ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಎ ಮೀಸಲು ಪೂರ್ಣ ಕೊಡಿ: ಬಲಿಜ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ

ಕರ್ನಾಟಕ ಪ್ರದೇಶ ಬಲಿಜ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ
Last Updated 27 ಜನವರಿ 2023, 22:11 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ಣ ಪ್ರಮಾಣದಲ್ಲಿ 2‘ಎ’ ಮೀಸಲಾತಿ ವಾಪಸ್‌ ನೀಡಲು ಆಗ್ರಹಿಸಿ ಕರ್ನಾಟಕ ಪ್ರದೇಶ ಬಲಿಜ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ಹಾಗೂ ಬಲಿಜ ಸಂಕಲ್ಪ ಸಭೆ ನಡೆಯಿತು.

ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು, ಸ್ವಾತಂತ್ರ್ಯ ಉದ್ಯಾನದಲ್ಲಿ ಜಮಾಯಿಸಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದರು.

‘ಬಲಿಜ ಸಮುದಾಯದವರು ಹಿಂದುಳಿದಿದ್ದಾರೆ. ರಸ್ತೆ ಬದಿ, ದೇವಸ್ಥಾನಗಳ ಎದುರು ವ್ಯಾಪಾರ ನಡೆಸಿ ಬದುಕು ಸಾಗಿಸುತ್ತಿದ್ದಾರೆ. ಅವರ ಮಕ್ಕಳ ಭವಿಷ್ಯಕ್ಕೆ ಮೀಸಲಾತಿ ಅಗತ್ಯ’ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

‘ಬಲಿಜರಿಗೆ ಹಲವು ದಶಕಗಳಿಂದ ಶಿಕ್ಷಣ ಹಾಗೂ ಉದ್ಯೋಗಕ್ಕೆ 2‘ಎ’ ಮೀಸಲಾತಿ ಸೌಲಭ್ಯ ನೀಡಲಾಗಿತ್ತು. ಆದರೆ, 1994ರ ಸೆ.17ರಂದು ಯಾವುದೇ ಆಯೋಗದ ಶಿಫಾರಸು ಹಾಗೂ ಕಾರಣವಿಲ್ಲದೇ 3‘ಎ’ಗೆ ವರ್ಗಾಯಿಸುವ ಮೂಲಕ ಅನ್ಯಾಯ ಎಸಗಲಾಯಿತು’ ಎಂದು ಆಕ್ರೋಶ ಹೊರಹಾಕಿದರು.

‘ನಿರಂತರ ಹೋರಾಟದ ಫಲವಾಗಿ 2011ರ ಜುಲೈ 16ರಂದು ಕೇವಲ ಶಿಕ್ಷಣದ ಸೌಲಭ್ಯಕ್ಕಾಗಿ 2‘ಎ’ ಮೀಸಲಾತಿ ನೀಡಲಾಗಿದೆ. ಉದ್ಯೋಗದ ವಿಷಯದಲ್ಲಿ 3‘ಎ’ ಪಟ್ಟಿಯಲ್ಲೇ ಉಳಿಸಲಾಗಿದೆ’ ಎಂದು ದೂರಿದರು.

‘ನಮ್ಮಿಂದ ಕಸಿದುಕೊಂಡಿರುವ ಸೌಲಭ್ಯವನ್ನಷ್ಟೇ ನಾವು ವಾಪಸ್ ಕೇಳುತ್ತಿದ್ದೇವೆ. ದೊಡ್ಡ ಸಮುದಾಯಗಳ ನಾಯಕ
ರಿಗೆ ಅಧಿಕಾರ ಸಿಕ್ಕಾಗ ಚಿಕ್ಕ–ಪುಟ್ಟ ಸಮುದಾಯಗಳಿಗೆ ನ್ಯಾಯ ನೀಡಿ ಸಮಾನವಾಗಿ ಕರೆದೊಯ್ಯುವುದೇ ಧರ್ಮ. ಆ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಎಂ.ಎಸ್.ರಾಮಯ್ಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಆರ್‌.ಜಯರಾಮ್‌ ಒತ್ತಾಯಿಸಿದರು.

ಚಿಕ್ಕಪೇಟೆಯಲ್ಲಿರುವ ಬಲಿಜ ಸಮಾಜದ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ಗಳೂ ಪ್ರತಿಭಟನೆಯಲ್ಲಿ ಹಾಜರಿದ್ದು ಹೋರಾಟಕ್ಕೆ ಬೆಂಬಲ ನೀಡಿದರು.

ಕಾಂಗ್ರೆಸ್‌ ಮುಖಂಡ ಎಂ.ಆರ್‌.ಸೀತಾರಾಂ, ಎನ್‌.ಸಂಪ‍ಂಗಿ, ಮಾಜಿ ಮೇಯರ್‌ ಪದ್ಮಾವತಿ, ಮಂಜುಳಾ ನಾಯ್ಡು, ಸಂಘದ ಅಧ್ಯಕ್ಷ ಪೆರಿಕಲ್‌ ಎಂ.ಸುಂದರ್‌, ಪ್ರಧಾನ ಕಾರ್ಯದರ್ಶಿ ಸಿ.ಕೆ.ಜಗದೀಶ್‌, ಸಮಗ್ರ ಬಲಿಜ ವೇದಿಕೆ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಜರಿದ್ದರು.

‘15 ದಿನದಲ್ಲಿ ಸಿ.ಎಂ ಸಮ್ಮುಖದಲ್ಲಿ ಸಭೆ’

‘2ಎ ಮೀಸಲಾತಿ ವಾಪಸ್ ಕೊಡಿಸುವ ಸಂಬಂಧ 15ರಿಂದ 20 ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಬಲಿಜ ಸಮುದಾಯದ ಮುಖಂಡರ ಸಭೆ ಕರೆಯಲು ನಾನೇ ನೇತೃತ್ವ ವಹಿಸುತ್ತೇನೆ’ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಸಮಾಜ ಕಲ್ಯಾಣ ಸಚಿವರು ಕೂಡ ಈ ವಿಷಯದಲ್ಲಿ ಮುಖಂಡರೊಂದಿಗೆ ಮಾತನಾಡಿದ್ದಾರೆ. ಮುಖ್ಯಮಂತ್ರಿ ಅವರಿಗೆ ವಿಷಯ ಮನವರಿಕೆ ಮಾಡುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ‘ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಏನೂ ಇಲ್ಲ. ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಈ ವಿಷಯ ಸೇರ್ಪಡೆ ಮಾಡಲಾಗುವುದು’ ಎಂದು ತಿಳಿಸಿದರು. ಶಾಸಕರಾದ ರಮೇಶ್‌ಕುಮಾರ್‌, ದಿನೇಶ್‌ ಗುಂಡೂರಾವ್ ಕೂಡ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT