ಎಟಿಎಂ ಘಟಕದಲ್ಲಿ ಕೊಲೆ ಯತ್ನ; ಅಪರಾಧಿಗೆ 10 ವರ್ಷ ಶಿಕ್ಷೆ

ಪ್ರಜಾವಾಣಿ ವಾರ್ತೆ
ಬೆಂಗಳೂರು: ಎನ್.ಆರ್. ಚೌಕದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಜ್ಯೋತಿ ಉದಯ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದ ಪ್ರಕರಣದಡಿ ಬಂಧಿಸಲಾಗಿದ್ದ ಮಧುಕರ್ ರೆಡ್ಡಿ ಅಪರಾಧಿ ಎಂಬುದು ಸಾಬೀತಾಗಿದ್ದು, ಆತನಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
2013ರ ನವೆಂಬರ್ 19ರಂದು ಬೆಳಿಗ್ಗೆ ಜ್ಯೋತಿ ಅವರು ಹಣ ಡ್ರಾ ಮಾಡಿಕೊಳ್ಳಲು ಎಟಿಎಂ ಘಟಕಕ್ಕೆ ಬಂದಾಗ ಆರೋಪಿ ದಾಳಿ ಮಾಡಿದ್ದ. ಹಣ ನೀಡುವಂತೆ ಒತ್ತಾಯಿಸಿ ಮಚ್ಚಿನಿಂದ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಜ್ಯೋತಿ, ಮೂರು ತಿಂಗಳವರೆಗೆ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆದುಕೊಂಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು, ಆರೋಪಿ ಮಧುಕರ್ ರೆಡ್ಡಿ ಅಲಿಯಾಸ್ ಮದನ್ ರೆಡ್ಡಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 65ನೇ ಸಿಟಿ ಸಿವಿಲ್ ನ್ಯಾಯಾಲಯ, ವಾದ– ಪ್ರತಿವಾದ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮಂಗಳವಾರ ಶಿಕ್ಷೆ ಪ್ರಕಟ ಮಾಡಿದೆ.
ಅಪರಾಧಿ ಮಧುಕರ್ ರೆಡ್ಡಿ, ಈಗಾಗಲೇ ಮೂರು ವರ್ಷ ಶಿಕ್ಷೆ ಅನುಭವಿಸಿದ್ದಾನೆ. ಇನ್ನು 7 ವರ್ಷ ಮಾತ್ರ ಆತ ಶಿಕ್ಷೆ ಅನುಭವಿಸುವುದು ಬಾಕಿ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.