ಗುರುವಾರ , ಅಕ್ಟೋಬರ್ 21, 2021
29 °C
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಬೇಡಿಕೆ

2ಎ ಮೀಸಲಾತಿಗೆ ಬೇಡಿಕೆ: ವಿಧಾನಸಭೆಯಲ್ಲಿ ಯತ್ನಾಳ, ಬೆಲ್ಲದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸಭೆಯಲ್ಲಿ ಬಸನಗೌಡ ಪಾಟೀಲ ಯತ್ನಾಳ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನದಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಹಾಗೂ ಅರವಿಂದ ಬೆಲ್ಲದ ವಿಧಾನಸಭೆಯಲ್ಲಿ ಗುರುವಾರ ಧರಣಿ ನಡೆಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಯತ್ನಾಳ, ‘ರಾಜ್ಯದ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವುದು, ಎಸ್‌ಟಿ ಮೀಸಲಾತಿಯನ್ನು ಶೇ 3ರಿಂದ 7.5ಕ್ಕೆ ಹೆಚ್ಚಿಸಿ ವಾಲ್ಮೀಕಿ ಜನಾಂಗ ಹಾಗೂ ಉಪ್ಪಾರ ಸಮಾಜ ಮತ್ತು ಇನ್ನಿತರ ಎಸ್‌ಟಿ ಜನಾಂಗಕ್ಕೆ ಅನುಕೂಲ ಮಾಡಿಕೊಡುವುದಾಗಿ ಆರು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಸರ್ಕಾರ ಭರವಸೆ ನೀಡಿತ್ತು. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗ 2 ಎ ಸೇರಿಸಲು ಆರು ತಿಂಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದರು. ಸರ್ಕಾರಕ್ಕೆ ನೀಡಿದ್ದ ಸೆಪ್ಟೆಂಬರ್‌ 15ರ ಗಡುವು ಮುಗಿದಿದೆ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಲೆ ಮಹದೇಶ್ವರ ಬೆಟ್ಟದಿಂದ ಐದನೇ ಹಂತದ ಚಳವಳಿ ಆರಂಭವಾಗಿದೆ’ ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ವಿಧಾನ ಪರಿಷತ್‌ನಲ್ಲಿ ಇದ್ದಾರೆ. ಅವರು ಬಂದ ನಂತರ ಉತ್ತರ ಕೊಡಿಸಲಾಗುವುದು’ ಎಂದರು. ಈ ಮಾತಿನಿಂದ ಯತ್ನಾಳ ಸಮಾಧಾನಗೊಳ್ಳಲಿಲ್ಲ. ಯಾವಾಗ ಉತ್ತರ ಕೊಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಯತ್ನಾಳ ಒತ್ತಾಯಿಸಿದರು. ಮುಖ್ಯಮಂತ್ರಿ ಬಂದ ಮೇಲೆ ಉತ್ತರ ಕೊಡುತ್ತಾರೆ ಎಂದು ಸಭಾಧ್ಯಕ್ಷರು ಸಮಾಧಾನಿಸಿದರು. ‘ಮೀಸಲಾತಿ ನೀಡದ ಕಾರಣ ಸಮಾಜದಲ್ಲಿ ಬಹಳ ಅಸಮಾಧಾನ ಉಂಟಾಗಿದೆ’ ಎಂದು ಅರವಿಂದ ಬೆಲ್ಲದ ಹೇಳಿದರು.

ಉತ್ತರ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಯತ್ನಾಳ ಹಾಗೂ ಬೆಲ್ಲದ ಅವರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಮುಖ್ಯಮಂತ್ರಿಯವರು ಉತ್ತರ ನೀಡುತ್ತಾರೆ ಎಂದು ಹೇಳಿದ ಬಳಿಕವೂ ಆಡಳಿತ ಪಕ್ಷದವರೇ ಧರಣಿ ನಡೆಸುವುದು ಸರಿಯಲ್ಲ’ ಎಂದು ಕಿವಿಮಾತು ಹೇಳಿದರು.

ಕಾಗೇರಿ, ‘ಮುಖ್ಯಮಂತ್ರಿ ಪರಿಷತ್‌ಗೆ ಹೋಗಿದ್ದಾರೆ ಅಷ್ಟೇ, ವಿದೇಶಕ್ಕೇನೂ ಹೋಗಿಲ್ಲ. ಧರಣಿ ಕೈಬಿಡಿ’ ಎಂದರು. ಬಳಿಕ ಸದಸ್ಯರಿಬ್ಬರು ಧರಣಿ ಕೈಬಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು