ಬಿಎಸ್‌ವೈ ಅವಧಿಯಲ್ಲೇ ಒಕ್ಕಲಿಗರ ನಿಗಮ: ಅಶೋಕ

ಮೈಸೂರು: ‘ಒಕ್ಕಲಿಗರ ಅಭಿವೃದ್ಧಿ ನಿಗಮ ರಚನೆ ವಿಚಾರವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ನಿಗಮ ರಚಿಸಬೇಕೆಂಬುದು ನನ್ನ ಅಭಿಪ್ರಾಯ ಕೂಡ. ಯಡಿಯೂರಪ್ಪ ಅವಧಿಯಲ್ಲೇ ಈ ಪ್ರಕ್ರಿಯೆ ನಡೆಯಲಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ ಸೋಮವಾರ ಇಲ್ಲಿ ಭರವಸೆ ನೀಡಿದರು.
‘ಒಕ್ಕಲಿಗರ ನಿಗಮ ರಚಿಸಬೇಕೆಂದು ಸಮುದಾಯದ ಮುಖಂಡರು, ಸಾಹಿತಿಗಳು ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನಾಲ್ಕು ಬಾರಿ ದೂರವಾಣಿ ಕರೆ ಮಾಡಿದ್ದಾರೆ. ಈ ವಿಚಾರವನ್ನು ಮುಖ್ಯಮಂತ್ರಿಗೆ ತಲುಪಿಸಿದ್ದೇನೆ’ ಎಂದು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿದೆಯೆಲ್ಲಾ ಎಂಬ ಪ್ರಶ್ನೆಗೆ, ‘ಯಡಿಯೂರಪ್ಪ ಈಗಾ ಗಲೇ ಮುಖ್ಯಮಂತ್ರಿ ಆಗಿದ್ದಾರೆ. ಕೇಂದ್ರದ ನಾಯಕರು ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇನ್ನೂ ಎರಡೂವರೆ ವರ್ಷ ಅವರೇ ಮುಖ್ಯಮಂತ್ರಿ ಆಗಿರಬೇಕು. ಪ್ರವಾಹ, ಕೋವಿಡ್ ಸಂದರ್ಭದಲ್ಲಿ ಯುವಕ ರನ್ನೂ ನಾಚಿಸುವಂತೆ ಓಡಾಡಿದ್ದಾರೆ. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನೆಯಲ್ಲೇ ಕುಳಿತಿ ದ್ದರು. ಯಡಿಯೂರಪ್ಪ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ, ಅವರನ್ನು ಬದಲಾಯಿಸಬಾರದು’ ಎಂದರು.
ಸಚಿವ ಸಂಪುಟ ವಿಸ್ತರಣೆ ಕುರಿತು, ‘ಬಿಜೆಪಿ ಸರ್ಕಾರ ರಚನೆಗಾಗಿ ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ನೀಡುವುದು ನಮ್ಮ ಕರ್ತವ್ಯ. ಅದನ್ನು ಖಂಡಿತ ನೆರವೇರಿಸುತ್ತೇವೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆ, ಉಪಚುನಾವಣೆ ನಡೆಯಲಿದ್ದು, ಕೇಂದ್ರದ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಅವರ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.