ಬುಧವಾರ, ಸೆಪ್ಟೆಂಬರ್ 23, 2020
27 °C
₹3 ಕೋಟಿಯಷ್ಟು ಹಾನಿ, ತಾಯಿ ನೆನಪಿಗಿದ್ದ ತಾಳಿಯೂ ಇಲ್ಲ

ಬೆಂಗಳೂರು ಗಲಭೆ: ಪೊಲೀಸರಿಗೆ ದೂರು ಕೊಟ್ಟ ಶಾಸಕ ಅಖಂಡ ಶ್ರೀನಿವಾಸಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಲಭೆ ವೇಳೆ ತಮ್ಮ ಮನೆಗೆ ಬೆಂಕಿ ಇಟ್ಟು ಸುಟ್ಟಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.

ಮಧ್ಯಾಹ್ನ ಠಾಣೆಗೆ ಬಂದಿದ್ದ ಅವರು, ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರನ್ನು ಭೇಟಿಯಾಗಿ 25 ನಿಮಿಷ ಮಾತನಾಡಿದರು. ಅಂದು ನಡೆದ ಘಟನೆ ಬಗ್ಗೆ ವಿವರಿಸಿ, ಲಿಖಿತವಾಗಿ ದೂರು ನೀಡಿದರು.

ಗಲಭೆ ನಂತರ ಶಾಸಕರು ಠಾಣೆಗೆ ಬಂದು ನೋಡಿರಲಿಲ್ಲ. ಕೇವಲ‌ ತಮ್ಮ ಮನೆಯನ್ನಷ್ಟೇ ಸುಟ್ಟ ಸ್ಥಿತಿಯಲ್ಲಿ ನೋಡಿದ್ದರು. ಶುಕ್ರವಾರ ಮಧ್ಯಾಹ್ನ ಡಿ.ಜೆ.ಹಳ್ಳಿ ಠಾಣೆಗೆ ಬಂದಾಗ ವಾಹನಗಳು ಸುಟ್ಟ ಅವಶೇಷಗಳನ್ನು ನೋಡಿ ದಂಗಾದರು. ಮನೆಗಿಂತಲೂ ಠಾಣೆಯಲ್ಲೇ ಹೆಚ್ಚು ಹಾನಿಯಾಗಿದೆಯಲ್ಲ ಎಂದು ಬೆಂಬಲಿಗರ ಜೊತೆ ಮಾತನಾಡಿದರು.

ದೂರು ನೀಡಿ ಹೊರಬಂದ ಶ್ರೀನಿವಾಸಮೂರ್ತಿ, 'ನನ್ನ ತಂದೆ ಕಟ್ಟಿದ್ದ ಹಾಗೂ ನಾನು ಆಡಿ ಬೆಳೆದ ಮನೆ ಸುಟ್ಟು ಕರಕಲಾಗಿದೆ. ತಾಯಿ ನೆನಪಿಗೆ ಇದ್ದ ತಾಳಿಯೂ ಕಾಣಿಸುತ್ತಿಲ್ಲ' ಎಂದು ಭಾವುಕರಾದರು.

'ಅಂದಾಜು ₹3 ಕೋಟಿಯಷ್ಟು ಹಾನಿಯಾಗಿದೆ. ಇಡೀ ಮನೆಯನ್ನು ಕೆಡವಬೇಕು. ತಂದೆ-ತಾಯಿ ನಮ್ಮನ್ನು ಸಾಕಿದ ಮನೆಯನ್ನು ಈ ಸ್ಥಿತಿಯಲ್ಲಿ ನೋಡಿ ದುಃಖವಾಗುತ್ತಿದೆ' ಎಂದರು.

'ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು ಹಾಗೂ ಗಲಭೆ ಸೃಷ್ಟಿಸಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಿ ಪೊಲೀಸರಿಗೆ ದೂರು‌‌ ನೀಡಿದ್ದೇನೆ' ಎಂದೂ ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು