ಸೋಮವಾರ, ಏಪ್ರಿಲ್ 12, 2021
31 °C
ಸರ್ಕಾರದ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ

ಸಾರಿಗೆ ನೌಕರರ ಕಷ್ಟ ಬಿಜೆಪಿಗೆ ಗೊತ್ತಾಗುತ್ತಿಲ್ಲ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ (ಬೀದರ್‌ ಜಿಲ್ಲೆ): ‘ಬಿಜೆಪಿ ಮುಖಂಡರ ಚಿಂತನೆಗಳೇ ಬೇರೆ ಇವೆ. ಅವರಿಗೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಬೇಕಾಗಿಲ್ಲ. ಹೀಗಾಗಿ ಸಾರಿಗೆ ನೌಕರರ ಕಷ್ಟ ಬಿಜೆಪಿಗೆ ಗೊತ್ತಾಗುತ್ತಿಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಕುತಂತ್ರದ ಮೂಲಕ ಹಣ ಉಪಯೋಗ ಮಾಡಿ ಸರ್ಕಾರ ರಚಿಸಿದರು. ಈಗ ಆ ಹಣ ಹೇಗೆ ಸಂಪಾದನೆ ಮಾಡಬೇಕು, ಕಿಸೆ ತುಂಬಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿದ್ದಾರೆ’ ಎಂದು ಮುಖಂಡರ ಹೆಸರು ಪ್ರಸ್ತಾಪ ಮಾಡದೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಎದುರು ಅಸಮಾಧಾನ ಹೊರಹಾಕಿದರು.

‘ನಾನು 14 ತಿಂಗಳು ಮೈತ್ರಿ ಸರ್ಕಾರದ ನಾಯಕತ್ವ ವಹಿಸಿದ್ದಾಗ ಯಾರೂ ಬೀದಿಗೆ ಇಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿಲ್ಲ. 2018 ಹಾಗೂ 2006ರಲ್ಲಿ ಇಂತಹ ಪ್ರತಿಭಟನೆಗಳು ನಡೆದಿಲ್ಲ. ಅದಕ್ಕೆ ನಾನು ಅವಕಾಶವನ್ನೂ ಕೊಟ್ಟಿರಲಿಲ್ಲ’ ಎಂದು ಹೇಳಿದರು.

‘ಮೈತ್ರಿ ಸರ್ಕಾರದ ಅವಧಿಯಲ್ಲಿ ಸಮಸ್ಯೆ ಉದ್ಭವಿಸಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಮಸ್ಯೆ ಉದ್ಭವವಾಗಿದೆ. ಅದನ್ನು ಅವರೇ ಬಗೆಹರಿಸಬೇಕು. ಯೋಚನೆ ಮಾಡಿ ತೀರ್ಮಾನ ಕೈಗೊಳ್ಳಬೇಕು. ಅದನ್ನು ಬಿಟ್ಟು ಹಿಂದಿನ ಸರ್ಕಾರದ ಬಗ್ಗೆ ಮಾತನಾಡುವುದು ಸರಿಯಲ್ಲ. ಮಾಹಿತಿ ತರಿಸಿಕೊಂಡು ಲಕ್ಷ್ಮಣ ಸವದಿ ಮಾತನಾಡುವುದು ಸೂಕ್ತ’ ಎಂದರು.

‘ಬಿಜೆಪಿಯವರು ಅಭಿವೃದ್ಧಿಯಿಂದ ಜಯ ಸಾಧಿಸಿಲ್ಲ. ವೈಯಕ್ತಿಕವಾಗಿ ಹಣ ಲೂಟಿ ಮಾಡಿ ಅಭಿವೃದ್ಧಿ ಕಂಡಿದ್ದಾರೆ. ಹಣ ಚೆಲ್ಲಿ ಚುನಾವಣೆಯಲ್ಲಿ ಗೆಲ್ಲಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಜನರನ್ನು ಹಣದಿಂದ ಸದಾ ಕಾಲ ಮರಳು ಮಾಡಲು ಸಾಧ್ಯವಿಲ್ಲ’ ಎಂದರು ಹೇಳಿದರು.

‘ದೇವೇಗೌಡರು ಉತ್ತರ ಕರ್ನಾಟಕಕ್ಕೆ ಕಲ್ಪಿಸಿದ ನೀರಾವರಿ ಯೋಜನೆ ಹಾಗೂ ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟಿರುವ ಯೋಜನೆಗಳನ್ನು ಜನ ಮರೆತಿಲ್ಲ. ಮುಸ್ಲಿಮರಿಗೆ ಶೇಕಡ 4 ರಷ್ಟು ಮೀಸಲಾತಿ ಕೊಡಲಾಗಿತ್ತು. ಒಟ್ಟಾರೆಯಾಗಿ ಮತದಾರರು ನಮ್ಮ ಪರವಾಗಿದ್ದಾರೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು