ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಬದಲಾಯಿಸದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ: ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗು–ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ
Last Updated 5 ಜುಲೈ 2021, 20:39 IST
ಅಕ್ಷರ ಗಾತ್ರ

ಮೈಸೂರು: ‘ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸದಿದ್ದರೆ ರಾಜ್ಯದಲ್ಲಿ ಪಕ್ಷಕ್ಕೆ ಉಳಿಗಾಲವಿರಲ್ಲ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಇಲ್ಲಿ ಗುಡುಗಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ. ಅವರ ಆಡಳಿತದ ವಿರುದ್ಧ ಗಂಭೀರ ಆಪಾದನೆ ಕೇಳಿಬಂದಿವೆ. ಹೈಕಮಾಂಡ್‌ ಎಲ್ಲವನ್ನೂ ಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಬದಲಾವಣೆ ನಿಶ್ಚಿತ’ ಎಂದರು.

‘ಮಹಾಭಾರತದಲ್ಲಿ ಕೌರವರಿಗೆ ಭೀಷ್ಮ, ದ್ರೋಣಾಚಾರ್ಯರ ಬೆಂಬಲ ಸಿಕ್ಕಿದಂತೆ ನಮ್ಮಲ್ಲೂ ಈ ಲೂಟಿಕೋರರಿಗೆ ಕೆಲವರ ಬೆಂಬಲವಿದೆ. ಕೊನೆಗೆ ಧರ್ಮವೇ ಗೆಲ್ಲಲಿದೆ. ರಾಜ್ಯವನ್ನು ಲೂಟಿ ಮಾಡುತ್ತಿರುವ ದುಷ್ಟರು, ಭ್ರಷ್ಟರನ್ನು ಸಂಹರಿಸು ತಾಯಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿಕೊಂಡಿರುವೆ’ ಎಂದು ತಿಳಿಸಿದರು.

‘ಲೂಟಿ ನಡೆಯುತ್ತಿದ್ದರೂ ವಿರೋಧಪಕ್ಷದವರು ತುಟಿ ಬಿಚ್ಚುತ್ತಿಲ್ಲ. ತಮ್ಮ ಪಾವಿತ್ರ್ಯವನ್ನೇ ಕಳೆದುಕೊಂಡಿದ್ದಾರೆ. ಕೆಲವರು ಲೂಟಿಕೋರರ ಬ್ಯುಸಿನೆಸ್‌ ಪಾರ್ಟನರ್‌ಗಳಾಗಿದ್ದಾರೆ’ ಎಂದು ಆರೋಪಿಸಿದರು.

ಪುತ್ರನಿಗೆ ನಾಯಕತ್ವ– ನಾಶ: ‘ಲಿಂಗಾಯತರಲ್ಲಿ ಪರ್ಯಾಯ ನಾಯಕರು ಅನೇಕರಿದ್ದಾರೆ. ಆದರೆ, ತಮ್ಮ ಪುತ್ರನ ರಾಜಕೀಯಕ್ಕಾಗಿ ಯಡಿಯೂರಪ್ಪ, ಬಿಜೆಪಿಗೆ ಈ ನಾಯಕತ್ವವನ್ನೇ ನಾಶಗೊಳಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸ್ವಾಮೀಜಿಗಳ ವಿರುದ್ಧ ವಾಗ್ದಾಳಿ: ‘ಕೆಲ ಮಠಾಧೀಶರು ದಕ್ಷಿಣೆ ಕಾಸಿನ ಆಸೆಗೆ ಬಿದ್ದು ಯಡಿಯೂರಪ್ಪ ಪರ ಮಾತನಾಡುತ್ತಿದ್ದಾರೆ. ಮಠಾಧೀಶರ ಕೆಲಸ ಏನು? ಮತಾಂತರ ತಡೆಯಲಿ, ಲವ್‌ ಜಿಹಾದ್‌ ತಡೆಗಟ್ಟಲಿ, ಗೋಶಾಲೆ ತೆರೆಯಲಿ. ಅದನ್ನು ಬಿಟ್ಟು ಭ್ರಷ್ಟರನ್ನು ಬೆಂಬಲಿಸಿ ಬೀದಿಗಿಳಿಯುತ್ತೇವೆ ಎನ್ನುವುದು ಸರಿಯೇ’ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಬೆಂಬಲಿಸುತ್ತಿರುವ ಸ್ವಾಮೀಜಿಗಳ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪ ಲಿಂಗಾಯತರ ನಾಯಕತ್ವವನ್ನಷ್ಟೇ ನಾಶ ಮಾಡಿಲ್ಲ; ವಾಲ್ಮೀಕಿ, ಕುರುಬರ ನಾಯಕತ್ವವನ್ನೂ ಹಾಳು ಮಾಡಿದ್ದಾರೆ. ಶ್ರೀರಾಮುಲು ಆಪ್ತ ಸಹಾಯಕನನ್ನು ಬಂಧಿಸಿದ್ದರ ಹಿಂದೆ ವಿಜಯೇಂದ್ರನ ಯಾವ ಮರ್ಮವಿದೆ? ಸಿಸಿಬಿ ಪೊಲೀಸರು ಮುಖ್ಯಮಂತ್ರಿಯ ಅಧಿಕೃತ ನಿವಾಸ ‘ಕಾವೇರಿ’ ಹಿಂದಿರುವ ಗೆಸ್ಟ್‌ಹೌಸ್‌ ಮೇಲೆ ರೇಡ್‌ ಮಾಡಲಿ. ಅಲ್ಲಿಯೇ ಕೋಟಿ ಕೋಟಿ ಡೀಲ್‌ ನಡೆಯೋದು’ ಎಂದು ಆಪಾದಿಸಿದರು.

ಸುತ್ತೂರು ಮಠಕ್ಕೆ ಹೋಗಲ್ಲ: ‘ನಾನು ಸುತ್ತೂರು ಮಠಕ್ಕೆ ಹೋಗಲ್ಲ. ಮಠ ಈಚೆಗೆ ರಾಜಕೀಯ ಶಕ್ತಿ ಕೇಂದ್ರ ಎನ್ನಿಸಿಕೊಳ್ಳುತ್ತಿದೆ. ಎಲ್ಲಾ ರಾಜಕೀಯ ನಾಯಕರು ಮಠಕ್ಕೆ ಹೋಗುವುದರಿಂದ ಜನರಲ್ಲಿ ಈ ಭಾವನೆ ಬಂದಿದೆ. ನಾನು ಎಂದೂ ಮಠವನ್ನು ರಾಜಕೀಯಕ್ಕೆ ಬಳಸಿಕೊಂಡಿಲ್ಲ’ ಎಂದು ಹೇಳಿದರು.

‘ವಯಸ್ಸಾಗಿದೆ; ಅಸಮಾಧಾನವಿದೆ’
‘ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮೆಲ್ಲರ ಪ್ರಶ್ನಾತೀತ ನಾಯಕ. ಅವರಿಗೆ ವಯಸ್ಸಾಗಿದೆ. ಕೋವಿಡ್‌ ನಿರ್ವಹಣೆಯಲ್ಲಿ ಎಡವಿದ್ದಾರೆ. ಈ ಬಗ್ಗೆ ಜನರಿಗೆ ಅಸಮಾಧಾನವೂ ಇದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬಿಜೆಪಿಯ ವರಿಷ್ಠರು ಬದಲಿಸುವುದೇ ಆದರೆ; ಉತ್ತರ ಕರ್ನಾಟಕದ ಲಿಂಗಾಯತರಿಗೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು. ‘ಲಿಂಗಾಯತರಲ್ಲಿ ಪರ್ಯಾಯ ನಾಯಕರಿಲ್ಲ ಎಂಬುದು ಸರಿಯಲ್ಲ. ಮೋದಿ ಅವರ ಮನಸ್ಸು ಗೆದ್ದವರೊಬ್ಬರು ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

*
ರಾಜ್ಯದ ಜನರಿಗೆ ಕೋವಿಡ್‌ ಲಸಿಕೆಯ ಎರಡು ಡೋಸ್‌ಡುವ ಕಾರ್ಯ ಪೂರ್ಣಗೊಳ್ಳುವವರೆಗೆ ಜಿ.ಪಂ ಹಾಗೂ ತಾ.ಪಂ ಚುನಾವಣೆ ನಡೆಸುವುದು ಬೇಡ.
-ಬಸನಗೌಡ ಪಾಟೀಲ ಯತ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT