ಶುಕ್ರವಾರ, ನವೆಂಬರ್ 27, 2020
20 °C
ಆಸ್ಟ್ರಾಜೆನೆಕಾ ಕಂಪನಿಯಿಂದ ತಯಾರಿ:

ಹೊಸವರ್ಷಕ್ಕೆ ಕೋವಿಡ್‌ ಲಸಿಕೆ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಿ ಪಡಿಸಿರುವ ಕೋವಿಡ್ ಲಸಿಕೆ 2021ರ ಆರಂಭದ ಹಂತದಲ್ಲೇ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಕೋವಿಡ್‌ ಲಸಿಕೆಯ ಲಭ್ಯತೆ ಹಾಗೂ ಬಳಕೆಯ ಸಿದ್ಧತೆಗೆ ಸಂಬಂಧಿಸಿದಂತೆ ಆಸ್ಟ್ರಾಜೆನೆಕಾ ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಗಗನ್‌ದೀಪ್ ಸಿಂಗ್ ಅವರೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

‘ಮೈಸೂರಿನ ಜೆ.ಎಸ್.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ಭಾರತದ ಹಲವೆಡೆ ಲಸಿಕೆಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಮೊದಲ ಹಂತದಲ್ಲಿ 18ರಿಂದ 55 ವರ್ಷ ವಯಸ್ಸಿನ 1,600 ಜನರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದ 28 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಪ್ರತಿರೋಧಕ ಶಕ್ತಿ ದೇಹದಲ್ಲಿ ಕಾಣಿಸಿದೆ. 56 ದಿನಗಳ ಹಿಂದಷ್ಟೆ ಮೊದಲ ಹಂತದ ಪ್ರಯೋಗ ಮುಗಿದಿದೆ’ ಎಂದು ಅವರು ವಿವರಿಸಿದರು.

‘ಮುಂದಿನ ಹಂತಗಳಲ್ಲಿ 5ರಿಂದ 12 ವರ್ಷ ವಯಸ್ಸಿನ ಮಕ್ಕಳು, 18ರಿಂದ 55 ವರ್ಷ ವಯಸ್ಸಿನವರು ಮತ್ತು 55 ವರ್ಷ ಮೇಲ್ಪಟ್ಟವರು ಹೀಗೆ ಮೂರು ವರ್ಗಗಳಾಗಿ ವಿಂಗಡಿಸಿ ಲಸಿಕೆ ನೀಡಲಾಗುತ್ತದೆ ಕೋವಿಡ್‌ ಪೀಡಿತರಿಗೂ ಪ್ರಾಯೋಗಿಕವಾಗಿ ಲಸಿಕೆ ನೀಡಲು ಕಂಪನಿ ಉದ್ದೇಶಿಸಿದೆ’ ಎಂದರು.

‘ಲಾಭದ ಉದ್ದೇಶಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸಿಲ್ಲ. ವೆಚ್ಚಕ್ಕೆ ಸರಿಸಮನಾಗಿ ದರ ನಿಗದಿಪಡಿಸಲಾಗುವುದು ಎಂಬ ಭರವಸೆಯನ್ನು ಕಂಪನಿ ನೀಡಿದೆ’ ಎಂದು ಸುಧಾಕರ್ ಹೇಳಿದರು.

‘ಆಸ್ಟ್ರಾಜೆನೆಕಾ ಕಂಪನಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ಜತೆ ಸೇರಿ ಭಾರತದಲ್ಲಿ ಲಸಿಕೆ ಉತ್ಪಾದಿಸಲಿದೆ. 100 ಕೋಟಿ ಜನರಿಗೆ ನೀಡಲು ಸಾಕಾಗುವಷ್ಟು ಲಸಿಕೆ ಉತ್ಪಾದಿಸುವ ಸಾಮರ್ಥ್ಯ ಇದೆ ಎಂದು ಕಂಪನಿ ತಿಳಿಸಿದೆ. ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿ ಕೋವ್ಯಾಕ್ಸಿನ್ ಎಂಬ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಆ ಕಂಪನಿಯ ಮುಖ್ಯಸ್ಥ ಕೃಷ್ಣ ಯಲ್ಲ ಅವರೊಂದಿಗೂ ಮಾತುಕತೆಗೆ ಸಿದ್ಧತೆ ನಡೆದಿದೆ’ ಎಂದು ಅವರು ತಿಳಿಸಿದರು.

ಉಚಿತ ಲಸಿಕೆ ನೀಡಲು ಬದ್ಧ: 'ಕೋವಿಡ್ ಪರೀಕ್ಷೆ, ಚಿಕಿತ್ಸೆ ಸೇರಿದಂತೆ ಈವರೆಗೆ ಎಲ್ಲ ವೆಚ್ಚಗಳನ್ನು ರಾಜ್ಯ ಸರ್ಕಾರ ಭರಿಸಿದೆ. ಅದೇ ರೀತಿ ಎಲ್ಲರಿಗೂ ಉಚಿತವಾಗಿ ಕೋವಿಡ್‌ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ. ಅಂತಿಮ ಹಂತದ ಬಳಕೆಗೆ ಲಸಿಕೆ ಲಭ್ಯವಾದ ಬಳಿಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಸುಧಾಕರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೇಂದ್ರ ಆರೋಗ್ಯ ಸಚಿವಾಲಯದ ಸಹಯೋಗದಲ್ಲಿ ಆರೋಗ್ಯ ತಜ್ಞರು, ತಾಂತ್ರಿಕ ಪರಿಣತರು, ಪೂರೈಕೆದಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಲಸಿಕೆಯ ಪೂರೈಕೆ, ಸಂಗ್ರಹಣೆ ಮತ್ತು ವಿತರಣೆ ಕುರಿತು ಸಮಿತಿ ಸಲಹೆ ನೀಡಲಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಮತ್ತು ನಂತರದಲ್ಲಿ ಇತರ ಕಾಯಿಲೆಗಳನ್ನು ಹೊಂದಿರುವವರು, ಗರ್ಭಿಣಿಯರು, ಬಾಣಂತಿಯರಿಗೆ ಲಸಿಕೆ ನೀಡಲಾಗುವುದು’ ಎಂದರು.

ಕೋವಿಡ್‌ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್‌ ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು