ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ–2023: ನಿರ್ಣಾಯಕ ಹಂತದ ಪ್ರಚಾರಕ್ಕೆ ಸರ್ವಪಕ್ಷಗಳು ಸಿದ್ಧ

ರ್‍ಯಾಲಿ, ರೋಡ್‌ ಶೋ, ಪಾದಯಾತ್ರೆಗಳ ಮೂಲಕ ವರ್ಷ ಪೂರ್ತಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು
Last Updated 29 ಮಾರ್ಚ್ 2023, 18:53 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಎದುರಿಸಲು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಕಳೆದ ಒಂದು ವರ್ಷದಿಂದ ವಿವಿಧ ಪಕ್ಷಗಳು ತಮ್ಮದೆ ಆದೇ ಆದ ರೀತಿಯಲ್ಲಿ ಪೂರ್ವಭಾವಿ ತಯಾರಿ ನಡೆಸಿಕೊಂಡಿವೆ. ರ್‍ಯಾಲಿಗಳು, ರೋಡ್‌ ಶೋ, ಪಾದಯಾತ್ರೆಗಳ ಮೂಲಕ ತಮ್ಮ ಪರ ಅಲೆ ಎಬ್ಬಿಸುವ ಪ್ರಯತ್ನ ಮಾಡಿದ್ದವು. ಇದೀಗ ಚುನಾವಣೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಲ್ಲ ನಿರ್ಣಾಯಕ ಹಂತದ ಪ್ರಚಾರ ಕಾರ್ಯಕ್ಕೆ ಇಳಿಯಲಿವೆ.

ಬಿಜೆಪಿ

ಬಿಜೆಪಿ ಕಳೆದ ಒಂದು ವರ್ಷದಿಂದ ಪಕ್ಷದ ಪರವಾಗಿ ಅಲೆ ಎಬ್ಬಿಸಲು ‘ಪರಿವರ್ತನಾ ಯಾತ್ರೆ’, ‘ಬೂತ್‌ ವಿಜಯ’, ‘ಜನ ಸಂಕಲ್ಪ ಯಾತ್ರೆ’, ‘ನವಶಕ್ತಿ ಸಮಾವೇಶ’, ‘ವಿಜಯಸಂಕಲ್ಪ’ ಯಾತ್ರೆಗಳನ್ನು ನಡೆಸಿದೆ. ವಿಜಯಸಂಕಲ್ಪ ಯಾತ್ರೆ ಅಂತಿಮ ಸಮಾವೇಶ ದಾವಣಗೆರೆಯಲ್ಲಿ ಇತ್ತೀಚೆಗೆ ಮಹಾಸಂಗಮ ರೂಪದಲ್ಲಿ ನಡೆಸಿತು. ಪ್ರಧಾನಿ ಮೋದಿ ಇದರಲ್ಲಿ ಭಾಗವಹಿಸಿದ್ದರು. ಅಲ್ಲದೇ, ಮೋದಿ ಆರು ಬಾರಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಒಂಬತ್ತು ಬಾರಿ ರಾಜ್ಯಕ್ಕೆ ಭೇಟಿ ನೀಡಿ ಹಲವು ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಉದ್ಘಾಟನೆ ಮಾಡಿದರು. ಇನ್ನು ಕೆಲವು ಯೋಜನೆಗಳಿಗೆ ಚಾಲನೆ ನೀಡಿದ್ದೂ ಅಲ್ಲದೇ, ಸುಮಾರು ₹50 ಸಾವಿರ ಕೋಟಿಗೂ ಅಧಿಕ ಮೊತ್ತದ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ಕಾಂಗ್ರೆಸ್‌

ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಲಾಭದ ಫಸಲು ತೆಗೆಯಲು ಸುಮಾರು ಒಂದು ವರ್ಷದ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ‘ಮೇಕೆದಾಟು’ ಪಾದಯಾತ್ರೆ ಹಮ್ಮಿಕೊಂಡಿತು. ಕೋವಿಡ್‌ ಕೋಲಾಹಲದ ಮಧ್ಯೆಯೂ ಯಾತ್ರೆಯನ್ನು ಮುನ್ನಡೆಸಿದರು. ಆ ಬಳಿಕ ದಾವಣಗೆರೆಯಲ್ಲಿ ‘ಸಿದ್ದರಾಮಯ್ಯ–75’ ಅಮೃತ ಮಹೋತ್ಸವ‌, ಸ್ವಾತಂತ್ರ್ಯ ನಡಿಗೆ, ರಾಹುಲ್‌ಗಾಂಧಿಯ ‘ಭಾರತ್‌ ಜೋಡೊ’ ಯಾತ್ರೆಯೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಾದು ಹೋಯಿತು. ಜನವರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ‘ಪ್ರಜಾಧ್ವನಿ’ ಹೆಸರಿ ನಲ್ಲಿ ಬಸ್‌ ಯಾತ್ರೆ ನಡೆಸಿದರು. ಪ್ರಿಯಾಂಕ ಗಾಂಧಿ ಅವರು ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜೆಡಿಎಸ್

ವರ್ಷದ ಮೊದಲೇ ವಿಧಾನಸಭಾ ಚುನಾವಣಾ ತಯಾರಿಯನ್ನು ಜೆಡಿಎಸ್‌ ಆರಂಭಿಸಿತ್ತು. ನೀರಾವರಿ ಯೋಜನೆಗಳ ಅನುಷ್ಠಾನದ ಭರವಸೆ ನೀಡಿ ‘ಜನತಾ ಜಲಧಾರೆ’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ‘ಜನತಾ ಜಲಧಾರೆ’ ರಥಯಾತ್ರೆ 180 ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ, ಎಲ್ಲ ನದಿಗಳು ಮತ್ತು ಪ್ರಮುಖ ಜಲ ಮೂಲಗಳಿಂದ ನೀರು ಸಂಗ್ರಹಿಸಿ ಅದನ್ನು ಬೆಂಗಳೂರಿಗೆ ತರಲಾಯಿತು. ನೆಲಮಂಗಲದ ಬಳಿ ಬೃಹತ್‌ ಸಮಾವೇಶ ನಡೆಸಿ ಗಂಗಾ ಆರತಿ ಮತ್ತು ಗಂಗಾ ಪೂಜೆಯ ಮೂಲಕ ಯಾತ್ರೆ ಸಮಾರೋಪಗೊಂಡಿತ್ತು. ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ರೈತ ಸಬಲೀಕರಣ, ಯುವಕರು ಮತ್ತು ಮಹಿಳೆಯರ ಸಬಲೀಕರಣ, ಎಲ್ಲರಿಗೂ ವಸತಿ ಕಲ್ಪಿಸುವ ಕಾರ್ಯಕ್ರಮಗಳ ಜಾರಿಯ ಭರವಸೆ ನೀಡುವ ಉದ್ದೇಶದಿಂದ 100 ವಿಧಾನಸಭಾ ಕ್ಷೇತ್ರಗಳಲ್ಲಿ ‘ಪಂಚ ರತ್ನ’ ಯಾತ್ರೆ ನಡೆಯಿತು.

ಕೆಆರ್‌ಎಸ್‌ ಪಕ್ಷ

ಚುನಾವಣೆ ದೃಷ್ಟಿಯಲ್ಲಿಟ್ಟು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಫೆ. 27ರಿಂದ ‘ಕರುನಾಡ ಕಟ್ಟೋಣ’ ಸಂಕಲ್ಪ ಯಾತ್ರೆ ಬೆಂಗಳೂರಿನಿಂದ ನಡೆಸಿತು. ಸಮಿತಿ ಕಳೆದ ವರ್ಷ 45 ದಿನಗಳ ‘ಜನಚೈತ್ರ ಯಾತ್ರೆ’ ಹಮ್ಮಿಕೊಂಡಿತ್ತು. 31 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಪ್ರಸ್ತುತ ರಾಜಕೀಯ, ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ಕುರಿತು ರೆಡ್ಡಿ ಜನ ಜಾಗೃತಿ ಮೂಡಿಸಿದ್ದರು.

l ಜನಾಂದೋಲನ ಮಹಾಮೈತ್ರಿ ಸಂಘಟನೆಯು ಸಿಟಿಜನ್‌ ಫಾರ್ ಡೆಮಾಕ್ರಸಿ, ಜನತಂತ್ರ ಪ್ರಯೋಗ ಶಾಲೆ ಸಹಯೋಗದಲ್ಲಿ, ಸಂಘಟನೆಯ ಮುಖಂಡ ರಾದ ಎಸ್‌.ಆರ್‌. ಹಿರೇಮಠ, ಬಡಗಲಪುರ ನಾಗೇಂದ್ರ, ಪಿ.ಆರ್‌.ಎಸ್‌.ಮಣಿ, ಎಚ್‌.ವಿ. ದಿವಾಕರ್ ನೇತೃತ್ವದಲ್ಲಿ ಜ.2ರಿಂದ 11ರವರೆಗೆ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಹಮ್ಮಿಕೊಂಡಿತ್ತು.

l ಆಮ್‌ ಆದ್ಮಿ ಪಕ್ಷದ ನೇತಾರ ಅರವಿಂದ ಕೇಜ್ರಿವಾಲ್‌ ರಾಜ್ಯಕ್ಕೆ ಎರಡು ಬಾರಿ ಬಂದು ಸಮಾವೇಶಗಳನ್ನು ನಡೆಸಿದರು.

‘ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ ತೀರ್ಪು ಕೇಳುತ್ತೇವೆ’

ಚುನಾವಣೆ ಎದುರಿಸಲು ಬಿಜೆಪಿ ಸನ್ನದ್ಧವಾಗಿದೆ. ಬಿಜೆಪಿ ಬಲಿಷ್ಠ ಕೇಡರ್‌ ಇರುವ, ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ. ಈಗಾಗಲೇ ಹಲವಾರು ಅಭಿಯಾನ ಮಾಡಿದೆ. ನಿರಂತರವಾಗಿ ಪಕ್ಷದ ಸಂಘಟನೆ ಮಾಡಿಕೊಂಡು ಬಂದಿದ್ದು, ಬೂತ್‌ ಮಟ್ಟದ ಅಭಿಯಾನ, ಮೋರ್ಚಾಗಳ ಸಮ್ಮೇಳನ, ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ. ವಿವಿಧ ಜನಪರ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಹಲವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಲಾಗಿದೆ. ಒಳಮೀಸಲಾತಿ ಹೆಚ್ಚಳ, ಒಬಿಸಿಯಲ್ಲಿ ಬದಲಾವಣೆ ಜನಮಾನಸದಲ್ಲಿ ಪಕ್ಷ ಮತ್ತು ಸರ್ಕಾರದ ಪರವಾಗಿ ಜನತಾ ಜನಾರ್ದನರು ನಿಲ್ಲಲಿದ್ದಾರೆ. ನಮ್ಮ ಕೆಲಸಗಳ ಆಧಾರದ ಮೇಲೆ ಸಕಾರಾತ್ಮಕ ತೀರ್ಪು ಕೇಳಲಿದ್ದೇವೆ. ಜನರ ಆಶೀರ್ವಾದ ನಮ್ಮ ಪರ ಇದೆ.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಕಳೆದ ಮೂರು ತಿಂಗಳುಗಳಿಂದ ಮಾಡಿರುವ ಪ್ರವಾಸ ಸಕಾರಾತ್ಮಕ ಪರಿಣಾಮ ಬೀರಿದೆ. 2023 ರ ಮೇ 13 ರಂದು ಸ್ಪಷ್ಟವಾದ ಬಹುಮತ ಭಾರತೀಯ ಜನತಾ ಪಕ್ಷಕ್ಕೆ ಸಿಗಲಿದೆ. ಮತ್ತೆ ನಮ್ಮ ಸರ್ಕಾರ‌ 5 ವರ್ಷ ಆಡಳಿತ ಮಾಡುವುದರಲ್ಲಿ ಸಂಶಯವಿಲ್ಲ

ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

****

‘ಜನ ಸಾಮಾನ್ಯರಿಗೆ ಕಿರುಕುಳ ನೀಡಬಾರದು’

ರಾಜ್ಯ ವಿಧಾನಸಭೆಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರ ಸ್ವಾಗತಾರ್ಹ. ಚುನಾವಣಾ ವೇಳಾಪಟ್ಟಿ ಪ್ರಕಟಣೆಯನ್ನು ವಾರದಿಂದಲೂ ನಿರೀಕ್ಷಿಸಿದ್ದೆವು. ಚುನಾವಣೆಯ ಪಾವಿತ್ರ್ಯ ಕಾಪಾಡುವುದಾಗಿ ಎಲ್ಲ ರಾಜಕೀಯ ಪಕ್ಷಗಳೂ ಹೇಳುತ್ತಿವೆ. ಆದರೆ, ರಾಷ್ಟ್ರೀಯ ಪಕ್ಷಗಳು ಕುಕ್ಕರ್‌, ವಾಚು, ತವಾ ಹಂಚಿ ಚುನಾವಣಾ ಆಮಿಷ ಒಡ್ಡುತ್ತಿವೆ. ಚುನಾವಣಾಧಿಕಾರಿಗಳು ಬೃಹತ್‌ ಪ್ರಮಾಣದ ನಗದು, ವಸ್ತು ವಶಪಡಿಸಿಕೊಂಡಿದ್ದಾರೆ. ಅಂಥವರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇರುವುದೇ ಅಚ್ಚರಿ.

ಚುನಾವಣಾ ಬಂದೋಬಸ್ತ್‌ಗಾಗಿ ತೆರೆಯುವ ತನಿಖಾ ಠಾಣೆಗಳಲ್ಲಿ ಸಾಮಾನ್ಯ ಜನರಿಗೆ ಕಿರುಕುಳ ಆಗಬಾರದು. ಆಸ್ಪತ್ರೆಗೆ ಹೋಗುತ್ತಿರುವವರು, ರೈತರು ಹೊಂದಿರುವ ಹಣ ಜಪ್ತಿ ಮಾಡಬಾರದು. ನಮ್ಮ ಪಕ್ಷ ಚುನಾವಣಾ ತಯಾರಿಯ ಶೇಕಡ 50 ರಷ್ಟು ಕೆಲಸವನ್ನು ಈಗಾಗಲೇ ಮುಗಿಸಿದೆ. ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಎರಡರಿಂದ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು. ನಾನು ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ಹಾಸನ ಅಭ್ಯರ್ಥಿ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ. ಆ ಬಗ್ಗೆ ನನ್ನ ಹಿಂದಿನ ಹೇಳಿಕೆಗೆ ಬದ್ಧನಿದ್ದೇನೆ.

ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

***

‘ಕಾಂಗ್ರೆಸ್‌ ಕಟ್ಟಿ ಹಾಕಲು ಆದಾಯ ತೆರಿಗೆ ಅಧಿಕಾರಿಗಳ ನಿಯೋಜನೆ’

ಕಾಂಗ್ರೆಸ್‌ ಅನ್ನು ಕಟ್ಟಿಹಾಕುವುದಕ್ಕಾಗಿಯೇ ಹೆಚ್ಚು ಆದಾಯ ತೆರಿಗೆ ಅಧಿಕಾರಿಗಳನ್ನು ಚುನಾವಣಾ ಆಯೋಗವು ನಿಯೋಜಿಸಿದೆ. ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗೆ ₹ 25 ಕೋಟಿಯಿಂದ ₹ 50 ಕೋಟಿಯಷ್ಟು ಹಣ ಖರ್ಚು ಮಾಡಿತ್ತು. ಆಗ ಚುನಾವಣಾ ಆಯೋಗ ಏನು ಮಾಡಿತ್ತು? ಆಪರೇಷನ್‌ ಕಮಲ ಮಾಡಿದ್ದು ಯಾರು? ಇಡೀ ಚುನಾವಣಾ ವ್ಯವಸ್ಥೆಯನ್ನು ಬಿಜೆಪಿ ಭ್ರಷ್ಟಗೊಳಿಸಿದೆ. ಬಿಜೆಪಿಯೇ ಚುನಾವಣೆಯಲ್ಲಿ ಹೆಚ್ಚು ಹಣವನ್ನು ಖರ್ಚು ಮಾಡಲಿದೆ.

ಬಿಜೆ‍ಪಿಯ ಚುನಾವಣಾ ಅಕ್ರಮಗಳನ್ನು ತಡೆಯಲು ನಮ್ಮ ಕಾರ್ಯಕರ್ತರಿಗೂ ಹೇಳುತ್ತೇವೆ. ಆಯೋಗವು ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ. ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದನ್ನು ಸ್ವಾಗತಿಸುವೆ. ಕಾಂಗ್ರೆಸ್‌ ಪ್ರಚಾರ ಕಾರ್ಯಕ್ರಮಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಏ.5ರಂದು ರಾಹುಲ್‌ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ. ನಾನು ಇದುವರೆಗೆ 60 ಕ್ಷೇತ್ರ ಹಾಗೂ ಡಿ.ಕೆ.ಶಿವಕುಮಾರ್‌ 50– 60 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೇವೆ. ಪಕ್ಷದಿಂದ ಅನೇಕ ಪ್ರಚಾರ ಸಭೆಗಳನ್ನು ಮಾಡಿದ್ದು, ಚುನಾವಣೆಗೆ ಸಿದ್ಧರಾಗಿದ್ದೇವೆ.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

‘80 ದಾಟಿದವರಿಗೆ ಮನೆಯಿಂದ ಮತದಾನ ಸ್ವಾಗತಾರ್ಹ’

ವಿಧಾನಸಭಾ ಚುನಾವಣೆಯು ಮತ್ತೆ ಡಬಲ್‌ ಎಂಜಿನ್‌ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಲಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಹೆಚ್ಚು ವೇಗವಾಗಿ ಅಭಿವೃದ್ಧಿ ಕಾರ್ಯ ಸಾಧ್ಯ. ಒಂದೇ ಹಂತದಲ್ಲಿ ಚುನಾವಣೆ ನಡೆಯಲೆಂಬ ಅಪೇಕ್ಷೆ ಇತ್ತು. ಅದೇ ನಿರೀಕ್ಷೆಯಂತೆ ಚುನಾವಣೆ ನಡೆಯುತ್ತಿದೆ. ಶಾಂತಿಯುತವಾಗಿ ಮತದಾನ ಆಗಲಿ. ಗೊಂದಲ, ಗಲಭೆಯಿಂದ ಮರು ಮತದಾನ ಆಗದಿರಲಿ ಎಂಬ ಅಪೇಕ್ಷೆ ನಮ್ಮದು. 80 ವರ್ಷಕ್ಕೂ ಮೇಲ್ಪಟ್ಟ 12 ಲಕ್ಷಕ್ಕೂ ಹೆಚ್ಚು ಮತದಾರರು, ಸಾವಿರಾರು ಅಂಗವಿಕಲ ಮತದಾರರು ಮನೆಯಲ್ಲೇ ಕುಳಿತು ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿದೆ. ತಂತ್ರಜ್ಞಾನಕ್ಕೆ ಒತ್ತು ನೀಡಿದ್ದರಿಂದ ಇದು ಸಾಧ್ಯವಾಗಿದೆ.

ಬೆಂಗಳೂರು ಮಹಾನಗರದಲ್ಲಿ ಮತದಾನ ಶೇಕಡವಾರು ಕಡಿಮೆ ಆಗುವ ಕುರಿತು ಆಯೋಗ ಆತಂಕ ವ್ಯಕ್ತಪಡಿಸಿದೆ. ಇದಕ್ಕಾಗಿ ನಗರ ಮತದಾರರನ್ನು ಕರೆ ತರಲು ಮತ್ತು ಮನವೊಲಿಸಲು ವಿಶೇಷ ಪ್ರಯತ್ನದ ಅಗತ್ಯವಿದೆ. ಮಹಿಳಾ ಮತದಾರರು ಹಲವು ಕಡೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಖುಷಿಯ ಸಂಗತಿ.

ಶೋಭಾ ಕರಂದ್ಲಾಜೆ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT