರ್ಬಲವಾದಷ್ಟೂ ವಿರೋಧಿಗಳು ಕಡಿಮೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಕೆರೆಗಳನ್ನು ಮುಚ್ಚಿರುವ ಕುರಿತ ಚರ್ಚೆಯ ವೇಳೆ, ‘ಸಿದ್ದರಾಮಯ್ಯ ಮತ್ತು ಜಾರ್ಜ್‌ ಅವರೇ ನಿಮ್ಮ ಕಾಲದಲ್ಲಿ ಆಗಿಲ್ಲ ಬಿಡಿ. ನಿಮಗೆ ವಿರೋಧಿಗಳು ಹೆಚ್ಚು. ನೀವು ಹಾಗೆ ಮಾಡುವುದಕ್ಕೂ ಆಗುತ್ತಿರಲಿಲ್ಲ’ ಎಂದು ಅಶೋಕ ತಮಾಶೆ ಮಾಡಿದರು.

ಆಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಶಕ್ತಿಯುತವಾದಷ್ಟೂ ವಿರೋಧಿಗಳು ಹೆಚ್ಚುತ್ತಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು