ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿಯಷ್ಟೇ, ಉದ್ಯೋಗವಲ್ಲ ಎಂಬ ಧೋರಣೆ ಸರಿಯಲ್ಲ: ನಾಗಾಭರಣ

ಸಹ ಪ್ರಾಧ್ಯಾಪಕರ ನೇಮಕಾತಿಯ ಷರತ್ತು ಕೈಬಿಡಿ
Last Updated 5 ಆಗಸ್ಟ್ 2020, 23:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಕರಡು ನಿಯಮಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಓದಿರುವ ವಿಷಯವನ್ನೇ, ಪದವಿಯಲ್ಲಿಯೂ ಐಚ್ಛಿಕ ವಿಷಯವಾಗಿ ಓದಿರಬೇಕು ಎಂಬ ಷರತ್ತು ವಿಧಿಸಿರುವುದರಿಂದ ಸಾವಿರಾರು ಮಂದಿ ಅವಕಾಶ ವಂಚಿತರಾಗಬೇಕಾಗುತ್ತದೆ ಎಂದು ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

‘ಪದವಿಯಲ್ಲಿ ಕನ್ನಡವನ್ನು ಐಚ್ಛಿಕ ವಿಷಯವನ್ನಾಗಿ ಅಭ್ಯಾಸ ಮಾಡಿಲ್ಲ. ಆದರೆ, ಸಾಮಾನ್ಯ ಕನ್ನಡದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಕನ್ನಡ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದೆ. ಈವರೆಗೆ, ಪದವಿಯಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ಓದಿಲ್ಲದಿದ್ದರೂ, ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ತೆಗೆದುಕೊಂಡಿದ್ದರೆ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿತ್ತು’ ಎಂದು ಅಭ್ಯರ್ಥಿಯೊಬ್ಬರು ಹೇಳಿರು.

‘ಶಿಕ್ಷಣ ಇಲಾಖೆಯ ಈ ನಡೆಯು ಪದವಿ ನೀಡುತ್ತೇವೆ ಆದರೆ ಉದ್ಯೋಗವನ್ನಲ್ಲ ಎಂಬಂತಿದೆ. ಸರ್ಕಾರ ಕೂಡಲೇ ಈ ಷರತ್ತನ್ನು ಹಿಂಪಡೆದು, ಹೊಸ ಅಧಿಸೂಚನೆ ಹೊರಡಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಆಗ್ರಹಿಸಿದ್ದಾರೆ.

‘ಅಂತಿಮ ಕರಡು ನಿಯಮಗಳಲ್ಲಿ ಇರುವ ಈ ಷರತ್ತು, ಆರಂಭದಲ್ಲಿ ಇರಲಿಲ್ಲ. ಯಾವ ಮಾನದಂಡದ ಅಡಿಯಲ್ಲಿ ಈ ಅಂಶವನ್ನು ಸೇರಿಸಿಕೊಳ್ಳಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ರಾಜ್ಯದ ಯಾವ ವಿಶ್ವವಿದ್ಯಾಲಯಗಳು ಕೂಡ ಕನ್ನಡ ಸ್ನಾತಕೋತ್ತರ ಪದವಿಯನ್ನು ಶಿಕ್ಷಣ ಇಲಾಖೆಯ ಅಂತಿಮ ಕರಡು ನಿಯಮದಂತೆ ನೀಡುತ್ತಿಲ್ಲ. ಪದವಿ ಹಂತದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿದವರಿಗೂ ಕೂಡ ಸ್ನಾತಕೋತ್ತರ ಪದವಿಗೆ ಪ್ರವೇಶ ನೀಡುತ್ತಿವೆ’ ಎಂದು ಅವರು ಹೇಳಿದ್ದಾರೆ.

ಜನಪ್ರತಿನಿಧಿಗಳ ಖಾಸಗಿ ಆಸ್ಪತ್ರೆಗಳ 'ವಾಸ್ತವ್ಯ': ಜನರ ಟೀಕಾಪ್ರಹಾರ

‘ಹೈಕೋರ್ಟ್‌ ಆದೇಶದಂತೆ ಷರತ್ತು’

‘ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಒಂದೇ ವಿಷಯ ಓದಿದವರಿಗೆ ಅವಕಾಶ ನೀಡಬೇಕು ಎಂದು ‌ ಪ್ರಕರಣ ಒಂದರಲ್ಲಿಹೈಕೋರ್ಟ್ ಆದೇಶಿಸಿದೆ. ಅದರಂತೆ, ಈ ಷರತ್ತು ಸೇರ್ಪಡೆ ಮಾಡಲಾಗಿದೆ’ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕನ್ನಡ ಮಾತ್ರವಲ್ಲದೆ, ಎಲ್ಲ ವಿಷಯಗಳ ಪ್ರಾಧ್ಯಾಪಕರ ನೇಮಕಾತಿಗೂ ಈ ಷರತ್ತು ವಿಧಿಸಲಾಗಿದೆ. ಈಗ ಆಕ್ಷೇಪಣೆ ಬಂದಿರುವುದರಿಂದ ಮತ್ತೊಮ್ಮೆ ಪರಿಶೀಲಿಸಲಾಗುವುದು. 1,242 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಅನುಮತಿ ನೀಡುವಂತೆ ಬುಧವಾರ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದೂ ಅವರು ತಿಳಿಸಿದರು.

ಯುಜಿಸಿ ನಿಯಮಗಳ ಉಲ್ಲಂಘನೆ

‘ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ರತ್ನ ಹಾಗೂ ಪಂಡಿತ್‌ ಪರೀಕ್ಷೆಯಲ್ಲಿ ತೇರ್ಗಡೆಯಾದವರನ್ನೂ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಹೀಗಿರುವಾಗ ನೇಮಕಾತಿಗೆ ಈ ರೀತಿಯ ಹೊಸ ಷರತ್ತು ವಿಧಿಸುವುದು ಸರಿಯಲ್ಲ’ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

‘ಯುಜಿಸಿ ನಿಯಮ 3.3 ಮತ್ತು 3.4ರ ಪ್ರಕಾರ ಪದವಿ ಹಂತದಲ್ಲಿ ಅಭ್ಯಾಸ ಮಾಡಿದ ಪಠ್ಯ ವಿಷಯ ನೇಮಕಾತಿಗೆ ಮಾನದಂಡವಲ್ಲ. ಶಿಕ್ಷಣ ಇಲಾಖೆಯ ಈ ಷರತ್ತು ಯುಜಿಸಿ ನಿಯಮಗಳ ಉಲ್ಲಂಘನೆಯೂ ಹೌದು’ ಎಂದು ಅವರು ಉನ್ನತ ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT