ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲು–ಮಳೆ ಸಿಂಚನದ ಮಧ್ಯೆ ಸಚಿವರ ಪ್ರಮಾಣ

ರಂಗು ರಂಗಾಗಿ ಬಂದ ಸಚಿವರ ಕುಟುಂಬದ ಸದಸ್ಯರು * ಮೊಳಗಿದ ಜೈಶ್ರೀರಾಮ್‌ ಘೋಷಣೆ
Last Updated 4 ಆಗಸ್ಟ್ 2021, 19:20 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ತುಸು ಬಿಸಿಲು, ಮೋಡ ಮತ್ತು ತುಂತುರು ಮಳೆಯ ಸಿಂಚನದ ಆಟ. ಮತ್ತೊಂದೆಡೆ ಬಿಜೆಪಿ ಸರ್ಕಾರದ ನೂತನ ಸಚಿವರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಮುನ್ನ ಮತ್ತು ಬಳಿಕ ಆ ಪಕ್ಷದಲ್ಲೂ ‘ಮೋಡ ಕವಿದ’ ವಾತಾವರಣವೇ ಇತ್ತು. ಸಚಿವ ಸ್ಥಾನ ಸಿಕ್ಕವರು ಸಂತಸದಲ್ಲಿ ತೇಲಾಡಿದರೆ, ಸಿಗದವರು ಗುಡುಗಿದರು, ಇನ್ನು ಕೆಲವರು ಗದ್ಗದಿತರಾಗಿ ಕಣ್ಣೀರು ಹಾಕಿದರು.

ಪ್ರಮಾಣ ಸ್ವೀಕಾರ ಕಾರ್ಯಕ್ರಮಕ್ಕೆಂದು ರಾಜಭವನದ ಸುಂದರ ಗಾಜಿನ ಮನೆಯನ್ನು ಬಗೆ– ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಸಂಪುಟದಲ್ಲಿ ಸ್ಥಾನಗಿಟ್ಟಿಸಿದವರು ನಗುಮೊಗದಿಂದ ಗರಿಗರಿ ಬಟ್ಟೆ ತೊಟ್ಟು ರಾಜಭವನಕ್ಕೆ ಅಡಿ ಇಟ್ಟರೆ, ಸ್ಥಾನ ಸಿಗದವರು ಅತ್ತ ಸುಳಿಯಲೇ ಇಲ್ಲ. ಬದಲಿಗೆ ಮಾಧ್ಯಮಗಳ ಮುಂದೆ ತಮಗೆ ಘೋರ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು. ಇನ್ನು ಕೆಲವು ಶಾಸಕರ ಬೆಂಬಲಿಗರು ಪ್ರತಿಭಟನೆ ಮೂಲಕ ಆಕ್ರೋಶ ಹೊರ ಹಾಕಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಅವರು ಮಧ್ಯಾಹ್ನ 2.15 ಕ್ಕೆ ಸರಿಯಾಗಿ ನೂತನ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸುಮಾರು 75 ನಿಮಿಷಗಳ ಕಾಲ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಲಬುರ್ಗಿ ಸಂಸದ ಡಾ. ಉಮೇಶ ಜಾಧವ್‌ ಮತ್ತಿತರರು ಇದ್ದರು. 29 ಶಾಸಕರ ಸೇರ್ಪಡೆಯೊಂದಿಗೆ ಬೊಮ್ಮಾಯಿ ನೇತೃತ್ವದ ಸಂಪುಟ ಬಲ 30 ಕ್ಕೇರಿದಂತಾಗಿದೆ.

ರಂಗು ರಂಗಾಗಿ ಬಂದ ಶಾಸಕರು: ಸಚಿವರಾಗಿ ಪ್ರಮಾಣ ಸ್ವೀಕರಿಸಲು ಬಂದ ಬಹುತೇಕ ಶಾಸಕರ ಕೊರಳನ್ನು ಕೇಸರಿ ಶಾಲುಗಳು ಅಲಂಕರಿಸಿದ್ದರೆ, ಕೆಲವರು ಕೇಸರಿ ಬಣ್ಣದ ಓವರ್‌ ಕೋಟ್‌ ಮತ್ತು ಅಂಗಿ ತೊಟ್ಟು ಸಿದ್ಧಾಂತದ ಬಣ್ಣಕ್ಕೆ ನಿಷ್ಠೆಯನ್ನು ಪ್ರದರ್ಶಿಸಿದರು. ಪ್ರಭು ಚವ್ಹಾಣ್‌ ಅವರು ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆ ತೊಟ್ಟು ವಿಭಿನ್ನವಾಗಿ ಕಾಣಿಸಿಕೊಂಡರು. ಮಾಧ್ಯಮಗಳ ಮುಂದೆ ಅವರು ಗೋಮಾತೆಯ ನಾಮ ಜಪಿಸುತ್ತಿದ್ದುದು ಕಂಡು ಬಂದಿತು. ಶಶಿಕಲಾ ಜೊಲ್ಲೆ ಸಂಪುಟ ಸೇರಿದ ಏಕೈಕ ಮಹಿಳೆ.

ಯಡಿಯೂರಪ್ಪ ಕೇಂದ್ರ ಬಿಂದು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಜತೆ ರಾಜಭವನಕ್ಕೆ ಬಂದರು. ಸಚಿವ ಸ್ಥಾನ ಗಿಟ್ಟಿಸಿದವರಲ್ಲಿ ಬಹುತೇಕರು ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಯಡಿಯೂರಪ್ಪ ಆಸನದಲ್ಲಿ ಕುಳಿತುಕೊಳ್ಳಲು ಹೋಗುತ್ತಿದ್ದಂತೆ ಕೆ.ಎಸ್‌.ಈಶ್ವರಪ್ಪ ಅವರು ಮಾತನಾಡಿಸಲು ಹೋದರು. ಆದರೆ ಯಡಿಯೂರಪ್ಪ ಕೈಯಿಂದ ಸರಿಸಿ ಮಾತನಾಡದೇ ಮುಂದೆ ಹೋದರು. ಆದರೂ ಪ್ರಯತ್ನ ಬಿಡದ ಈಶ್ವರಪ್ಪ ತಮ್ಮ ಹಳೇ ಗೆಳೆಯ ಕುಳಿತಲ್ಲಿ ಹೋಗಿ ನಗುತ್ತಾ ಮಾತನಾಡಿಸಿ ಕೈ ಮುಗಿದರು. ಕಳೆದ ಸರ್ಕಾರದ ಅವಧಿಯಲ್ಲಿ ಇವರಿಬ್ಬರು ಪರಸ್ಪರ ಮಾತನಾಡುವುದನ್ನೇ ಬಿಟ್ಟಿದ್ದರು.

ಬೊಮ್ಮಾಯಿ ಕಾಲಿಗೆ ಬಿದ್ದ ಮುನಿರತ್ನ: ವಲಸಿಗರಾಗಿ ಬಿಜೆಪಿಗೆ ಬಂದ ಮುನಿರತ್ನ ಅವರು ಮುಖ್ಯಮಂತ್ರಿಯವರ ಕಾಲು ಮುಟ್ಟಿ ನಮಸ್ಕರಿಸಿದರು. ಪ್ರಮಾಣ ವಚನಸ್ವೀಕರಿಸಿದ ಬಳಿಕ ಬೊಮ್ಮಾಯಿಯಿಂದ ಹೂ ಗುಚ್ಛ ಪಡೆದ ಅವರು ನಂತರ ಕಾಲು ಮುಟ್ಟಿ ನಮಸ್ಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT