ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆ ನೌಕರರ ಮುಷ್ಕರ: ಚಾಲಕನ ಮೇಲೆ ಹಲ್ಲೆ, ನಾಲ್ವರ ವಿರುದ್ಧ ದೂರು

ಪ್ರಯಾಣಿಕರ ಪರದಾಟ l ಖಾಸಗಿ ವಾಹನಗಳಿಗೆ ಮೊರೆ
Last Updated 12 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದರಿಂದ ಬಹುತೇಕ ಕಡೆ ಪ್ರಯಾಣಿಕರು ಪರದಾಡಿದರು.

ದಾವಣಗೆರೆಯಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲವು ಕಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬೆಳಗಾವಿಯಲ್ಲಿ ಪ್ರತಿಭಟನೆ ಯಲ್ಲಿ ಪಾಲ್ಗೊಂಡು, ನಂತರ ಮನೆಗೆ ತೆರಳಿದ್ದ ಬಸ್‌ ಚಾಲಕರೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳದೇ ಬಸ್‌ ಚಲಾಯಿಸುತ್ತಿದ್ದ ದಾವಣಗೆರೆ ಘಟಕ 1ರ ಚಾಲಕ ಮಂಜಪ್ಪ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಹಿರಿಯ ಸಹಾಯಕ ಸೇರಿ ನಾಲ್ವರು ವಿರುದ್ಧ ದಾವಣಗೆರೆಯ ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಿರಿಯ ಸಹಾಯಕ ಓಂಕಾರಪ್ಪ, ಚಾಲಕರಾದ ಸಂತೋಷ, ಸೇವಾನಾಯ್ಕ ಹಾಗೂ ಹೊಸೂರಪ್ಪ ಹಲ್ಲೆ ಮಾಡಿ ದವರು. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇರೆಗೆ ಡಿಪೊ ಮ್ಯಾನೇಜರ್ ಎಂ.ರಾಮಚಂದ್ರಪ್ಪ ಅವರು ದೂರು ದಾಖಲಿಸಿ ದ್ದಾರೆ. ಬಳ್ಳಾರಿ ಎರಡನೇ ಡಿಪೊದ ಒಂದು ಮತ್ತು ಶಿವಮೊಗ್ಗದ ಒಂದು ಬಸ್ ಮೇಲೆ ಹೊನ್ನಾಳಿಯಲ್ಲಿ ದುಷ್ಕರ್ಮಿ ಗಳು ಕಲ್ಲೆಸೆದಿದ್ದಾರೆ. ಬಸ್‍ಗಳಿಗೆ ಹಾನಿ ಯಾಗಿದ್ದು, ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರು ಮುಷ್ಕರ ತೀವ್ರಗೊಳಿಸಿದ್ದಾರೆ. ಇದರಿಂದ ರಸ್ತೆ ಗಳಿಗೆ ಬಸ್‌ ಇಳಿಯಲಿಲ್ಲ. ಮಂಗಳೂರು ಹಾಗೂ ಉಡುಪಿಯಲ್ಲಿ ನಗರ ಸಾರಿಗೆ, ಜಿಲ್ಲೆಯ ಒಳಗಿನ ಊರುಗಳಿಗೆ ಬಸ್‌ ಸಂಚಾರ ಸಾಮಾನ್ಯವಾಗಿತ್ತು. ಆದರೆ, ಹೊರ ಜಿಲ್ಲೆಗಳಿಗೆ ಬಸ್‌ ಸಂಚಾರ ಇರಲಿಲ್ಲ. ಹೊಸಪೇಟೆಯಿಂದ ಬಳ್ಳಾರಿಗೆ ಹೊರಟಿದ್ದ ಎರಡು ಬಸ್‌ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ.

ಮಂಗಳೂರು ವಿಭಾಗದಿಂದ ಶೇ 95 ರಷ್ಟು ಬಸ್‌ಗಳು ಕಾರ್ಯಾಚರಣೆ ನಡೆಸಿವೆ ಎಂದು ವಿಭಾಗೀಯ ನಿಯಂತ್ರ ಣಾಧಿಕಾರಿ ಅರುಣ್‌ ತಿಳಿಸಿದ್ದಾರೆ. ಮುಷ್ಕರದ ಪರಿಣಾಮ ಪುತ್ತೂರು ಕೆಎಎಸ್‌ಆರ್‌ಟಿಸಿ ವಿಭಾಗದ 450 ಮಾರ್ಗಸೂಚಿಗಳಲ್ಲಿ ಬಸ್‌ ಓಡಾಟ ಸ್ಥಗಿತಗೊಂಡಿದೆ. ವಿಭಾಗಕ್ಕೆ ನಿತ್ಯ 45 ಲಕ್ಷ ನಷ್ಟ ಸಂಭವಿಸುತ್ತದೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಎರಡನೇ ಶನಿವಾರ ಹಾಗೂ ಲಕ್ಷದೀಪೋತ್ಸವಕ್ಕಾಗಿ ಅನೇಕ ಕಡೆಯಿಂದ ಧರ್ಮಸ್ಥಳಕ್ಕೆ ಬಂದಿದ್ದ ಜನರು, ಬಸ್‌ ಗಳಿಲ್ಲದೇ ತೊಂದರೆ ಅನುಭವಿಸುವಂತಾಯಿತು.

ಚಿಕ್ಕಮಗಳೂರಿನಲ್ಲಿ ಸಾರಿಗೆ ನೌಕರರ ಮುಷ್ಕರ ತೀವ್ರವಾಗಿದ್ದು, ಬಸ್‌ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವಂತಾಯಿತು.

ಖಾಸಗಿ ವಾಹನಗಳಿಗೆ ಮೊರೆ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದಿದ್ದರಿಂದ ಬಹುತೇಕ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು.

ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ತೆರಳಬೇಕಾದ ಪ್ರಯಾಣಿಕರಿಗಾಗಿ ಮಾತ್ರ ಕಲಬುರ್ಗಿ–ಬೀದರ್‌ ಮಧ್ಯೆ 49 ಬಸ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

‘ಈಶಾನ್ಯ ಕರ್ನಾಟಕ ಸಾರಿಗೆ ವ್ಯಾಪ್ತಿಯ ಕಲಬುರ್ಗಿ, ಬೀದರ್‌, ಯಾದ ಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 3,800 ಬಸ್‌ಗಳು ಸಂಚರಿಸಲಿಲ್ಲ. ಇದರಿಂದ ಸಂಸ್ಥೆಗೆ ₹ 4.15 ಕೋಟಿ ನಷ್ಟವಾಗಿದೆ’ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

ಪೊಲೀಸ್‌ ಬೆಂಗಾವಲು ವಾಹನ ದೊಂದಿಗೆ ಬಸ್ ಸಂಚಾರ: ಮೈಸೂರಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ ನಿಲ್ದಾಣದಿಂದ ಪೊಲೀಸ್ ಬೆಂಗಾವಲು ವಾಹನದ ರಕ್ಷಣೆ ಯೊಂದಿಗೆ, ಬೆಂಗಳೂರಿಗೆ ಶನಿವಾರ ಬಸ್ ಸಂಚಾರ ಆರಂಭಿಸಲಾಯಿತು. ಆದರೆ, ಉಳಿದ ಬೇರೆ ಯಾವ ಊರುಗಳಿಗೂ ಬಸ್‌ ಹೊರಡಲಿಲ್ಲ.

‘ಸಾಕಷ್ಟು ಮಂದಿ ಚಾಲಕರು ಮತ್ತು ನಿರ್ವಾಹಕರಿಗೆ ಮನವಿ ಮಾಡಿ ಕೊಂಡೆವು. ಈ ಪೈಕಿ 8 ಮಂದಿ ಒಪ್ಪಿ ಕೆಲಸಕ್ಕೆ ಬಂದಿದ್ದು ಸೂಕ್ತ ಭದ್ರತೆ ಒದಗಿ ಸುವಂತೆ ಕೋರಿದ್ದಾರೆ. ಪ್ರತಿ ಬಸ್‌ನಲ್ಲಿ ಒಬ್ಬರು ಪೊಲೀಸರು ಇದ್ದು, ಪೊಲೀಸ್ ಬೆಂಗಾವಲು ವಾಹನದೊಂದಿಗೆ 4 ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಇನ್ನಷ್ಟು ಸಿಬ್ಬಂದಿ ಕೆಲಸಕ್ಕೆ ಬಂದರೆ ಭದ್ರತೆ ನೀಡಿ ಸಂಚಾರ ಆರಂಭಿಸಲಾ ಗುವುದು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿದರು.

ಕೊಡಗು, ಹಾಸನ, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲೂ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ.

ಔರಾದ್ ಘಟಕದ ಚಾಲಕ ಸಾವು

ಔರಾದ್ (ಬೀದರ್‌ ಜಿಲ್ಲೆ): ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಲ್ಲಿನ ಘಟಕದ ಚಾಲಕ ಮಕಬೂಲ್‌ (44) ಕರ್ತವ್ಯದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

‘ಸಾರಿಗೆ ನೌಕರರ ಮುಷ್ಕರ ಇದ್ದರೂ ಶನಿವಾರ ಬೆಳಿಗ್ಗೆ ನಾಂದೇಡ್‌ಗೆ ಹೋಗುವಾಗ ದೇಗಲೂರ ಬಳಿ ಬಸ್ ನಿಲ್ಲಿಸಿದ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮುಷ್ಕರ ಇದ್ದರೂ ಇವರನ್ನು ಬಲವಂತದಿಂದ ಸೇವೆಗೆ ಕಳುಹಿಸಲಾಗಿತ್ತು’ ಎಂದು ನೌಕರರ ಸಂಘದವರು ದೂರಿದ್ದಾರೆ.

ಸಾರಿಗೆ ನೌಕರರ ಪರ ಕಾಂಗ್ರೆಸ್ : ಡಿಕೆಶಿ

ಬೆಂಗಳೂರು: ‘ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಸಾರಿಗೆ ನೌಕರರ ಪರ ಕಾಂಗ್ರೆಸ್ ನಿಲ್ಲಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬನಶಂಕರಿ ಬಸ್ ನಿಲ್ದಾಣಕ್ಕೆ ತೆರಳಿ ಮುಷ್ಕರ ನಿರತರ ಅಹವಾಲು ಆಲಿಸಿದ ಅವರು, ‘ನಮ್ಮ ಪಕ್ಷ ನಿಮ್ಮ ಪರವಾಗಿದೆ’ ಎಂದು ನೌಕರರಿಗೆ ಭರವಸೆ ನೀಡಿದರು. ‘ಸಿ.ಎಂ ತಕ್ಷಣ ನೌಕರರ ಜತೆ ಚರ್ಚೆ ನಡೆಸಬೇಕು’ ಎಂದೂ ಆಗ್ರಹಿಸಿದರು.

‘ನಿಮ್ಮ ಹೋರಾಟ, ನೋವಿನಲ್ಲಿ ಕಾಂಗ್ರೆಸ್ ಜತೆಗಿದೆ. ನಿಮ್ಮ ಪ್ರತಿನಿಧಿಗಳು ನಮ್ಮ ಕಚೇರಿಗೆ ಬರಲಿ. ನಿಮ್ಮ ಹೋರಾಟಕ್ಕೆ ಹೇಗೆ ಕೈಜೋಡಿಸಬೇಕು ಎಂದು ಚರ್ಚಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಸಾರಿಗೆ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಇಬ್ಬರನ್ನು ನೇಮಿಸುತ್ತೇವೆ’ ಎಂದೂ ಶಿವಕುಮಾರ್‌ ಮಾತು ಕೊಟ್ಟರು.

‘ಸಾರಿಗೆ ಸಚಿವರು ಹಾಗೂ ಬೇರೆ ಸಚಿವರು ಕೂಡ ನಿಮ್ಮ ನೋವು ಆಲಿಸಲು ಬಂದಿಲ್ಲ. ಹೀಗಾಗಿ, ಸಾರಿಗೆ ಇಲಾಖೆಗೆ ಸಂಬಂಧಿಸಿದ ಈ ಪ್ರತಿಭಟನೆನಿರತ ನೌಕರರ ಒಕ್ಕೂಟದ ಪ್ರತಿನಿಧಿಗಳ ಜತೆ ಮುಖ್ಯಮಂತ್ರಿ ಮಾತನಾಡಿ, ಸಮಸ್ಯೆ ಬಗೆಹರಿಸಬೇಕು’ ಎಂದೂ ಒತ್ತಾಯಿಸಿದರು.

ಸಾರಿಗೆ ನೌಕರರ ವಿರುದ್ಧ ಎಸ್ಮಾ ಜಾರಿ ಇಲ್ಲ– ಬೊಮ್ಮಾಯಿ

ಬೆಂಗಳೂರು: ‘ಮುಷ್ಕರ ನಿರತ ಸಾರಿಗೆ ನೌಕರರ ವಿರುದ್ಧ ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿಯ ಪರಿಸ್ಥಿತಿ ಇನ್ನೂ ಬಂದಿಲ್ಲ. ಸದ್ಯಕ್ಕೆ ಎಸ್ಮಾ ಜಾರಿ ಇಲ್ಲ. ಸಾರಿಗೆ ನೌಕರರಿಗೂ ಜನರ ಕಷ್ಟ ಗೊತ್ತಾಗಿದೆ. ಸಮಸ್ಯೆಯು ಬಗೆಹರಿಯುವ ವಿಶ್ವಾಸ ಇದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನೌಕರರ ಬೇಡಿಕೆಗಳ ಬಗ್ಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ’ ಎಂದರು.

‘ನೌಕರರ ಬೇಡಿಕೆಗಳ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮೊದಲ ಹಂತವಾಗಿ ಅಧಿಕಾರಿಗಳ ಜೊತೆ ಶುಕ್ರವಾರ ಮಾತನಾಡಿದ್ದರು. ಎರಡನೇ ಹಂತವಾಗಿ ಯೂನಿಯನ್ ನಾಯಕರ ಜೊತೆ ಚರ್ಚೆ ಮಾಡಿದ್ದರು. ಬಳಿಕ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದರು. ಶನಿವಾರ ಬೆಳಗ್ಗಿನಿಂದ ನಿರಂತರವಾಗಿ ಈ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯಮಂತ್ರಿ ಸಲಹೆ ಸೂಚನೆಯಂತೆ ನೌಕರರ ಸಂಘಟನೆಗಳ ಜೊತೆ ಭಾನುವಾರ ಸಭೆ ನಡೆಸಲಿದ್ದಾರೆ’ ಎಂದರು.

‘ಸಾರಿಗೆ ನೌಕರರ ವಿಷಯದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ. ಅವರಿಗೆ ಕೊರೊನಾದಂಥ ನಷ್ಟದ ಸಂದರ್ಭದಲ್ಲಿಯೂ ಎಲ್ಲ ರೀತಿಯ ಸಹಕಾರ ಮಾಡಿದೆ. ಮುಂದೆ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಗಮನ ಹರಿಸಲಾಗುವುದು. ಮುಷ್ಕರವನ್ನು ಮುಖ್ಯಮಂತ್ರಿ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT