ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ವಿಧಾನಮಂಡಲ ಅಧಿವೇಶನ| ಧರಣಿ, ಗದ್ದಲ ಇಲ್ಲ: ಮಾತಿನ ‘ಕುಸ್ತಿ’

ಇಂದಿನಿಂದ ವಿಧಾನಮಂಡಲ ಅಧಿವೇಶನ * ಕಾರ್ಯತಂತ್ರ ಬದಲಿಸಿದ ‘ಕೈ’
Last Updated 12 ಸೆಪ್ಟೆಂಬರ್ 2021, 18:55 IST
ಅಕ್ಷರ ಗಾತ್ರ

ಬೆಂಗಳೂರು: ಬೆಲೆ ಏರಿಕೆ, ಕಾನೂನು ಸುವ್ಯವಸ್ಥೆ, ರಾಷ್ಟ್ರೀಯ ಶಿಕ್ಷಣ ನೀತಿ, ಕೋವಿಡ್‌ ನಿಯಂತ್ರಣ ಮತ್ತು ಸಚಿವರ ಭ್ರಷ್ಟಾಚಾರ ಆರೋಪಗಳ ಕುರಿತು ಸೋಮವಾರದಿಂದ ಆರಂಭವಾಗುವ ವಿಧಾನ ಮಂಡಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಹೆಡೆಮುರಿ ಕಟ್ಟಲು ಪ್ರಮುಖ ವಿರೋಧಪಕ್ಷಗಳು ತಯಾರಿ ನಡೆಸಿವೆ.

ಕಾಂಗ್ರೆಸ್‌ ಈ ಬಾರಿ ತನ್ನ ಕಾರ್ಯತಂತ್ರವನ್ನು ಬದಲಿಸಿದ್ದು, ಧರಣಿ, ಸಭಾತ್ಯಾಗ ಮತ್ತು ಕಲಾಪಕ್ಕೆ ಅಡ್ಡಿಪಡಿಸುವ ಹಾದಿಯನ್ನು ಬಿಟ್ಟು ಆರೋಗ್ಯಕರ ಚರ್ಚೆಯ ಮೂಲಕವೇ ಸರ್ಕಾರಕ್ಕೆ ಚಾಟಿ ಬೀಸಲು ಸಿದ್ಧತೆ ನಡೆಸಿದೆ. ಜೆಡಿಎಸ್‌ ತನ್ನ ರಣನೀತಿ ಏನೆಂಬುದನ್ನು
ಸ್ಪಷ್ಟಪಡಿಸಿಲ್ಲ.

ಅಧಿವೇಶನ ಇದೇ 23 ರವರೆಗೆ ನಡೆಯಲಿದೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ಬಳಿಕ ಎದುರಿಸುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಹಿಂದೆ ಅವರು ಕಾನೂನು ಮತ್ತು ಸಂಸದೀಯ ಸಚಿವರಾಗಿ ಬಿ.ಎಸ್‌.ಯಡಿಯೂರಪ್ಪ ಸರ್ಕಾರವನ್ನು ಸಮರ್ಥಿಸುವ ಕೆಲಸ ಮಾಡಿದ್ದರು. ಈಗ ಆ ಜವಾಬ್ದಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೆಗಲೇರಿದೆ.

ಕಾಂಗ್ರೆಸ್‌ ಕಾರ್ಯತಂತ್ರವೇನು:?

‘ಈ ಹಿಂದಿನ ಅಧಿವೇಶನದಲ್ಲಿ ಗದ್ದಲ, ಸಭಾತ್ಯಾಗ, ಧರಣಿ ನಡೆದು ಗದ್ದಲದ ವಿಷಯಗಳೇ ಜನರಿಗೆ ತಲುಪುತ್ತಿದ್ದವು. ಸದನದಲ್ಲಿ ಪ್ರಸ್ತಾಪಿಸುತ್ತಿದ್ದ ಗಂಭೀರ ವಿಚಾರಗಳು ಜನರಿಗೆ ತಲುಪುತ್ತಿರಲಿಲ್ಲ. ಇಂತಹ ಪರಿಸ್ಥಿತಿಯ ಲಾಭ ಪಡೆದು ಸರ್ಕಾರವೂ ತನಗೆ ಬೇಕಾದ ಹಾಗೇ ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯುತ್ತಿತ್ತು. ಈ ಬಾರಿ ಕಾರ್ಯತಂತ್ರ ಬದಲಿಸಲಾಗಿದೆ. ಪ್ರಮುಖ ವಿಷಯಗಳ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಚರ್ಚೆಗೆ ಒತ್ತಾಯಿಸಲು ತೀರ್ಮಾನಿಸಲಾಗಿದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

‘ಸರ್ಕಾರದಿಂದ ಪ್ರಾಮಾಣಿಕ ಉತ್ತರ ಬಯಸುತ್ತೇವೆ. ಒಂದು ವೇಳೆ ಉತ್ತರ ಕೊಡದಿದ್ದರೆ ಜನರಿಗೆ ವಾಸ್ತವ ಅರ್ಥವಾಗುತ್ತದೆ. ಜನರಿಗೆ ಸಂಬಂಧಿಸಿದ ಸಂಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತೇವೆ. ಎಲ್ಲ ಶಾಸಕರಿಗೂ ಅವರ ಆಸಕ್ತಿಯ ವಿಚಾರಗಳನ್ನು ಚರ್ಚಿಸಲು ಸಿದ್ಧತೆ ನಡೆಸಿಕೊಂಡು ಬರಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ, ಹಜ್‌ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ಮೇಲೆ ಭ್ರಷ್ಟಾಚಾರ ಆರೋಪಗಳ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ನೀತಿ ನಿರೂಪಣಾ ಸಮಿತಿ: ಪ್ರತಿ ಬಾರಿಯೂ ಗದ್ದಲ, ಧರಣಿ, ಸಭಾತ್ಯಾಗದ ಕಾರಣ ವಿಧಾನಸಭೆಯ ಕಲಾಪ ನಡೆಯದೇ ಇರುವುದರಿಂದ ಕಲಾಪ ಸುಗಮವಾಗಿ ನಡೆಸಲು ಪೂರಕವಾಗಿ ನೀತಿ ನಿರೂಪಣಾ ಸಮಿತಿಯೊಂದನ್ನು ರಚಿಸಲು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಿರ್ಧರಿಸಿದ್ದಾರೆ.

ಕಲಾಪದ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ಎಲ್ಲ ಸಚಿವರು ಹಾಜರಿರುವುದನ್ನು ಕಡ್ಡಾಯಗೊಳಿಸಲಾಗಿದೆ. ಅಧಿವೇಶನದ ಅವಧಿಯಲ್ಲಿ ಯಾವುದೇ ಇತರ ಕಾರ್ಯಕ್ರಮ ನಿಗದಿಪಡಿಸಿಕೊಳ್ಳಬಾರದು. ಸಚಿವರು ರಜೆ ಅರ್ಜಿ ಸಲ್ಲಿಸಬಾರದು. ನೆಪ ಹೇಳಿ ಕಲಾಪಕ್ಕೆ ಗೈರಾಗುವಂತಿಲ್ಲ ಎಂಬುದಾಗಿ ಕಾಗೇರಿ ಸೂಚನೆ ನೀಡಿದ್ದಾರೆ.

ಈ ಅಧಿವೇಶನದಲ್ಲಿ 18 ಮಸೂದೆ ಗಳ ಕುರಿತು ಚರ್ಚೆ ನಡೆಯಲಿದೆ. 10 ಹೊಸ ಮಸೂದೆಗಳು. ನಾಲ್ಕು ಮಸೂದೆ ಗಳನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಅಂಗೀಕಾರಕ್ಕೆ ಬಾಕಿ ಇವೆ. ನಾಲ್ಕು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದು, ಅವುಗಳಿಗೆ ಪೂರಕವಾದ ಮಸೂದೆಗಳು ಮಂಡನೆಯಾಗಲಿವೆ.

ಕೋಟ ಮೇಲ್ಮನೆ ಸಭಾನಾಯಕ: ಈ ಹಿಂದೆ ಮೇಲ್ಮನೆ ಸಭಾನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಮೇಲ್ಮನೆ ಸಭಾನಾಯಕರನ್ನಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT