ಬುಧವಾರ, ಜೂನ್ 23, 2021
29 °C
ಬಹು ವರ್ಷಗಳ ಬೇಡಿಕೆ ಈಡೇರಿಕೆ: ಸೇತುವೆ, ರಸ್ತೆ ಕಾಮಗಾರಿಗೆ ಭೂಮಿ ಪೂಜೆ

ಮೈಸೂರು: ಕಪಿಲೆಗೆ ಬಾಗಿನ ಅರ್ಪಿಸಿದ ಬಿಎಸ್‌ವೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀಚನಹಳ್ಳಿ (ಮೈಸೂರು): ಮೈದುಂಬಿ ಹರಿಯುತ್ತಿರುವ ಕಪಿಲೆಗೆ, ಇಲ್ಲಿನ ಕಬಿನಿ ಜಲಾಶಯದಲ್ಲಿ ಶುಕ್ರವಾರ ಮಧ್ಯಾಹ್ನ 1.04ಕ್ಕೆ ಅಭಿಜಿನ್ ಮುಹೂರ್ತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿದರು.

ಬಾಗಿನ ಅರ್ಪಣೆಗಾಗಿಯೇ ಜಲಾಶಯದಲ್ಲಿ ಗರಿಷ್ಠ ಮಟ್ಟದವರೆಗೂ (2284 ಅಡಿ) ನೀರನ್ನು ಸಂಗ್ರಹಿಸಲಾಗಿತ್ತು. ಒಳ ಹರಿವು 3.5 ಸಾವಿರ ಕ್ಯುಸೆಕ್‌ ಇದ್ದರೆ, ಹೊರ ಹರಿವು ಸಹ 3.5 ಸಾವಿರ ಕ್ಯುಸೆಕ್‌ ಇತ್ತು.

ಶಾಸಕರಾದ ಸಿ.ಅನಿಲ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮುಖ್ಯಮಂತ್ರಿಗೆ ಸಾಥ್ ನೀಡಿದರು.

ರವಿರಾಮೇಶ್ವರ ದೇಗುಲದ ಪ್ರಧಾನ ಅರ್ಚಕ ಕೆ.ವಿ.ಭಾಸ್ಕರ್‌ ನೇತೃತ್ವದಲ್ಲಿ ವಿಶೇಷ ಪೂಜೆ ನಡೆದವು. ಮುಖ್ಯಮಂತ್ರಿ ಬರುವ ಮುನ್ನವೇ ಗಣಪತಿ ಪೂಜೆ, ಗಂಗಾ ಪೂಜೆ ನೆರವೇರಿಸಲಾಗಿತ್ತು. 21 ಜೊತೆ ಬಾಗಿನದ ಮೊರ ಪೂಜಿಸಲಾಗಿತ್ತು. ಯಡಿಯೂರಪ್ಪ, ಸಚಿವರು ಬಾಗಿನ ಸಲ್ಲಿಸಿದ ಬಳಿಕ, ಜಿಲ್ಲಾಡಳಿತದ ಅಧಿಕಾರಿಗಳು, ಜಲಾಶಯದ ಅಧಿಕಾರಿಗಳು ಕಪಿಲೆಗೆ ಬಾಗಿನ ನೀಡಿ ಗೌರವ ನಮನ ಸಲ್ಲಿಸಿದರು.

ಬಾಗಿನ ಅರ್ಪಣೆ ಬಳಿಕ ಯಡಿಯೂರಪ್ಪ ಜಲಾಶಯದ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿದರು. ಇದೇ ಸಂದರ್ಭ ಮಾತನಾಡಿದ ಅವರು, ‘ಕಬಿನಿ ಜಲಾಶಯವು ನಿರ್ಮಾಣವಾದಾಗಿನಿಂದ 29 ಬಾರಿ ತುಂಬಿದೆ. 3 ವರ್ಷದಿಂದ ಸತತವಾಗಿ ಭರ್ತಿಯಾಗುತ್ತಿರುವುದು ಸಂತೋಷದ ವಿಚಾರ’ ಎಂದು ಹೇಳಿದರು.

ಭೂಮಿ ಪೂಜೆ: ಕಬಿನಿ ಜಲಾಶಯದ ಕೆಳ ಭಾಗದಲ್ಲಿನ ಮೇಲ್ಮಟ್ಟದ ಸೇತುವೆ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ (₹ 50.30 ಕೋಟಿ ವೆಚ್ಚದ) ಕಾಮಗಾರಿಗೆ ಮುಖ್ಯಮಂತ್ರಿ ಇದೇ ಸಂದರ್ಭ ಶಂಕುಸ್ಥಾಪನೆ ನೆರವೇರಿಸಿದರು. ಇದು ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಾಗಿತ್ತು.

‘ರಾಜ್ಯದ ನೀರಾವರಿ ಕ್ಷೇತ್ರದ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದ್ದು, ನೀರಾವರಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇದರಂತೆ ಈವರೆಗೆ ನಮ್ಮ ಸರ್ಕಾರ ₹ 7,400 ಕೋಟಿ ವೆಚ್ಚದ 28 ವಿವಿಧ ಯೋಜನೆಗಳ ಮಂಜೂರಾತಿಗೆ ಅನುಮೋದನೆ ನೀಡಿದ್ದು, ಕಾಮಗಾರಿ ವಿವಿಧ ಹಂತದಲ್ಲಿವೆ’ ಎಂದು ಯಡಿಯೂರಪ್ಪ ಹೇಳಿದರು.

‘ನಮ್ಮ ಸರ್ಕಾರವು ನೀರು ವ್ಯರ್ಥವಾಗದಂತೆ ತಡೆಯಲು ಜಲಾಶಯಗಳ ಕಾಲುವೆಗಳ ಆಧುನೀಕರಣ ಸೇರಿದಂತೆ, ಏತ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಕೈಗೊಂಡಿದೆ. ಈಗಿನ ಆರ್ಥಿಕ ಇತಿಮಿತಿಯಲ್ಲಿಯೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದೆ’ ಎಂದು ತಿಳಿಸಿದರು.

ಪ್ರತಿಭಟನನಿರತರ ಬಂಧನ: ಬಿಡುಗಡೆ

ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಕ್ಷೇತ್ರದ ಖಾಸಗೀಕರಣ, ಕಾರ್ಮಿಕ ಕಾನೂನು ತಿದ್ದುಪಡಿ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ವಿರೋಧಿಸಿ ಜನಾಂದೋಲನ ಮಹಾಮೈತ್ರಿಯಿಂದ ವಿವಿಧ ಸಂಘಟನೆಗಳು ಕಬಿನಿ ಜಲಾಶಯ ಸನಿಹದ ಶಿರಮನಹಳ್ಳಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟಿಸಿದವು.

ಮುಖ್ಯಮಂತ್ರಿಗೆ ಕಪ್ಪುಬಾವುಟ ಪ್ರದರ್ಶಿಸಲು ಜಲಾಶಯದ ಬಳಿ ತೆರಳಲು ಅವಕಾಶ ನೀಡದ ಪೊಲೀಸರ ವಿರುದ್ಧ ಪ್ರತಿಭಟನನಿರತರು ಆಕ್ರೋಶ ವ್ಯಕ್ತಪಡಿಸಿದರು. ಮಾತಿನ ಜಟಾಪಟಿಯನ್ನು ನಡೆಸಿದರು.

ಪೊಲೀಸರ ಭದ್ರಕೋಟೆ ಭೇದಿಸಲು ಮುಂದಾದ ಪ್ರತಿಭನಕಾರರನ್ನು ಬಂಧಿಸಿದ ಪೊಲೀಸರು ಅಂತರಸಂತೆ ಪೊಲೀಸ್‌ ಠಾಣೆಗೆ ಕರೆದೊಯ್ದರು. ಮುಖ್ಯಮಂತ್ರಿ ಕಬಿನಿ ಜಲಾಶಯದಿಂದ ತೆರಳಿದ ಬಳಿಕ ಬಂಧಿತರನ್ನು ಬಿಡುಗಡೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು