ಶುಕ್ರವಾರ, ಏಪ್ರಿಲ್ 16, 2021
23 °C
ಅರ್ಚಕರಿಂದ ನೆರವೇರಿದ ಪೂಜಾ ವಿಧಿ–ವಿಧಾನ

ಕೋವಿಡ್ ಕಾರಣದಿಂದ ಜಾತ್ರೆ ರದ್ದು: ಭಕ್ತರಿಲ್ಲದೇ ಬಣಗುಟ್ಟಿದ ಬನಶಂಕರಿ ಪರಿಸರ

ಎಸ್.ಎಂ.ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಬನಶಂಕರಿ (ಬಾದಾಮಿ): ಬನದ ಹುಣ್ಣಿಮೆ ದಿನ ರಥೋತ್ಸವದ ಕಾರಣ ಭಕ್ತ ಸಾಗರದ ಪ್ರವಾಹದಲ್ಲಿ ಮಿಂದೇಳಬೇಕಿದ್ದ ಉತ್ತರ ಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರ ಬನಶಂಕರಿ ಕೋವಿಡ್ ಸಂಕಷ್ಟದ ಕಾರಣ ಗುರುವಾರ ಜನರಿಲ್ಲದೇ ಬಿಕೊ ಎನ್ನುತ್ತಿತ್ತು.

ಶಕ್ತಿ ದೇವತೆಯ ಜಾತ್ರೆ ಅಂಗವಾಗಿ ದೇವಾಲಯದ ಅರ್ಚಕರು ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಮಾತ್ರ ಕೈಗೊಂಡರು.

ಕೋವಿಡ್ ಕಾರಣದಿಂದ ಜಿಲ್ಲಾಡಳಿತವು ಜಾತ್ರೆಯನ್ನು ರದ್ದು ಮಾಡಿತ್ತು. ಭಕ್ತರಿಗೆ ಜ.31ರ ವರೆಗೆ ದೇವಾಲಯಕ್ಕೆ ಪ್ರವೇಶ ನಿಷೇಧ ಮಾಡಿದ್ದ ಕಾರಣ ಪೊಲೀಸ್ ಸಿಬ್ಬಂದಿ ವಿಶೇಷ ಬಂದೋಬಸ್ತ್ ಕೈಗೊಂಡಿದ್ದರು.

ದೇವಿಯ ಉತ್ಸವ ಮೂರ್ತಿಯನ್ನು ವಾದ್ಯ ವೈಭವದೊಂದಿಗೆ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ರಥದ ಸಮೀಪ ಆರಾಧಿಸಿ ಅರ್ಚಕರು ರಥಾಂಗ ಹೋಮ ಕೈಗೊಂಡರು. ದೇವಾಲಯದಿಂದ ಪಾದಗಟ್ಟೆಯ ವರೆಗೆ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಪ್ರತಿ ವರ್ಷ ಬನದ ಹುಣ್ಣಿಮೆ ದಿನ ದೇವಿಯ ರಥೋತ್ಸವ ಜರುಗುತ್ತದೆ. ರಥೋತ್ಸವದ ದಿನ ನಾಲ್ಕು ಕಡೆಯ ರಸ್ತೆಯಿಂದ ಜನಸಾಗರವೇ ಹರಿದು ಬರುತ್ತಿತ್ತು. ಸಂಭ್ರಮದಿಂದ ದೇವಿಯ ರತೋಥ್ಸವ ನಡೆಯುತ್ತಿತ್ತು. ಈ ವರ್ಷ ಅದು ಬರೀ ನೆನಪು ಮಾತ್ರ.

ಈ ಬಾರಿ ರಥೋತ್ಸವ ಇಲ್ಲದ ಕಾರಣ ದೇವಾಲಯದ ಪ್ರಾಂಗಣ, ರಥ ಬೀದಿ, ಅಂಗಡಿಗಳು, ನಾಟಕ, ಸಿನಿಮಾ ಪ್ರದರ್ಶನವಿಲ್ಲದೇ ಹಾಗೂ ಜನರಿಲ್ಲದ ರಸ್ತೆಗಳು ಬಣಗುಟ್ಟಿದವು.

ಜಾತ್ರೆ ರದ್ದಾಗಿರುವುದು ಗೊತ್ತಿಲ್ಲದೇ ಕೆಲವು ಭಕ್ತರು ಪಾದಯಾತ್ರೆ ಮತ್ತು ವಾಹನಗಳ ಮೂಲಕ ಬಂದಿದ್ದರು. ಅವರನ್ನು ಗದಗ ಬೈಪಾಸ್ ರಸ್ತೆಯಲ್ಲಿಯೇ ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿರುವುದು ಕಂಡು ಬಂತು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ಬಂದೋಬಸ್ತ್ ಕಾರ್ಯ ಕೈಗೊಂಡಿದ್ದರು.

‘ರಾಜಕೀಯ ಕಾರ್ಯಕ್ರಮಗಳಿಗೆ ಲಕ್ಷಾಂತರ ಮಂದಿ ಸೇರುತ್ತಾರೆ. ಅಲ್ಲಿ ಕೊರೊನಾ ಹಬ್ಬುವುದಿಲ್ಲವೇ? ದೇವಿಯ ರಥೋತ್ಸವ ಮಾಡಿದ್ದರೆ ಏನಾಗುತ್ತಿತ್ತು’ ಎಂದು  ಹನುಮನಾಳ ಗ್ರಾಮದ ಭಕ್ತ ಬಸವರಾಜ ಪ್ರಶ್ನಿಸಿದರು.

ಡಿವೈಎಸ್ಪಿ ಚಂದ್ರಕಾಂತ ನಂದರಡ್ಡಿ, ಸಿಪಿಐ ರಮೇಶ ಹಾನಾಪುರ, ಪಿಎಸ್ಐ ಪ್ರಕಾಶ ಬಣಕಾರ, ಎನ್.ಎಸ್. ಘಂಟಿ ಮತ್ತು ಸಿಬ್ಬಂದಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು