ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಗುತ್ತಿಗೆಗಳಲ್ಲಿ ಶೇ 40 ಕಮಿಷನ್‌: ವಿಧಾನಸಭೆಯಲ್ಲಿ ಜಟಾಪಟಿ

Last Updated 28 ಮಾರ್ಚ್ 2022, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಕಾಮಗಾರಿ ಗುತ್ತಿಗೆಗಳಲ್ಲಿ ಶೇ 40 ಕಮಿಷನ್‌ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸದಸ್ಯರು ಹಾಗೂ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಡುವೆ ವಿಧಾನಸಭೆಯಲ್ಲಿ ಸೋಮವಾರ ಜಟಾಪಟಿ ನಡೆಯಿತು.

ಇಲಾಖಾ ಬೇಡಿಕೆಗೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರ ನೀಡುತ್ತಿದ್ದರು. ಈ ವೇಳೆ ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಸ್ಪಷ್ಟನೆ ಕೇಳಿ, ‘ಪ್ರಾಮಾಣಿಕ ಸಚಿವರಿದ್ದಾರೆ’ ಎಂದರು. ಆಗ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ, ‘ಉಳಿದವರು ಪ್ರಾಮಾಣಿಕ ಸಚಿವರಲ್ಲವೇ? ಶೇ 40 ಕಮಿಷನ್‌ ಪಡೆಯುವವರೇ’ ಎಂದು ವ್ಯಂಗ್ಯವಾಗಿ ಕೇಳಿದರು.

ಈ ಮಾತಿನಿಂದ ಕೆರಳಿದ ಗೋವಿಂದ ಕಾರಜೋಳ, ‘ಹಾಗಿದ್ದರೆ ನೀವೆಲ್ಲ ಶೇ 10 ಶಾಸಕರೇ. ಇವತ್ತು ಪತ್ರಿಕೆಗಳಲ್ಲಿ ನಿಮ್ಮ ಬಗ್ಗೆಯೂ ಬಂದಿದೆ. ಅದನ್ನು ನೋಡಿದ್ದೀರಾ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಗುತ್ತಿಗೆದಾರರ ಸಂಘದವರು ಆರೋಪ ಮಾಡಿರುವುದು ನಿಮ್ಮ ಸರ್ಕಾರದ ಬಗ್ಗೆ. ಅದು ಬಿಟ್ಟು ಶಾಸಕರ ಬಗ್ಗೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ’ ಎಂದು ದೂರಿನ ಪತ್ರವನ್ನು ಪ್ರದರ್ಶಿಸಿದರು. ಈ ವೇಳೆ ಕಾರಜೋಳ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಮೊತ್ತ ಪರಿಷ್ಕರಣೆ 4 ಜನರ ಕೈಯಲ್ಲಿ!:

ಕೇವಲ ನಾಲ್ಕೈದು ಗುತ್ತಿಗೆದಾರರು ನೀರಾವರಿ ಯೋಜನೆಗಳ ಸಾವಿರಾರು ಕೋಟಿ ಮೌಲ್ಯದ ಗುತ್ತಿಗೆಗಳನ್ನು ಪಡೆಯುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲೂ ಒಪ್ಪಿಗೆ ಪಡೆಯದೇ ಅವರಿಗೆ ಕಾಮಗಾರಿಗಳನ್ನು ಮಂಜೂರು ಮಾಡಲಾಗುತ್ತದೆ ಮತ್ತು ಕಾಮಗಾರಿ ಮೊತ್ತ ಅವರು ಹೇಳಿದಂತೆ ಪರಿಷ್ಕರಣೆಯೂ ಆಗುತ್ತದೆ ಎಂದು ಕಾಂಗ್ರೆಸ್‌ನ ಶಿವಾನಂದ ಪಾಟೀಲ ವಿಧಾನಸಭೆಯಲ್ಲಿ ದೂರಿದರು.

‘ಆ ಗುತ್ತಿಗೆದಾರರು ಯಾರು ಎಂಬುದನ್ನು ಬಹಿರಂಗ ಪಡಿಸಿ’ ಎಂದು ಶಾಸಕರು ಒತ್ತಾಯಿಸಿದಾಗ, ಡಿ.ವೈ. ಉಪ್ಪಾರ್, ಶೆಟ್ಟಿ, ಶಂಕರ್, ಮಾನಪ್ಪ ವಜ್ಜಲ್ ಎಂಬು
ದಾಗಿ ಶಿವಾನಂದ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT