ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಸಭಾಪತಿ ವಿಚಾರದ ಬಗ್ಗೆ ಚರ್ಚಿಸಿ, ಸೂಕ್ತ ತೀರ್ಮಾನ: ಬಿಎಸ್‌ವೈ

ಸಭಾಪತಿ ರಾಜೀನಾಮೆ ಇಂಗಿತ: ಕಾದು ನೋಡಲು ‘ಕೈ’ ನಾಯಕರ ಸಲಹೆ
Last Updated 16 ಡಿಸೆಂಬರ್ 2020, 7:39 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ತಮ್ಮ ಮೇಲೆ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿದ ಮತ್ತು ಜೆಡಿಎಸ್‌ ಕೂಡಾ ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರೂ, ಸದ್ಯಕ್ಕೆ ರಾಜೀನಾಮೆ ನೀಡದಂತೆ ಕಾಂಗ್ರೆಸ್‌ನ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ಸಭಾಪತಿ ವಿಚಾರದಲ್ಲಿ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕಾನೂನು ಸಚಿವರು ಮತ್ತು ಇತರ ಎಲ್ಲರ ಜೊತೆ ಚರ್ಚಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಮಂಗಳವಾರ ಪರಿಷತ್‌ನಲ್ಲಿ ನಡೆದ ಘಟನೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಈ ಬಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಅವರು ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದೊಮ್ಮೆ ಕಲಾಪ ನಡೆಸುವಂತೆ ರಾಜ್ಯಪಾಲರು ಸೂಚನೆ ನೀಡಿದರೆ ರಾಜೀನಾಮೆ ನೀಡಲು ಸಭಾಪತಿ ಮನಸ್ಸು ಮಾಡಿದ್ದಾರೆ ಎಂದು ಗೊತ್ತಾಗಿದೆ.

ಆದರೆ, ‘ಸದ್ಯಕ್ಕೆ ರಾಜೀನಾಮೆ ನೀಡಬೇಡಿ. ರಾಜ್ಯಪಾಲರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡೋಣ. ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾದರೆ ನಾವೂ ಅದೇ ದಾರಿಯಲ್ಲಿ ಮುಂದೆ ಹೋಗುವ ಬಗ್ಗೆ ಯೋಚಿಸೋಣ’ ಎಂದು ಕಾಂಗ್ರೆಸ್‌ ನಾಯಕರು ಸಭಾಪತಿಯವರಿಗೆ ಸಲಹೆ ನೀಡಿದ್ದಾರೆ ಎಂದೂ ಹೇಳಲಾಗಿದೆ.

‘ಈ ವಿಷಯವನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವುದು ಬೇಡ. ಬಿಜೆಪಿ ಮತ್ತು ಜೆಡಿಎಸ್‌ ಈ ವಿಷಯದಲ್ಲಿ ಒಂದಾಗಿವೆ. ಜೆಡಿಎಸ್‌ನ ಈ ದ್ವಂದ್ವ ನಿಲುವು ಮತ್ತು ಜೆಡಿಎಸ್‌ನ ಕೋಮವಾದಿ ನಿಲುವು ಬಹಿರಂಗವಾಗಲಿ’ ಎಂದೂ ಕಾಂಗ್ರೆಸ್‌ ನಾಯಕರು ಬಯಸಿದ್ದಾರೆ‌ ಎನ್ನಲಾಗಿದೆ.

‘ಕಾಂಗ್ರೆಸ್‌ ಪಕ್ಷವನ್ನು ಕೆಟ್ಟದಾಗಿ ಬಿಂಬಿಸಲು ಯತ್ನ ನಡೆಯಿತು. ಬಿಜೆಪಿ– ಜೆಡಿಎಸ್‌ ಮಾಡಿರುವವ ಪ್ಲ್ಯಾನ್‌ ಇದು. ಬಿಜೆಪಿಯವರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡರು. ಪರಿಷತ್‌ನಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ನಮ್ಮ ಪಕ್ಷದ ನಾರಾಯಣಸ್ವಾಮಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಆಗಿ ಗೆದ್ದಿದ್ದಾರೆ. ನಾವೆಲ್ಲರೂ ಅವರ ಪರವಾಗಿ ಇದ್ದೇವೆ’ ಎಂದು ಪರಿಷತ್ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT