ಭಾನುವಾರ, ಸೆಪ್ಟೆಂಬರ್ 19, 2021
23 °C
ಸುದ್ದಿ ವಿಶ್ಲೇಷಣೆ

ಖಾತೆ ಹಂಚಿಕೆ: ಸಂಘನಿಷ್ಠರ ಅದೃಷ್ಟ- ವಲಸಿಗರೂ ಇಷ್ಟ

ವೈ.ಗ. ಜಗದೀಶ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಅಂಟಿದ್ದ ಕಳಂಕ ತೊಳೆಯಲು ಮುಂದಾಗಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡುವಾಗ ಎಚ್ಚರದ ಹೆಜ್ಜೆ ಇಟ್ಟಿದ್ದಾರೆ.

ವರಿಷ್ಠರ ನಿರ್ದೇಶನದಂತೆ ಜಾಣ್ಮೆ ಯಿಂದ ಖಾತೆ ಹಂಚಿಕೆ ನಿರ್ವಹಿ ಸಿರುವ ಸಿ.ಎಂ ಅವರ ಈ ನಡೆಯಿಂದಾಗಿ ಸಂಘ ಪರಿವಾರದ ನಿಷ್ಠರಿಗೆ ಪ್ರಮುಖ ಖಾತೆಯ ಅದೃಷ್ಟ ಒದಗಿದೆ. ‘ವಲಸಿಗ’ರ ಮೇಲಿನ ‘ಇಷ್ಟ’ವನ್ನೂ ಬಿಡದೇ ನಾಜೂಕಿನ ನಡಿಗೆ ಇಟ್ಟಿದ್ದಾರೆ. ಇಲ್ಲಿ, ಯಡಿಯೂರಪ್ಪ ಸರ್ಕಾರದ ‘ಛಾಯೆ’ ಕಳೆದು, ಸರ್ಕಾರಕ್ಕೆ ವರ್ಚಸ್ಸು ಕೊಡುವ ಯತ್ನ ಕಾಣಬಹುದು. ಭ್ರಷ್ಟಾಚಾರದ ಹಿಡಿತ ಸಡಿಲಿಸಿ, ಸಹೋದ್ಯೋಗಿಗಳ ಬೀಸುನಡೆಗೆ ಕಡಿವಾಣ ಒಡ್ಡುವಲ್ಲಿ ಯಶಸ್ವಿಯಾಗುತ್ತಾರಾ ಎಂದು ಕಾದು ನೋಡಬೇಕು. ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕರು ಯಡಿಯೂರಪ್ಪ ನವರ ಬೆನ್ನಿಗೆ ನಿಂತವರೇ. ತಮ್ಮ ನಾಯಕ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ, ಪಕ್ಷನಿಷ್ಠೆ ತೋರಿದವರು. ಕಾರಜೋಳರಿಗೆ ಆಯಕಟ್ಟಿನ ಜಲಸಂಪನ್ಮೂಲ ಖಾತೆ, ಹಿರೀಕರಾದರೂ ಇಲ್ಲಿಯವರೆಗೆ ಪ್ರಬಲ ಖಾತೆ ಕಾಣದಿದ್ದ ಸಿ.ಸಿ.ಪಾಟೀಲರು ಮತ್ತು ಮುರುಗೇಶ ನಿರಾಣಿ ಅವರಿಗೆ ಪ್ರಮುಖ ಖಾತೆ ನೀಡಿದ್ದು, ಪಂಚಮಸಾಲಿ ಸಮುದಾಯದವರಿಗೆ ಎರಡು ಪ್ರಮುಖ ಖಾತೆ ನೀಡಲಾಗಿದೆ ಎಂಬ ಸಂದೇಶವನ್ನು ರವಾನಿಸಿದಂತಿದೆ.

ಉಪಮುಖ್ಯಮಂತ್ರಿ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದ ಬಿ.ಶ್ರೀರಾಮುಲು ಅವರಿಗೆ ಸಾರಿಗೆ ಜತೆಗೆ, ಹೊಸದಾಗಿ ಸೃಷ್ಟಿಸಲಾಗಿರುವ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವಾಲಯದ ಜವಾಬ್ದಾರಿ ವಹಿಸಲಾಗಿದೆ. ಅದೃಷ್ಟದ ಬೆನ್ನೇರಿಯೇ ಸಿ.ಎಂ ಆಗಿರುವ ಬೊಮ್ಮಾಯಿ ಸಂಘ ನಿಷ್ಠರಿಗೆ ಅದೇ ಅವಕಾಶ ಕಲ್ಪಿಸಿದ್ದಾರೆ. ಮೊದಲ ಬಾರಿಗೆ ಸಚಿವರಾದ ಆರಗ ಜ್ಞಾನೇಂದ್ರರಿಗೆ ಗೃಹ, ಸುನೀಲ್‌ ಕುಮಾರ್‌ಗೆ ಇಂಧನದಂತಹ ಮಹತ್ವದ ಖಾತೆಗಳು ಲಭಿಸಿವೆ. ಸಚಿವರಾಗಿ ಅನುಭವ ಇಲ್ಲದಿದ್ದರೂ ಶಾಸಕರಾಗಿ ಹಿರೀಕರಾದ ಆರಗ ಜ್ಞಾನೇಂದ್ರ ಅವರಿಗೆ ಗೃಹ ಖಾತೆ ಸಿಗಲು ‘ಸಂಘ ನಿಷ್ಠೆ’ಯೇ ಪ್ರಮುಖ ಕಾರಣ. ಸುನೀಲ್ ಕುಮಾರ್‌ಗೆ ಕನ್ನಡ ಸಂಸ್ಕೃತಿಯ ಜತೆಗೆ ಇಂಧನದಂತಹ ಪ್ರಮುಖ ಹೊಣೆ ನೀಡಿರುವುದು ಹೊಸ ತಲೆಮಾರನ್ನು ಮುನ್ನೆಲೆಗೆ ತರುವ ಯತ್ನದ ಭಾಗ. ಸಂಘದ ಸಿದ್ಧಾಂತವನ್ನೇ ನೆಚ್ಚಿಕೊಂಡಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಮಾಜ ಕಲ್ಯಾಣ, ಹಿಂದುಳಿದವರ ಕಲ್ಯಾಣದ ಗುರುತರ ಹೊಣೆ ಸಿಕ್ಕಿದೆ. ಇದೇ ಮಾದರಿಯ ಮತ್ತೊಬ್ಬ ವ್ಯಕ್ತಿ ಬಿ.ಸಿ.ನಾಗೇಶ್‌ಗೂ ಅದೇ ಕಾರಣಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಹುಡುಕಿಕೊಂಡು ಬಂದಿದೆ. ಹಿರಿತನದ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿಯಂತಹ ದೊಡ್ಡ ಖಾತೆ ಮತ್ತೆ ಅವರ ಹೆಗಲೇರಿದೆ.

ವಲಸಿಗರೂ ಇಷ್ಟ: ಬಿಜೆಪಿ ಸೇರಿ, ಸಚಿವರಾದವರಲ್ಲಿ ಬಹುತೇಕರ ಖಾತೆ ಬದಲಾಗಿಲ್ಲ. ಮಾತುಕೊಟ್ಟಂತೆ ಸಚಿವ ರಾಗಿ  ಮುಂದುವರಿಸಿದ್ದು, ಖಾತೆಯನ್ನು ಉಳಿಸಲಾಗಿದೆ. ಪಕ್ಷ ನಿಷ್ಠೆ, ಸಮರ್ಪಕ ಕಾರ್ಯನಿರ್ವಹಣೆ ಇಲ್ಲದಿದ್ದರೆ ಅದಕ್ಕೂ ಮುಳುವಾಗಬಹುದು ಎಂಬ ಸಂದೇ ಶವನ್ನೂ ಅವರಿಗೆ ರವಾನಿ ಸಿದಂತಿದೆ.

ಜೊಲ್ಲೆಗೆ ಹಿನ್ನಡೆ: ಭ್ರಷ್ಟಾಚಾರದ ಆರೋಪ ಸಹಿಸಲಾಗದು ಎಂಬ ಸಂದೇಶವನ್ನು ಶಶಿಕಲಾ ಜೊಲ್ಲೆ ಅವರ ಖಾತೆ ಬದಲಾವಣೆ ಮೂಲಕ ನೀಡಿರುವಂತಿದೆ. ಬಿ.ಎಲ್.ಸಂತೋಷ್ ಪ್ರಭಾವ ಬಳಸಿ ಸಂಪುಟ ಸೇರಿದ್ದ ಜೊಲ್ಲೆ ಅವರಿಗೆ ಹಳೆಯ ಖಾತೆ ಸಿಕ್ಕಿಲ್ಲ. ಎಷ್ಟೇ ಪ್ರಭಾವವಿದ್ದರೂ ಆರೋಪ ಬಂದರೆ ಹಿಂಬಡ್ತಿ ಖಚಿತ ಎಂಬ ಸೂಕ್ಷ್ಮ ಎಚ್ಚರಿಕೆಯನ್ನು ಮುಖ್ಯಮಂತ್ರಿ ಕೊಟ್ಟಂತಿದೆ.

ನಿರಾಣಿ– ಸಿಂಗ್ ಹಿತಾಸಕ್ತಿ ಸಂಘರ್ಷ?

ಉದ್ಯಮಿ ಮುರುಗೇಶ ನಿರಾಣಿ ಅವರಿಗೆ ಬೃಹತ್ ಕೈಗಾರಿಕೆ, ಪರಿಸರ ನಿಯಮಗಳ ಉಲ್ಲಂಘನೆ ವ್ಯಾಜ್ಯ ಎದುರಿಸುತ್ತಿದ್ದ ಆನಂದ್ ಸಿಂಗ್ ಅವರಿಗೆ ಪರಿಸರ ಇಲಾಖೆ ಹೊಣೆ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಉದ್ಯಮಿಗೆ ಕೈಗಾರಿಕೆ ಖಾತೆ ನೀಡಿದರೆ ಹಿತಾಸಕ್ತಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ. ಸ್ವಂತ ಹಿತಾಸಕ್ತಿಯೇ ಆದ್ಯತೆಯಾದರೆ ಎಷ್ಟು ಸರಿ ಎಂಬ ವಾದವು ಈಗ ಮುನ್ನೆಲೆಗೆ ಬಂದಿದೆ. ಗಣಿ ಉದ್ಯಮಿಯೂ ಆದ ಆನಂದ್ ಸಿಂಗ್‌ ಮೇಲೆ, ಹಿಂದೆ ಅಕ್ರಮ ಗಣಿಗಾರಿಕೆಯ ಆಪಾದನೆಗಳಿದ್ದವು.  ಅವರಿಗೆ ಈ ಖಾತೆ ನೀಡಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಬಿಎಸ್‌ವೈಗೆ ಸಂಪುಟ ದರ್ಜೆ ಸ್ಥಾನಮಾನ

ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿಸಿರುವುದು ಚರ್ಚೆಯ ಮುನ್ನೆಲೆಗೆ ಬಂದಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇರುವವರೆಗೆ ಯಡಿಯೂರಪ್ಪ ಅವರಿಗೆ ಈ ಸೌಲಭ್ಯ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

***

ಸಚಿವ ಸ್ಥಾನ ಸಿಗದಿರುವುದು ಮತ್ತು ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಎಲ್ಲರ ಜತೆಗೂ ಚರ್ಚಿಸಿ ಮನವೊಲಿಸಲಾಗುವುದು

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

***

ನಾನು ಕೇಳಿದ್ದ ಖಾತೆ ಸಿಗಬಹುದೆಂಬ ಉತ್ಸಾಹದಲ್ಲಿದ್ದೆ. ಹಾಗಾಗಿಲ್ಲ. ಸಿ.ಎಂ ಭೇಟಿ ಮಾಡಿ ಮನವಿ ಮಾಡುತ್ತೇನೆ. ಸ್ಪಂದಿಸದಿದ್ದರೆ ಬರೀ ಶಾಸಕನಾಗಿ ಉಳಿಯುವ ಬಗ್ಗೆ ಚಿಂತಿಸಲಾಗುವುದು

-ಆನಂದ್ ಸಿಂಗ್, ಸಚಿವ

***

ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಖಾತೆ ಹಂಚಿಕೆ ಕುರಿತು ಅಸಮಾಧಾನವಿದೆ. 2–3 ದಿನಗಳಲ್ಲಿ ನಿರ್ಧಾರ ತಿಳಿಸುವೆ

-ಎಂ.ಟಿ.ಬಿ. ನಾಗರಾಜ್‌, ಪೌರಾಡಳಿತ, ಸಣ್ಣ ಕೈಗಾರಿಕೆ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು